ಉಡುಪಿ: 23ಕ್ಕೆ ಜಿಲ್ಲಾ ಗರೋಡಿ ಗುರಿಕಾರ ಸಮಾವೇಶ

Update: 2017-04-11 18:21 GMT

ಉಡುಪಿ, ಎ.11: ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆ ವತಿಯಿಂದ ಉಡುಪಿ ಜಿಲ್ಲಾ ವ್ಯಾಪ್ತಿಯ ಗರೋಡಿ ಗುರಿಕಾರರ ಸನ್ಮಾನ ಹಾಗೂ ಪ್ರಮುಖರ ಸಮ್ಮಿಲನ ಸಮಾವೇಶವು ಎ.23ರಂದು ಅಜ್ಜರಕಾಡಿನ ಪುರಭವನದಲ್ಲಿ ನಡೆಯಲಿದೆ ಎಂದು ವೇದಿಕೆಯ ಗೌರವಾಧ್ಯಕ್ಷ ಅಚ್ಯುತ ಅಮೀನ್ ಕಲ್ಮಾಡಿ ತಿಳಿಸಿದ್ದಾರೆ.

ಉಡುಪಿಯಲ್ಲಿಂದು ಕರೆದ ಪತ್ರಿಕಾಗೋಷ್ಠಿ ಯಲ್ಲಿ ಮಾತನಾಡಿದ ಅವರು, ಬಿಲ್ಲವರ ಆರಾಧನಾ ಕೇಂದ್ರಗಳಾಗಿರುವ ಗರೋಡಿ, ತುಳುನಾಡಿನ ಸಂಸ್ಕೃತಿಗೆ ತನ್ನದೇ ಆದ ಕೊಡುಗೆಯನ್ನಿತ್ತಿದ್ದು, ಅವಿಭಜಿತ ದ.ಕ. ಜಿಲ್ಲೆಯಲ್ಲಿ ಒಟ್ಟು 242 ಗರೋಡಿಗಳಿದ್ದು, 2000ಕ್ಕೂ ಅಧಿಕ ಗುರಿಕಾರರಿದ್ದಾರೆ. ಉಡುಪಿ ಜಿಲ್ಲೆಯೊಂದರಲ್ಲೇ 163 ಗರೋಡಿಗಳಿದ್ದು, 1,500ಕ್ಕೂ ಹೆಚ್ಚು ಗುರಿಕಾರರಿದ್ದಾರೆ ಎಂದರು.

ಉಡುಪಿ ಜಿಲ್ಲೆಯ ಇತಿಹಾಸದಲ್ಲೆ ಪ್ರಥಮ ಬಾರಿಗೆ ನಡೆಯುವ ಈ ಸಮಾವೇಶದಲ್ಲಿ ಶ್ರೀಬ್ರಹ್ಮಬೈದೇರುಗಳ ಗರೋಡಿಗಳಲ್ಲಿ ಪೂಜೆ, ಉತ್ಸವಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು, ಗರೋಡಿಗೆ ಅಗತ್ಯ ಸಂಪನ್ಮೂಲಗಳನ್ನು ವರಡ-ವಂತಿಗೆಗಳ ಮೂಲಕ ಸಂಗ್ರಹಿಸಿ ವಂಶ ಪಾರಂಪರ್ಯವಾಗಿ ಗುರಿಕಾರರಾಗಿ ಹಾಗೂ ಬಿಲ್ಲವ ಸಮಾಜಕ್ಕೆ ಊರ ಗುರಿಕಾರರಾಗಿ ಸೇವೆ ಸಲ್ಲಿಸುತ್ತಿರುವವರನ್ನು ಗುರುತಿಸಿ ಸನ್ಮಾನಿ ಸುವುದು ಸಮಾವೇಶದ ಉದ್ದೇಶವಾಗಿದೆ ಎಂದವರು ನುಡಿದರು. ಬಿಲ್ಲವ ಸಮುದಾಯದ ಸಾಂಸ್ಕೃತಿಕ ರಾಯಭಾರಿಗಳಾಗಿ ಗುರುತಿಸಲ್ಪಡುವ ಇವರ ಸನ್ಮಾನ ಕಾರ್ಯಕ್ರಮವು ಎ.23ರಂದು ಬೆಳಗ್ಗೆ 9ರಿಂದ ಸಂಜೆ 5ರವರೆಗೆ ನಡೆಯಲಿದೆ. ಸಮಾವೇಶವನ್ನು ರಾಜ್ಯಸಭಾ ಸದಸ್ಯ ಬಿ.ಕೆ.ಹರಿಪ್ರಸಾದ್ ಉದ್ಘಾಟಿಸಲಿದ್ದು, ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಅಧ್ಯಕ್ಷತೆ ವಹಿಸಲಿದ್ದಾರೆ. ಶಾಸಕ ಸುನೀಲ್ ಕುಮಾರ್ ದಿಕ್ಸೂಚಿ ಭಾಷಣ ಮಾಡುವರು ಎಂದವರು ಹೇಳಿದರು.

ಇದೇ ಸಂದರ್ಭ ‘ದೇಯಿ ಬೈದೆತಿ’ ಪುಸ್ತಕವನ್ನು ಗುಜರಾತ್ ಬಿಲ್ಲವ ಸಂಘದ ಅಧ್ಯಕ್ಷ ದಯಾನಂದ ಬೋಂಟ್ರ ಬಿಡುಗಡೆಗೊಳಿಸಲಿದ್ದು, ಸಮಾರಂಭದಲ್ಲಿ ಹಿರಿಯ ತುಳು ಜಾನಪದ ವಿದ್ವಾಂಸ ಬನ್ನಂಜೆ ಬಾಬು ಅಮೀನ್ ಹಾಗೂ ಆದಿಉಡುಪಿ ಶ್ರೀಬ್ರಹ್ಮಬೈದರ್ಕಳ ಸಾಂಸ್ಕೃತಿಕ ಅಧ್ಯಯನ ಕೇಂದ್ರದ ಅಧ್ಯಕ್ಷ ದಾನೋದರ ಕಲ್ಮಾಡಿ ಅವರನ್ನು ಸನ್ಮಾನಿಸಲಾಗುವುದು. ಬಳಿಕ ಬಿಲ್ಲವ ಸಮುದಾಯದಲ್ಲಿ ಗರೋಡಿ ಗುರಿಕಾರರ ಮಹತ್ವ, ಕೋಟಿ ಚೆನ್ನಯರ ವೀರಗಾಥಾ ಸಂದೇಶ, ತುಳುನಾಡಿನ ಸಂಸ್ಕೃತಿಗೆ ಕೋಟಿ ಚೆನ್ನಯರ ಕೊಡುಗೆ, ತುಳುನಾಡಿನ ಪ್ರಾತಃ ಸ್ಮರಣೀಯರು-ಕೋಟಿ ಚೆನ್ನಯರು ವಿಷಯದ ಕುರಿತು ತಜ್ಞರಿಂದ ವಿಚಾರಗೋಷ್ಠಿಗಳು ನಡೆಯಲಿವೆ ಎಂದವರು ವಿವರಿಸಿದರು.

ಸಮಾರೋಪ ಸಮಾರಂಭ ಅಪರಾಹ್ನ 3ಕ್ಕೆ ನಡೆಯಲಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಬಿಲ್ಲವ ಸಮಾಜದ ಮುಖಂಡರಾದ ಪ್ರವೀಣ್ ಎಂ.ಪೂಜಾರಿ, ಕೆ.ರಂಜನ್, ಪ್ರಭಾಕರ್ ಪೂಜಾರಿ, ಸುರೇಶ್ ಎಂ., ದಿನೇಶ್ ಜಿ.ಸುವರ್ಣ, ಪ್ರಭಾಕರ್ ಎಸ್. ಪೂಜಾರಿ, ರಾಜೇಶ್ ಎಸ್.ಕರ್ಕೇರ, ಪ್ರಭಾಕರ್ ಜೆ.ಸುವರ್ಣ, ಲಕ್ಷ್ಮಣ್ ಬಿ.ಅಮೀನ್, ಪ್ರಕಾಶ್ ಸುವರ್ಣ ಮೂಡುಕುದ್ರು ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News