ಬಜ್ಪೆ: ನೂತನ ಮಾರುಕಟ್ಟೆ ಮಳಿಗೆ ನಿರ್ಮಾಣದಲ್ಲಿ ಗೊಂದಲ

Update: 2017-04-11 18:22 GMT

ಬಜ್ಪೆ, ಎ.11: ನೂತನ ಮಾರುಕಟ್ಟೆಯ ಮಳಿಗೆಗಳ ನಿರ್ಮಾಣದಲ್ಲಿರುವ ಗೊಂದಲ ಮತ್ತು ಪಂಚಾಯತ್‌ನ ಪರವಾನಿಗೆ ಪಡೆಯದೇ ಸೆಝ್ ಕಾರ್ಯ ಆರಂಭಿಸಿದೆ ಎಂಬ ಆರೋಪದ ಬಗ್ಗೆ ಇಂದು ನಡೆದ ಸಾಮಾನ್ಯ ಸಭೆಯಲ್ಲಿ ತೀವ್ರ ಚರ್ಚೆ ನಡೆಯಿತು.

ಬಜ್ಪೆ ಗ್ರಾಪಂ ಅಧ್ಯಕ್ಷೆ ರೋಝಿ ಮಥಾಯಸ್ ಸಭೆಯ ಅಧ್ಯಕ್ಷತೆ ವಹಿಸಿದ್ದರು.

ಗ್ರಾಪಂ ವ್ಯಾಪ್ತಿಯಲ್ಲಿ ರಸ್ತೆ ಅಗಲೀಕರಣ ನಡೆಯಲಿರುವ ಹಿನ್ನೆಲೆಯಲ್ಲಿ ಬಜ್ಪೆ ಪಟ್ಟಣದ ಮೀನು ಮಾರುಕಟ್ಟೆ ಮುಂಭಾಗದ ಕಟ್ಟಡ ನಿರ್ಮಾಣವನ್ನು ಪಂಚಾಯತ್ ಸದಸ್ಯರು ಹಾಗೂ ಅಂಗಡಿ ಮಾಲಕರ ಸದಸ್ಯತ್ವದಲ್ಲಿ ನೂತನ ಸಮಿತಿ ರಚಿಸಿಕೊಂಡು ಕಾಮಗಾರಿಗೆ ಟೆಂಡರ್ ನೀಡಲಾಗಿದೆ. ಆದರೆ, ಕಟ್ಟಡ ನಿರ್ಮಾಣಕ್ಕೆ ಅಂಗಡಿ ಮಾಲಕರಿಂದ ಹಣ ಸಂಗ್ರಹಿಸಿ ಅವರಿಗೆ ಬೇಕಾದಂತೆ ನಿರ್ಮಾಣ ಮಾಡುವ ಹುನ್ನಾರ ನಡೆಯುತ್ತಿದೆ ಎಂದು ಸದಸ್ಯ ಶಾಹುಲ್ ಹಮೀದ್ ಆರೋಪಿಸಿದರು.

ಈ ವೇಳೆ ಧ್ವನಿಗೂಡಿಸಿದ ಮತ್ತೋರ್ವ ಸದಸ್ಯ ಲೋಕೇಶ್, ರಸ್ತೆಯಿಂದ 6 ಮೀ. ವರೆಗಿನ ಅಂಗಡಿಗಳಿರುವ ಪ್ರದೇಶವನ್ನು ಖಾಲಿ ಮಾಡುವಂತೆ ಪಿಡಬ್ಲೂಡಿ ಇಲಾಖೆ ಸೂಚನೆ ನೀಡಿದೆ. ಅದರಂತೆ 6 ಮೀ. ಸ್ಥಳ ರಸ್ತೆಗೆ ನೀಡಿದರೆ ಇತಿಹಾಸ ಪ್ರಸಿದ್ಧ ಬಜ್ಪೆ ಮಾರುಕಟ್ಟೆಗೆ ಸ್ಥಳಾವಕಾಶದ ಕೊರತೆ ಕಾಡಲಿದೆ ಎಂದರು.

 ಅಂಗಡಿ ಮಾಲಕರ ಬದಲು ಗುತ್ತಿಗೆಯನ್ನು ಗ್ರಾಪಂ ವಹಿಸಿಕೊಂಡು ನಡೆಸಬೇಕು ಎಂದು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಯನ್ನು ಸದಸ್ಯ ಹಮೀದ್ ಆಗ್ರಹಿಸಿದರು.

ಇದಕ್ಕೆ ಉತ್ತರಿಸಿದ ಪಿಡಿಒ ಸಾಯೀಶ್ ಚೌಟ, ಅಂಗಡಿ ಮಾಲಕರಿಂದ ಡಿಪಾಸಿಟ್ ರೂಪದಲ್ಲಿ ಹಣ ಪಡೆದು ಅಂಗಡಿ ಕೋಣೆಗಳನ್ನು ನಿರ್ಮಾಣ ಮಾಡಲಾಗುವುದು. ಕಾಮಗಾರಿ ಬಗ್ಗೆ ಜಿಪಂನ ಗಮನಕ್ಕೆ ತರಲಾಗಿದೆ. ಅಲ್ಲದೆ, ಜಿಪಂ ಇಂಜಿನಿಯರ್‌ರ ನೇತೃತ್ವದಲ್ಲೇ ಸಂಪೂರ್ಣ ನೀಲನಕ್ಷೆ, ಗುಣಮಟ್ಟದ ಪರಿಶೀಲನೆ ನಡೆಸಲಾಗುವುದು ಎಂದರು.

ಬಳಿಕ ಈ ಬಗ್ಗೆ ಸುದೀರ್ಘ ಚರ್ಚೆ ನಡೆದು, ಈ ಮೊದಲು ಕಾಮಗಾರಿ ಸಮಿತಿಯು ನೀಡಿರುವ ಟೆಂಡರ್ ಊರ್ಜಿತದಲ್ಲಿ ಇರುವಂತೆಯೇ ಸಂತೆ ಮಾರುಕಟ್ಟೆಗೆಅವಕಾಶವಾಗುವ ನೂತನ ನೀಲನಕ್ಷೆ ತಯಾರಿಸುವುದು. ಬಳಿಕ ಜಿಪಂ ಇಂಜಿನಿಯರ್ ಸಲಹೆ ಸೂಚನೆಯಂತೆ ಸುಸಜ್ಜಿತ ಮೂಲಭೂತ ಸೌಲಭ್ಯಗಳ ನ್ನೊಳಗೊಂಡ ಮಾರುಕಟ್ಟೆಯನ್ನು ಗ್ರಾಪಂ ಅಧೀನದಲ್ಲೇ ನಿರ್ಮಿಸುವ ಬಗ್ಗೆ ನಿರ್ಣಯ ಕೈಗೊಳ್ಳಲಾಯಿತು.

ಬಳಿಕ ಸಭೆಯಲ್ಲಿ ಮಾತನಾಡಿದ ಸದಸ್ಯ ನಝೀರ್, ಸೆಝ್ ಕಂಪೆನಿಯಿಂದ ಸಂಜೆಯ ವೇಳೆ ವಿಷಪೂರಿತ ಗಾಳಿಯನ್ನು ಹೊರಬಿಡಲಾಗುತ್ತಿದೆ. ಇದರಿಂದ ಗ್ರಾಮಸ್ಥರು ಉಸಿರಾಟದ ಸಮಸ್ಯೆ ಅನುಭವಿಸುತ್ತಿದ್ದಾರೆ ಎಂದರು.

ಈ ವೇಳೆ ಸಭೆಗೆ ಮಾಹಿತಿ ನೀಡಿದ ಲೋಕೇಶ್, ಹಲವು ದಿನಗಳಿಂದ ಸೆಝ್ ಗ್ರಾಪಂನ ಪರವಾನಿಗೆ ಪಡೆಯದೆ ಕಾರ್ಯಚರಿಸುತ್ತಿದೆ. ಈ ಬಗ್ಗೆ ಸೆಝ್‌ನಿಂದ ತೊಂದರೆ ಅನುಭವಿಸುತ್ತಿರುವ ಎಲ್ಲ ನಾಲ್ಕು ಗ್ರಾಪಂಗಳು ಸೇರಿ ಸೆಝ್‌ನ ಮುಂದೆ ಪ್ರತಿಭಟನೆ ನಡೆಸುವ ಮೂಲಕ ತಮ್ಮ ವಿರೋಧವನ್ನು ಪ್ರಕಟಿಸಬೇಕಿದೆ. ಅದೂ ಸಾಧ್ಯವಾಗದೆ ಸೆಝ್ ಮುಂದುವರಿದರೆ, ಎಲ್ಲ ಸದಸ್ಯರು ರಾಜೀನಾಮೆ ನೀಡುವ ಬಗ್ಗೆ ಪ್ರಸ್ತಾಪಿಸಿದರು. ಇದಕ್ಕೆ ಹೆಚ್ಚಿನ ಸದಸ್ಯರು ಸಹಮತ ವ್ಯಕ್ತಡಿಸಿದರು.

ಈ ಸಂಬಂಧ ಸಭೆಯಲ್ಲಿ ಮಾತನಾಡಿದ ಸದಸ್ಯ ಸಿರಾಜ್, 10 ಪಂಚಾಯತ್‌ಗಳ ಸದಸ್ಯರು ಪ್ರತಿಭಟಿಸಿದರೂ ಸೆಝ್ ಯಾವುದೇ ಪ್ರತಿಭಟನೆಗಳಿಗೆ ಜಗ್ಗದೆ ತನ ಕಾರ್ಯಾಚರಿಸುತ್ತದೆ. ಇದಕ್ಕೆ ಸ್ಥಳೀಯರು ಪ್ರತಿಭಟನೆಗೆ ಇಳಿದರೆ ಸೂಕ್ತ ಎಂದರು.

ಸಭೆಯಲ್ಲಿ ಪಿಡಿಒ ಸಾಯೀಶ್ ಚೌಟ ಮಾತನಾಡಿ, 1 ವಾರದ ಇಳಗಾಗಿ ಎಲ್ಲ ಸದಸ್ಯರು 2017-18ನೆ ಸಾಲಿನ ಆಸ್ತಿ ಘೋಷಣೆ ಮಾಡಬೇಕು. ಇಲ್ಲದಿದ್ದಲ್ಲಿ 43ಬಿ, 47ರ ಅಡಿ ಕ್ರಮ ಜರಗಿಸಲಾಗುವುದು ಎಂದರು.

ಸಭೆಯಲ್ಲಿ ಉಪಾಧ್ಯಕ್ಷ ಮುಹಮ್ಮದ್ ಶರೀಫ್, ಸದಸ್ಯರಾದ ಲೋಕೇಶ್, ಸಿರಾಜ್ ಮೊದಲಾದವರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News