ಮಹಿಳೆಗೆ ಅಪರೂಪದ ಶಸ್ತ್ರಚಿಕಿತ್ಸೆ ನಡೆಸಿದ ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜಿನ ವೈದ್ಯರ ತಂಡದಿಂದ

Update: 2017-04-12 04:09 GMT

ಮಂಗಳೂರು, ಎ.12: ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜಿನ ವೈದ್ಯರ ತಂಡ ಅಪರೂಪದ ಲ್ಯಾಪ್ರೋವಿಪಲ್ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಿರ್ವಹಿಸಿದ್ದು,  ಕರಾವಳಿ ಕರ್ನಾಟಕದಲ್ಲಿ ಈ ಶಸ್ತ್ರಚಿಕಿತ್ಸೆ ನೆರವೇರಿಸಿರುವುದು ಇದೇ ಪ್ರಥಮ ಬಾರಿಯಾಗಿದೆ.

ತೆರೆದ ವಿಪಲ್ ಶಸ್ತ್ರಚಿಕಿತ್ಸೆಯು ಜೀರ್ಣಾಂಗವ್ಯೂಹ ಶಸ್ತ್ರಚಿಕಿತ್ಸೆಯಲ್ಲೇ ಅತ್ಯಂತ ಸಂಕೀರ್ಣ ಶಸ್ತ್ರಚಿಕಿತ್ಸೆಯಾಗಿದ್ದು, ಜೀರ್ಣನಾಳದಲ್ಲಿನ ಟ್ಯೂಮರ್ ಹೊರತೆಗೆಯಲು ಈ ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು. ಜತೆಗೆ ಶಸ್ತ್ರಚಿಕಿತ್ಸೆಗೆ ಒಳಪಟ್ಟ ಅಂಗಾಂಗಗಳ ಮರು ಜೋಡಣೆಯೂ ಇದರಲ್ಲಿ ಒಳಗೊಳ್ಳುತ್ತದೆ

ಜಠರ ಶಸ್ತ್ರಚಿಕಿತ್ಸಾ ತಜ್ಞ ಡಾ.ಗಣೇಶ್ ಎಂ.ಕೆ, ಡಾ.ರಾಯ್ ಅಲ್ಬನ್ ಫ್ರಾಂಕ್, ಡಾ.ಹರ್ಷವರ್ಧನ್ ಹಾಗೂ ಡಾ.ಕರ್ಲ್ ಈ ಶಸ್ತ್ರಚಿಕಿತ್ಸಾ ತಂಡದಲ್ಲಿದ್ದರು ಎರಡು ವರ್ಷಗಳಲ್ಲಿ ಹಲವು ಜಠರ ಕ್ಯಾನ್ಸರ್ ರೋಗಿಗಳಿಗೆ ಲ್ಯಾಪ್ರೋ ಶಸ್ತ್ರಚಿಕಿತ್ಸೆ ನೆರವೇರಿಸಿದ್ದರೂ, ಈ ಬಾರಿಯ ಶಸ್ತ್ರಚಿಕಿತ್ಸೆ ತೀರಾ ಸಂಕೀರ್ಣದ್ದಾಗಿತ್ತು ಎಂದು ವೈದ್ಯರು ಹೇಳಿದ್ದಾರೆ.

ಡಾ. ಎಂ.ಕೆ. ಗಣೇಶ್‌ರವರು ಕೊಯಮತ್ತೂರಿನ ಜಿಇಎಂ ಆಸ್ಪತ್ರೆಯಲ್ಲಿ ಬಿ.ಸಿ. ರಾಯ್ ಪ್ರಶಸ್ತಿ ಪಡೆದಿರುವ ಅಂತರಾಷ್ಟ್ರೀಯ ಖ್ಯಾತಿಯ ಗ್ಯಾಸ್ಟ್ರೋ ಸರ್ಜನ್ ಡಾ. ಸಿ. ಪಳನಿವೇಲು ನೇತೃತ್ವದಲ್ಲಿ ತರಬೇತಿ ಪಡೆದಿದ್ದಾರೆ. 2 ವರ್ಷಗಳಿಂದ ಡಾ. ಎಂ.ಕೆ. ಗಣೇಶ್ ಮತ್ತು ತಂಡದವರು ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಅನೇಕ ಜಠರದ ಕ್ಯಾನ್ಸರ್‌ನ ಶಸ್ತ್ರಚಿಕಿತ್ಸೆಯನ್ನು ಲ್ಯಾಪ್ರೋ ಮೂಲಕ ಮಾಡಿದ್ದಾರೆ.

ಕಾಮಾಲೆ ರೋಗಕ್ಕೆ ತುತ್ತಾಗಿದ್ದ ಮಹಿಳೆ ಆರೋಗ್ಯ ತಪಾಸಣೆ ನಡೆಸಿದಾಗ, ಮೇದೋಜೀರಕ ಗ್ರಂಥಿಯಲ್ಲಿ ಗಡ್ಡೆ ಬೆಳೆದು ಪಿತ್ತರಸ ನಾಳಕ್ಕೆ ತೊಂದರೆಯಾಗಿತ್ತು. ಗಡ್ಡೆ (ಟ್ಯೂಮರ್) ಹೊರತೆಗೆದು ಇಡೀ ಭಾಗದ ಪುನರ್ ಜೋಡಿಸುವಿಕೆಯನ್ನು ಲ್ಯಾಪ್ರೋ ವಿಧಾನದಲ್ಲೇ ನಡೆಸಲಾಗಿದೆ. ದೇಶದಲ್ಲಿ ಕೆಲವೇ ಆಸ್ಪತ್ರೆಗಳಲ್ಲಿ ಮಾತ್ರ ಸಂಪೂರ್ಣ ಲ್ಯಾಪ್ರೋವಿಪಲ್ ಶಸ್ತ್ರಚಿಕಿತ್ಸೆ ನಡೆಸಲಾಗುತ್ತಿದೆ ಈ ತಂಡ ಒಂದು ತಿಂಗಳಲ್ಲಿ ಮೂರು ಲ್ಯಾಪ್ರೋವಿಪಲ್ ಶಸ್ತ್ರಚಿಕಿತ್ಸೆ ನಡೆಸಿದೆ ಎಂದು ಡಾ. ಎಂ.ಕೆ. ಗಣೇಶ್ ತಿಳಿಸಿದ್ದಾರೆ.

ಎಲ್ಲಾ ರೋಗಿಗಳು ಚೇತರಿಸಿಕೊಂಡಿದ್ದು, ಈ ವಿಧಾನದ ಶಸ್ತ್ರಚಿಕಿತ್ಸೆಯಲ್ಲಿ, ಶಸ್ತ್ರಚಿಕಿತ್ಸೆ ನಡೆದ ದಿನವೇ ರೋಗಿಗಳು ಆಸ್ಪತ್ರೆಯಿಂದ ಬಿಡುಗಡೆಯಾಗುತ್ತಾರೆ. ಇದು ಕಡಿಮೆ ನೋವುದಾಯಕ ಹಾಗೂ ಕ್ಷಿಪ್ರವಾಗಿ ಚೇತರಿಸಿಕೊಳ್ಳಲು ಅನುಕೂಲವಾಗುವ ಶಸ್ತ್ರಚಿಕಿತ್ಸೆಯಾಗಿದೆ ಎಂದವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News