×
Ad

ನೀರಿನ ವಿಷಯದಲ್ಲಿ ರಾಜಕೀಯ ಬೇಡ: ಮೇಯರ್ ಕವಿತಾ

Update: 2017-04-12 16:17 IST

ಮಂಗಳೂರು, ಎ.12: ನಗರದಲ್ಲಿ ನೀರಿನ ಪೂರೈಕೆಗೆ ಸಂಬಂಧಿಸಿ ವಿರೋಧ ಪಕ್ಷ ವಸ್ತುಸ್ಥಿತಿಯನ್ನು ಅರಿಯದೆ ಆರೋಪವನ್ನು ಮಾಡುತ್ತಿದ್ದು, ನೀರಿನ ವಿಷಯದಲ್ಲಿ ರಾಜಕೀಯ ಬೇಡ ಎಂದು ಮೇಯರ್ ಕವಿತಾ ಸನಿಲ್ ಹೇಳಿದ್ದಾರೆ.

ಮೇಯರ್ ಕೊಠಡಿಯಲ್ಲಿಂದು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ನಗರದ ಜನತೆ ಬುದ್ಧಿವಂತರು. ಸತ್ಯಾಂಶ ಅವರಿಗೆ ತಿಳಿದಿದೆ. ಹಾಗಾಗಿ ಸಾರ್ವಜನಿಕರ ಹಿತದೃಷ್ಟಿಯಿಂದ ಎಪ್ರಿಲ್ ತಿಂಗಳ ಅಂತ್ಯದವರೆಗೆ ನೀರಿನ ರೇಶನಿಂಗ್ ಪ್ರಸಕ್ತ ರೀತಿಯಲ್ಲೇ (ನಾಲ್ಕು ದಿನ ನೀರು ಪೂರೈಕೆ ಹಾಗೂ 2 ದಿನ ನೀರು ಪೂರೈಕೆ ಸ್ಥಗಿತ) ಮುಂದುವರಿಸಲಾಗುವುದು ಎಂದು ಹೇಳಿದರು. ನಾಲ್ಕು ದಿನಗಳ ನೀರು ಪೂರೈಕೆ ಆರಂಭಿಸಿದ ಬಳಿಕ ಕೆಲ ಎತ್ತರದ ಪ್ರದೇಶಗಳಿಂದಲೂ ಸಾರ್ವಜನಿಕರು ಕರೆ ಮಾಡಿ ನೀರು ಬರುತ್ತಿರುವುದಾಗಿ ತಿಳಿಸಿದ್ದಾರೆ.

ಪ್ರಸ್ತುತ ಯಾವುದೇ ಕಾರಣಕ್ಕೂ ರಿಸ್ಕ್ ತೆಗೆದುಕೊಳ್ಳಲು ನಾನು ತಯಾರಿಲ್ಲ. ಮೇ ತಿಂಗಳ ಆರಂಭದಿಂದ ದಿನನಿತ್ಯ ನೀರು ಪೂರೈಸುವ ಮೂಲಕ ಮುಂದೊದಗಬಹುದಾದ ಸಮಸ್ಯೆಗಳನ್ನು ಎದುರಿಸಲು ನಾನು ಸಿದ್ಧಳಿದ್ದೇನೆ. ಒಂದು ವೇಳೆ ಈ ತಿಂಗಳಲ್ಲೇ ಧಾರಾಕಾರವಾಗಿ ಮಳೆ ಸುರಿದಲ್ಲಿ ಪ್ರಸಕ್ತ ಇರುವ ನೀರಿನ ರೇಶನಿಂಗ್ ವ್ಯವಸ್ಥೆಯನ್ನು ಪರಿಶೀಲಿಸಲಾಗುವುದು ಎಂದು ಅವರು ಹೇಳಿದರು. ಕಳೆದ ಬಾರಿ ನೀರಿನ ಸಮಸ್ಯೆ ಆದಾಗ ಪಾಲಿಕೆ ವತಿಯಿಂದ ಹೊಸತಾಗಿ 43 ಕೊಳವೆ ಬಾವಿಗಳನ್ನು ಕೊರೆಯಲಾಗಿತ್ತು. 53 ತೆರೆದ ಬಾವಿಗಳನ್ನು ಸ್ವಚ್ಛಗೊಳಿಸಿ ಕುಡಿಯುವ ನೀರು ಪೂರೈಕೆ ಮಾಡಲಾಗಿತ್ತು. ಬಾಡಿಗೆ ಟ್ಯಾಂಕರ್‌ಗಳನ್ನು ಪಡೆದು ನೀರು ಪೂರೈಕೆ ಮಾಡುವ ಮೂಲಕ 1.43 ಕೋಟಿ ರೂ.ಗಳನ್ನು ಪಾಲಿಕೆ ಖರ್ಚು ಮಾಡಿತ್ತು. ಕಳೆದ ಬಾರಿ ರಿಕ್ಷಾ, ಪಿಕ್‌ಅಪ್ ಮೊದಲಾದವುಗಳಲ್ಲಿ ಬ್ಯಾರಲ್‌ಗಳಲ್ಲಿ ನೀರು ಹೊತ್ತೊಯ್ಯುವ ಸ್ಥಿತಿ ನಗರದ ಜನ ಅನುಭವಿಸಿದ್ದಾರೆ.

ಆದರೆ ಈ ಬಾರಿ ಅಂತಹ ಸ್ಥಿತಿ ಬಾರದಿರಲೆಂದು ಆರಂಭದಿಂದಲೇ ಮುನ್ನೆಚ್ಚರಿಕೆ ವಹಿಸಲಾಗಿದೆ. ರೇಶನಿಂಗ್ ವ್ಯವಸ್ಥೆಯ ಮೂಲಕ ಇರುವ ನೀರನ್ನು ಅತ್ಯಂತ ವ್ಯವಸ್ಥಿತವಾಗಿ ಉಪಯೋಗಿಸಲು ಕ್ರಮ ಕೈಗೊಳ್ಳಲಾಗಿದೆ. ಮನಪಾ ಆಡಳಿತದ ಈ ಅಚ್ಚುಕಟ್ಟಿನ ವ್ಯವಸ್ಥೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುವ ಹೊರತು ಈ ರೀತಿ ಆರೋಪ ಮಾಡುವುದು ಸರಿಯಲ್ಲ ಎಂದು ಮೇಯರ್ ಕವಿತಾ ಸನಿಲ್ ತಿಳಿಸಿದರು. ಗೋಷ್ಠಿಯಲ್ಲಿ ಉಪ ಮೇಯರ್ ರಜನೀಶ್, ಮುಖ್ಯ ಸಚೇತಕ ಶಶಿಧರ ಹೆಗ್ಡೆ, ಸ್ಥಾಯಿ ಸಮಿತಿ ಅಧ್ಯಕ್ಷೆ ಸಬಿತಾ ಮಿಸ್ಕಿತ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News