ಬಂಟ್ವಾಳ: ನದಿಯಲ್ಲಿ ಬಟ್ಟೆ ಒಗೆಯುತ್ತಿದ್ದ ವೇಳೆ ಸಿಡಿಲು ಬಡಿದು ಇಬ್ಬರು ಮಹಿಳೆಯರು, ಮಗು ಮೃತ್ಯು
ಬಂಟ್ವಾಳ, ಎ. 12: ನೇತ್ರಾವತಿ ನದಿಯಲ್ಲಿ ಬಟ್ಟೆ ತೊಳೆಯುತ್ತಿದ್ದಾಗ ಸಿಡಿಲು ಬಡಿದು ಬಾಲಕಿಯೊಬ್ಬಳ ಸಹಿತ ಮೂವರು ವಲಸೆ ಕಾರ್ಮಿಕರು ಮೃತಪಟ್ಟು ಮಗುವೊಂದು ಗಂಭೀರವಾಗಿ ಗಾಯಗೊಂಡ ದಾರುಣ ಘಟನೆ ತಾಲೂಕಿನ ಜಕ್ರಿಬೆಟ್ಟುವಿನಲ್ಲಿ ಬುಧವಾರ ಸಂಜೆ ನಡೆದಿದೆ.
ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಡ್ಯಾಗೇರ ಹಳ್ಳಿಯ ಜಯಣ್ಣ ಎಂಬವರ ಪತ್ನಿ ಜಯಮ್ಮ(28), ತಿಮ್ಮಯ್ಯ ಎಂಬವರ ಪತ್ನಿ ಕನಕಮ್ಮ(30), ಈರಣ್ಣ, ಪದ್ಮಾವತಿ ದಂಪತಿಯ ಪುತ್ರಿ ಶಶಿಕಲಾ(7) ಮೃತಪಟ್ಟವರು. ಮೃತ ಕನಕಮ್ಮರ ಎರಡು ವರ್ಷದ ಮಗು ಲಿಖಿತ ಗಂಭೀರ ಗಾಯಗೊಂಡಿದ್ದು ಮಂಗಳೂರು ಸರಕಾರಿ ಆಸ್ಪತೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಜಯಮ್ಮ, ಕನಕಮ್ಮ ಸ್ಥಳದಲ್ಲೇ ಮೃತಪಟ್ಟರೆ ಬಾಲಕಿ ಶಶಿಕಲಾ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಗಂಭೀರವಾಗಿ ಗಾಯಗೊಂಡಿರುವ ಲಿಖಿತಳಿಗೆ ಬಂಟ್ವಾಳ ಸಮುದಾಯ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿದ ಬಳಿಕ ಮಂಗಳೂರು ಸರಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಜಯಮ್ಮರ ಮೃತದೇಹ ನದಿ ನೀರಿನಲ್ಲಿ ಮುಳುಗಿದ ಸ್ಥಿತಿಯಲ್ಲಿ ಪತ್ತೆಯಾದರೆ ಕನಕಮ್ಮರ ಮೃತದೇಹ ಬಂಡೆಕಲ್ಲಿನ ಮೇಲೆ ಪತ್ತೆಯಾಗಿದೆ. ಘಟನೆಯ ಸಂದರ್ಭ ಬಾಲಕಿ ಶಶಿಕಲಾ ಮತ್ತು ಮಗು ಲಿಖಿತ ಬಂಡಕಲ್ಲಿನಲ್ಲಿ ಕುಳಿತಿದ್ದರು ಎಂದು ತಿಳಿದು ಬಂದಿದೆ.
ಬಂಟ್ವಾಳ ಪುರಸಭಾ ವ್ಯಾಪ್ತಿಯಲ್ಲಿ ಪುರಸಭೆಯಿಂದ ನಿರ್ಮಾಣಗೊಳ್ಳುತ್ತಿರುವ 52 ಕೋಟಿ ರೂ. ವೆಚ್ಚದ ಎರಡನೆ ಹಂತದ ಸಮಗ್ರ ಕುಡಿಯುವ ನೀರಿನ ಯೋಜನೆಯ ಕಾಮಗಾರಿ ಭರದಿಂದ ಸಾಗಿದ್ದು, ಇದರ ಕೆಲಸಕ್ಕೆಂದು ಉತ್ತರ ಕರ್ನಾಟಕದ ವಿವಿಧ ಭಾಗಗಳಿಂದ ಹಲವು ಮಂದಿ ಕಾರ್ಮಿಕರು ಬಂದಿದ್ದಾರೆ. ಪತಿಯಂದಿರು ಎರಡು ತಿಂಗಳಿಂದ ಬಂಟ್ವಾಳದಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಜಯಮ್ಮ ಮತ್ತು ಕನಕಮ್ಮ ವಾರದ ಹಿಂದೆಯಷ್ಟೇ ಬಂಟ್ವಾಳಕ್ಕೆ ಆಗಮಿಸಿದ್ದು, ಅವರು ಇನ್ನಷ್ಟೆ ಕೆಲಸಕ್ಕೆ ಸೇರಬೇಕಿತ್ತು ಎಂದು ತಂಡದೊಂದಿಗಿರುವ ಕಾರ್ಮಿಕರೊಬ್ಬರು ಪತ್ರಿಕೆಗೆ ತಿಳಿಸಿದ್ದಾರೆ.
ಕನಕಮ್ಮ ಹಾಗೂ ಜಯಮ್ಮ ಬುಧವಾರ ಸಂಜೆ ಬಟ್ಟೆ ತೊಳೆಯಲೆಂದು ಜಕ್ರಿಬೆಟ್ಟುವಿನಲ್ಲಿ ನಿರ್ಮಾಣವಾಗುತ್ತಿರುವ ಎರಡನೆ ಹಂತದ ಕುಡಿಯುವ ನೀರಿನ ಪಂಪ್‌ಹೌಸ್ ಬಳಿ ನೇತ್ರಾವತಿ ನದಿಗೆ ತೆರಳಿದ್ದರು. ಈ ಸಂದರ್ಭ ಕನಕಮ್ಮ ತನ್ನ ಎರಡು ವರ್ಷದ ಮಗು ಲಿಖಿತ ಹಾಗೂ ಒಂದೇ ತಂಡದಲ್ಲಿ ಕೆಲಸ ಮಾಡುವ ಕಾರ್ಮಿಕರಾದ ಈರಣ್ಣ, ಪದ್ಮಾವತಿ ದಂಪತಿಯ ಪುತ್ರಿ ಶಶಿಕಲಾಳನ್ನು ಜೊತೆಯಲ್ಲಿ ಕರೆದುಕೊಂಡು ಹೋಗಿದ್ದಾರೆನ್ನಲಾಗಿದೆ. ಈ ಸಂದರ್ದಲ್ಲಿ ಬಡಿದ ಸಿಡಿಲಿಗೆ ಈ ದುರ್ಘಟನೆ ಸಂಭವಿಸಿದೆ.
ಸಂಜೆಯ ವೇಳೆಗೆ ಬಿ.ಸಿ.ರೋಡ್ ಪರಿಸರದಲ್ಲಿ ಯಾವುದೇ ಅಬ್ಬರವಿಲ್ಲದೆ ಸಣ್ಣ ಪ್ರಮಾಣದ ಶಬ್ದದೊಂದಿಗೆ ಸಿಡಿಲೊಂದು ಬಂದಿತ್ತು. ಈ ಸಿಡಿಲಿಗೆ ಮೂವರು ಮೃತಪಟ್ಟು ಮಗುವೊಂದು ಗಂಭೀರ ಗಾಯಗೊಂಡ ಘಟನೆ ತಾಲೂಕಿನ ಜನರನ್ನು ಅಶ್ಚರ್ಯಕ್ಕೀಡು ಮಾಡಿದೆ. ಸಿಡಿಲಿಗೆ ಮೂವರು ಮೃತಪಟ್ಟಿದ್ದಾರೆ ಎಂಬ ಸುದ್ದಿಯನ್ನು ನಂಬಲು ಮೊದಲು ತಾಲೂಕಿನ ಜನರು ಸಿದ್ಧರಿರಲಿಲ್ಲ.
ಘಟನಾ ಸ್ಥಳಕ್ಕೆ ಬಂಟ್ವಾಳ ತಹಶೀಲ್ದಾರ್ ಪುರಂದರ ಹೆಗ್ಡೆ, ಬಂಟ್ವಾಳ ಉಪ ವಿಭಾಗದ ಡಿವೈಎಸ್ಪಿ ರವೀಶ್ ಸಿ.ಆರ್., ಬಂಟ್ವಾಳ ನಗರ ಠಾಣಾಧಿಕಾರಿ ಎ.ಕೆ.ರಕ್ಷಿತ್ ಗೌಡ ಹಾಗೂ ಅವರ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಬಂಟ್ವಾಳ ಸಮುದಾಯ ಆಸ್ಪತ್ರೆಗೆ ಸಾಗಿಸಲಾಯಿತು.