ಈಜಿಪ್ಟ್ : ಚರ್ಚ್ ರಕ್ಷಣೆಯ ಕರ್ತವ್ಯದಲ್ಲಿ ಮೃತಪಟ್ಟ ಮುಸ್ಲಿಂ ಮಹಿಳಾ ಪೊಲೀಸ್ ಅಧಿಕಾರಿಗೆ ದೇಶದ ಗೌರವ

Update: 2017-04-12 07:06 GMT

ಅಲೆಕ್ಸಾಂಡ್ರಿಯಾ,ಎ.12 : ಈಜಿಪ್ಟ್ ಚರ್ಚುಗಳ ಮೇಲೆ ಪಾಮ್ ಸಂಡೇ ದಿನ ನಡೆದ ದಾಳಿಗಳಲ್ಲಿ ಚರ್ಚ್ ರಕ್ಷಣೆಯ ಕರ್ತವ್ಯ ನಿರ್ವಹಿಸುತ್ತಿರುವಾಗಲೇ ಮೃತ ಪಟ್ಟ ಮಹಿಳಾ ಪೊಲೀಸ್ ಅಧಿಕಾರಿ ಬ್ರಿಗೇಡಿಯರ್ ಜನರಲ್ ನಗ್ವ ಎಲ್-ಹಗ್ಗರ್ ಅವರನ್ನು ಇದೀಗ ಹೀರೋ ಎಂದೇ ಬಣ್ಣಿಸಲಾಗುತ್ತಿದೆ ಹಾಗೂ ಅವರಿಗೆ ಅಪಾರ ಗೌರವ ಸಲ್ಲಿಸಲಾಗುತ್ತಿದೆ. ಈ ದಾಳಿಗಳಲ್ಲಿ ಕನಿಷ್ಠ 44 ಜನರು ಮೃತಪಟ್ಟು ನೂರಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರೆ, ಮೃತಪಟ್ಟವರಲ್ಲಿ ಮೂವರು ಮುಸ್ಲಿಮ್ ಅಧಿಕಾರಿಗಳೂ ಸೇರಿದಂತೆ ಏಳು ಈಜಿಪ್ಟ್ ಅಧಿಕಾರಿಗಳು ಸೇರಿದ್ದಾರೆ.

ಘಟನೆ ನಡೆದ ದಿನ ಬ್ರಿಗೇಡಿಯರ್ ಜನರಲ್ ನಗ್ವ ಎಲ್-ಹಗ್ಗರ್ ಅವರು ಅಲೆಕ್ಸಾಂಡ್ರಿಯಾದ ಸೈಂಟ್ ಮಾರ್ಕ್ಸ್ ಕೋಪ್ಟಿಕ್ ಕ್ಯಾಥೆಡ್ರಲ್ ಮುಂಭಾಗದಲ್ಲಿ ಕರ್ತವ್ಯದಲ್ಲಿದ್ದರು. ಕೊಪ್ಟಿಕ್ ಪೋಪ್ ತವಡ್ರೊಸ್ ಆ ದಿನದ ಬಲಿಪೂಜೆ ನೆರವೇರಿಸುತ್ತಿದ್ದಾಗ ಆತ್ಮಾಹುತಿ ಬಾಂಬರ್ ಮುಖ್ಯ ದ್ವಾರ ಪ್ರವೇಶಿಸಲೆತ್ನಿಸಿದ್ದು ಆಗ ಅಲ್ಲಿನ ಸುರಕ್ಷಾ ಅಧಿಕಾರಿಗಳು ತಡೆದಿದ್ದರೂ ಆತ ಅಲ್ಲಿಯೇ ತನ್ನನ್ನು ಸ್ಫೋಟಿಸಿಕೊಂಡಿದ್ದ. ಅತ್ತ ಚರ್ಚಿಗೆ ಪ್ರವೇಶಿಸುತ್ತಿರುವವರನ್ನು ತಪಾಸಣೆಗೈಯ್ಯುತ್ತಿದ್ದ ಮಹಿಳಾ ಅಧಿಕಾರಿ ತನ್ನ ಪುರುಷ ಸಹೋದ್ಯೋಗಿಗಳು ಸಂಕಷ್ಟದಲ್ಲಿದ್ದಾರೆಂದು ಅರಿತು ಅತ್ತ ಧಾವಿಸಿದಾಗ ಆಕೆಯೂ ಆತ್ಮಾಹುತಿ ಬಾಂಬರ್ ದಾಳಿಗೆ ಬಲಿಯಾಗಿದ್ದರು.

ಎಲ್-ಹಗ್ಗರ್ ಹೊರತಾಗಿ ಈ ದಾಳಿಗಳಲ್ಲಿ ಬಲಿಯಾದವರಲ್ಲಿ ಸಾರ್ಜೆಂಟ್ ಅಸ್ಮಾ ಹುಸೇನ್ ಹಾಗೂ ಒಮ್ನೆಯಾ ರೊಶ್ಡಿ ಎಂಬ ಇತರ ಇಬ್ಬರು ಮಹಿಳಾ ಅಧಿಕಾರಿಗಳೂ ಸೇರಿದ್ದರು. ಕರ್ತವ್ಯದ ಸಂದರ್ಭ ಬಲಿಯಾದ ಈಜಿಪ್ಟಿನ ಪ್ರಥಮ ಮಹಿಳಾ ಪೊಲೀಸ್ ಅಧಿಕಾರಿಗಳು ಇವರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News