ಪಿಲಿಕುಳದಲ್ಲಿ ‘ಚಿಲಿಪಿಲಿ’ ಬೇಸಿಗೆ ಶಿಬಿರಕ್ಕೆ ಚಾಲನೆ
ಮಂಗಳೂರು, ಎ. 12: ವಾಮಂಜೂರಿನ ಪಿಲಿಕುಳದ ಡಾ. ಶಿವರಾಮ ಕಾರಂತ ನಿಸರ್ಗಧಾಮದ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ 6ರಿಂದ 14 ವರ್ಷದೊಳಗಿನ ಶಾಲಾ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಳ್ಳಲಾದ 10 ದಿನಗಳ ‘ಚಿಲಿಪಿಲಿ’ ಬೇಸಿಗೆ ಶಿಬಿರಕ್ಕೆ ಇಂದು ಚಾಲನೆ ನೀಡಲಾಯಿತು.
ಡಾ. ಶಿವರಾಮ ಕಾರಂತ ನಿಸರ್ಗಧಾಮ ಮತ್ತು ಬೆಂಗಳೂರಿನ ಕಪೆಲ್ಲಾ ಸ್ಕೂಲ್ ಆಫ್ ಆರ್ಟ್ ವತಿಯಿಂದ ಆಯೋಜಿಸಲಾಗಿರುವ ಶಿಬಿರದಲ್ಲಿ ಪ್ರಸ್ತುತ 83 ಮಂದಿ ಮಕ್ಕಳು ನೋಂದಾಯಿಸಿಕೊಂಡು ಭಾಗವಹಿಸುತ್ತಿದ್ದಾರೆ. ಶಿಬಿರ ಪ್ರತಿದಿನ ಬೆಳಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ನಡೆಯಲಿದೆ. ಶಿಬಿರದಲ್ಲಿ ಬೆಂಗಳೂರಿನ ಸಾಂಸ್ಕೃತಿಕ ಕಲಾ ಸಂಸ್ಥೆಯಾದ ಕಪೆಲ್ಲಾ ಸ್ಕೂಲ್ ಆಫ್ ಆರ್ಟ್‌ನ ತಜ್ಞ ಸಿಬ್ಬಂದಿ ಮಕ್ಕಳಿಗೆ ಕಲಾತ್ಮಕ ಹಾಗೂ ಸೃಜನಾತ್ಮಕ ಕಲೆಗಳ ಬಗ್ಗೆ ತರಬೇತಿ ಹಾಗೂ ಮಾಹಿತಿ ನೀಡಲಿದ್ದಾರೆ. ಶಿಬಿರದ ಕೊನೆಯ ದಿನವಾದ ಎ. 23ರಂದು ಸಮಾರೋಪ ಸಮಾರಂಭದಲ್ಲಿ ವಿದ್ಯಾರ್ಥಿಗಳು ಶಿಬಿರದಲ್ಲಿ ಕಲಿತ ಕಲಾತ್ಮಕ ಹಾಗೂ ಸೃಜನಾತ್ಮಕ ಕಲೆಗಳ ಪ್ರದರ್ಶನವನ್ನು ನೀಡಲಿದ್ದಾರೆ ಎಂದು ಶಿಬಿರದ ನಿರ್ದೇಶಕಿ ಮೈತಿಲಿ ಮಾಹಿತಿ ನೀಡಿದರು.
ಪಿಲಿಕುಳದ ಪ್ರಾದೇಶಿಕ ವಿಜ್ಞಾನ ಕೇಂದ್ರದ ಸಭಾಂಗಣದಲ್ಲಿ ಶಿಬಿರಕ್ಕೆ ಮಾಜಿ ಮೇಯರ್ ದಿವಾಕರ್ ಚಾಲನೆ ನೀಡಿ ಶುಭ ಹಾರೈಸಿದರಲ್ಲದೆ, ಮಕ್ಕಳಿಗೆ ಕನ್ನಡ ಭಾಷೆಯ ಬಗ್ಗೆ ಅರಿವು ಅಗತ್ಯ ಎಂದರು. ದ.ಕ. ಜಿಲ್ಲಾ ವಾರ್ತಾಧಿಕಾರಿ ಖಾದರ್ ಶಾ ಮಾತನಾಡಿ, ನಗರದ ನಡುವೆ ಒತ್ತಡದ ನಡುವಿನಲ್ಲಿರುವ ಮಕ್ಕಳಿಗೆ ಪ್ರಕೃತಿಮುಖಿಯಾಗಿರುವ ಪಿಲಿಕುಳದಲ್ಲಿ ಪ್ರಾಕೃತಿತವಾಗಿ ಶಿಬಿರದ ಮೂಲಕ ತೊಡಗಿಸಿಕೊಳ್ಳುವುದು ಸಂತಸದ ಸಂಗತಿ ಎಂದರು.
ಪಿಲಿಕುಳದ ಪ್ರಾದೇಶಿಕ ವಿಜ್ಞಾನ ಕೇಂದ್ರದ ನಿರ್ದೇಶಕ ಡಾ.ಕೆ.ವಿ. ರಾವ್ ಶುಭ ಹಾರೈಸಿದರು. ಡಾ. ಶಿವರಾಮ ಕಾರಂತ ನಿಸರ್ಗಧಾಮದ ಕಾರ್ಯನಿರ್ವಾಹಕ ನಿರ್ದೇಶಕ ವಿ. ಪ್ರಸನ್ನ ಪಾಸ್ತಾವಿಕವಾಗಿ ಮಾತನಾಡಿದರು. ನಿಸರ್ಗಧಾಮದ ಆಡಳಿತಾಧಿಕಾರಿ ಬಾಬು ದೇವಾಡಿಗ ವಂದಿಸಿದರು.