×
Ad

ಸೌಹಾರ್ದತೆಗಾಗಿ ಚಿಣ್ಣರ ಹಬ್ಬ ದೇಶಕ್ಕೆ ಮಾದರಿ: ಜೆ.ಆರ್.ಲೋಬೊ

Update: 2017-04-12 13:19 IST

ಬೆಂಗರೆ, ಎ.12: ಸೌಹಾರ್ದತೆಯ ಪಾಠವನ್ನು ಬಾಲ್ಯದಲ್ಲೇ ಮಕ್ಕಳ ಮನಸ್ಸುಗಳಲ್ಲಿ ಬಿತ್ತಬೇಕು. ಇದರಿಂದ ಸೌಹಾರ್ದಯುತ ಸಮಾಜ ನಿರ್ಮಾಣ ಸಾಧ್ಯ. ಆಟೋಟ ಸ್ಪರ್ಧೆ, ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಮಕ್ಕಳಲ್ಲಿ ಪ್ರಾಯೋಗಿಕವಾಗಿ ಸೌಹಾರ್ದತೆಯ ಪಾಠ ಮೂಡಿಸಿದ ‘ಚಿಣ್ಣರ ಹಬ್ಬ’ ಒಂದು ಅದ್ಭುತ ಕಾರ್ಯಕ್ರಮ. ಬೆಂಗರೆ ಪ್ರದೇಶದ ಚಿಣ್ಣರ ಹಬ್ಬ ದೇಶಕ್ಕೆ ಮಾದರಿ ಎಂದು ಶಾಸಕ ಜೆ.ಆರ್.ಲೋಬೋ ಹೇಳಿದರು.

ಬೆಂಗರೆ ಪ್ರದೇಶದಲ್ಲಿ ನಡೆದ ’ಸೌಹಾರ್ದಯುತ ನಾಳೆಗಾಗಿ: ಚಿಣ್ಣರ ಹಬ್ಬ’ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ಮುಖ್ಯ ಅತಿಥಿ, ಉದ್ಯಮಿ ಪ್ರಸಾದ್ ರಾಜ್ ಕಾಂಚನ್ ಮಾತನಾಡಿ, ಎಲ್ಲ ಧರ್ಮದ ಜನರು ಬೆರೆತು ಜೀವಿಸುವ ವಾತಾವರಣ ನಿರ್ಮಿಸಬೇಕು. ವ್ಯಾಪಾರ-ವ್ಯವಹಾರಗಳಲ್ಲಿ ನಾವು ಹೇಗೆ ಜಾತಿಗಳನ್ನು ನೋಡುವುದಿಲ್ಲವೋ, ಹಾಗೆಯೇ ಬೇರೆ ಕ್ಷೇತ್ರಗಳಲ್ಲೂ ಸೌಹಾರ್ದತೆಯಿಂದಿರಬೇಕು. ಹೀಗಾದರೆ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದರು. 

ಶಾಸಕರಾದ ಮೊಯ್ದಿನ್ ಬಾವ, ಐವನ್ ಡಿಸೋಜ, ಮುಹಮ್ಮದ್ ಕುಂಞಿ, ರಘುವೀರ್, ನವೀನ್ ಸುವರ್ಣ, ಮೀರಾ ಕರ್ಕೇರಾ, ಹಮೀದ್ ಹುಸೈನ್, ಚಿಣ್ಣರ ಹಬ್ಬದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಸ್ವಾಗತ ಸಮಿತಿ ಅಧ್ಯಕ್ಷ ಚೇತನ್ ಬೆಂಗರೆ ಅಧ್ಯಕ್ಷತೆ ವಹಿಸಿದ್ದರು. ಸುಲೈಮಾನ್ ಕೆ.ಬಿ.ಆರ್, ಎಂ.ಎ.ರಹ್‌ಮಾನ್(ಮೋನಾಕ), ಶ್ರೀಕಾಂತ್ ಸಾಲಿಯಾನ್, ಅಬ್ದುಲ್ ಕರೀಮ್ ಬೆಂಗರೆ, ಇದ್ದಿನ್ ಕುಂಞಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಆಟೋಟ ಸ್ಪರ್ಧೆಯ ನೇತೃತ್ವವನ್ನು ಪ್ರಭಾಕರ್ ಬೊಕ್ಕಪಟ್ಣ ಬೆಂಗರೆ ವಹಿಸಿದ್ದರು. ಈ ಸಂದರ್ಭದಲ್ಲಿ 40 ವರ್ಷಗಳ ಕಾಲ ಶಿಕ್ಷಕಿಯಾಗಿ ಸೇವೆ ಸಲ್ಲಿಸಿದ ಬೆಂಗರೆ ಸರಕಾರಿ ಶಾಲೆಯ ಪ್ರಾಧ್ಯಾಪಕಿ ಜ್ಯೂಲಿಯೆಟ್ ಪಿಂಟೋರವರನ್ನು ಸನ್ಮಾನಿಸಲಾಯಿತು. ಮಕ್ಕಳಿಂದ ಕಬಡ್ಡಿ, ಹಗ್ಗಜಗ್ಗಾಟ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಕಾಸಿಮ್ ಕೆ.ಕಾರ್ಯಕ್ರಮ ನಿರೂಪಿಸಿದರು. ಹಸನ್‌ ಸ್ವಾಗತಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News