ಪಿಎಸ್‌ಐ ಶ್ರೀಕಲಾ, ಪೊಲೀಸ್ ಕಾನ್‌ಸ್ಟೇಬಲ್ ಅಮಾನತು
ಮಂಗಳೂರು, ಎ. 11: ಜಾತಿ ನಿಂದನೆ ಹಾಗೂ ಹಲ್ಲೆ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಣಾಜೆ ಪೊಲೀಸ್ ಠಾಣೆಯ ಅಪರಾಧ ವಿಭಾಗದ ಪಿಎಸ್‌ಐ ಶ್ರೀಕಲಾ ಮತ್ತು ಪೊಲೀಸ್ ಕಾನ್‌ಸ್ಟೇಬಲ್ ರಾಜೇಶ್‌ರನ್ನು ಅಮಾನತುಗೊಳಿಸಿ ನಗರ ಪೊಲೀಸ್ ಆಯುಕ್ತ ಎಂ. ಚಂದ್ರಶೇಖರ್ ಆದೇಶ ಹೊರಡಿಸಿದ್ದಾರೆ.
ಜಾತಿ ನಿಂದನೆ ಸಂಬಂಧಿಸಿದಂತೆ ರುಕ್ಮಯ ಎಂಬವರು ದೂರು ನೀಡಿದ್ದ ಹಿನ್ನೆಲೆಯಲ್ಲಿ ಅಮಾನತುಗೊಳಿಸಲಾಗಿದೆ. ಮುಡಿಪು ಕಾಲೇಜು ಸಮೀಪದ ತರಕಾರಿ ಅಂಗಡಿಯೊಂದರಲ್ಲಿ ಗಾಂಜಾ ಹಾಗೂ ಮಾದಕ ವ್ಯಸನಗಳನ್ನು ಮಾರಾಟ ಮಾಡುತ್ತಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಪಿಎಸ್‌ಐ ಶ್ರೀಕಲಾ ಹಾಗೂ ಕಾನ್‌ಸ್ಟೇಬಲ್ ರಾಜೇಶ್ ಅವರು ದಾಳಿ ಮಾಡಿದ್ದರು. ಈ ಸಂದರ್ಭ ಆ ಸ್ಥಳದಲ್ಲಿ ಯಾವುದೇ ಗಾಂಜಾ ಸಿಗದೆ ಸಿಗರೇಟ್ ಪತ್ತೆಯಾಗಿತ್ತು. ಸಿಗರೇಟ್‌ಗಳನ್ನು ವಶಕ್ಕೆ ಪಡೆದ ಪೊಲೀಸರು ಅಂಗಡಿ ಮಾಲಕ ರುಕ್ಮಯ್ಯರನ್ನು ಠಾಣೆಗೆ ಕರೆದುಕೊಂಡು ಹೋಗಿದ್ದರು.
ಇದಾದ ಬಳಿಕ ಬಿಡುಗಡೆಯಾದ ರುಕ್ಮಯ್ಯ ಅವರು ಆಸ್ಪತ್ರೆಗೆ ದಾಖಲಾಗಿ, ತನಗೆ ಠಾಣೆಯಲ್ಲಿ ಪೊಲೀಸರು ಹಲ್ಲೆ ನಡೆಸಿ ಜಾತಿನಿಂದನೆ ಮಾಡಿದ್ದಾರೆ ಎಂದು ಆರೋಪಿಸಿ ಎಸಿಪಿಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ತನಿಖೆ ನಡೆಸಿದ ಅಧಿಕಾರಿ ಪ್ರಾಥಮಿಕ ವರದಿ ಸಲ್ಲಿಸಿದ್ದರು. ಈ ವರದಿ ಆಧಾರದಲ್ಲಿ ಪಿಎಸ್‌ಐ ಶ್ರೀಕಲಾ ಹಾಗೂ ಕಾನ್‌ಸ್ಟೇಬಲ್ ರಾಜೇಶ್ ಅವರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ ಎಂದು ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ಶಾಂತರಾಜು ಹೇಳಿದ್ದಾರೆ.