ಲಂಚ ಸ್ವೀಕಾರ ಆರೋಪ: ಅಧಿಕಾರಿಯ ಸೆರೆ
Update: 2017-04-12 18:53 IST
ಮಂಗಳೂರು, ಎ.12: ಭೂ ಪರಿವರ್ತನೆ ಮಾಡಲು 10 ಸಾವಿರ ರೂ. ಲಂಚ ಸ್ವೀಕರಿಸುತ್ತಿದ್ದ ಪುತ್ತೂರು ನಗರ ಯೋಜನೆ ಇಲಾಖೆ ಉಪನಿರ್ದೇಶಕಿಯನ್ನು ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ)ಬಂಧಿಸಿದೆ.
ಪುತ್ತೂರು ತಾಲೂಕಿನ ಅರ್ಯಾಪು ಗ್ರಾಮದಲ್ಲಿ ವಾಸವಾಗಿರುವ ಪಿ.ಕೇಶವ ಸುವರ್ಣ ತಮ್ಮ ಜಮೀನನ್ನು ವಾಣಿಜ್ಯ ಪರಿವರ್ತನೆಗಾಗಿ ಪುತ್ತೂರು ನಗರ ಅಭಿವೃದ್ಧಿ ಪ್ರಾಧಿಕಾರದ ಕಚೇರಿಯಲ್ಲಿ ಅರ್ಜಿ ಸಲ್ಲಿಸಿದ್ದರು. ಇದರ ಎನ್‌ಒಸಿ ನೀಡಲು ನಗರ ಯೋಜನೆ ಪುತ್ತೂರು ಉಪನಿರ್ದೇಶಕಿ ಲಾವಣ್ಯ 10 ಸಾವಿರ ರೂ. ಹಣ ನೀಡುವಂತೆ ಒತ್ತಾಯಿಸಿದ್ದರು ಎನ್ನಲಾಗಿದೆ. ಈ ಬಗ್ಗೆ ಅರ್ಜಿದಾರರು ಭ್ರಷ್ಟಾಚಾರ ನಿಗ್ರಹ ದಳಕ್ಕೆ ದೂರು ಸಲ್ಲಿಸಿದ್ದರು. ಅದರಂತೆ ಬುಧವಾರ ದೂರುದಾರರಿಂದ ಲಾವಣ್ಯ ಲಂಚ ಸ್ವೀಕರಿಸುತ್ತಿದ್ದ ಸಂದರ್ಭ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದರು.
ಆರೋಪಿ ಅಧಿಕಾರಿಯನ್ನು ಬಂಧಿಸಿ ಭ್ರಷ್ಟಾಚಾರ ತಡೆ ಕಾಯ್ದೆಯಡಿ ಪ್ರಕರಣವನ್ನು ದಾಖಲಿಸಲಾಗಿದ್ದು, ತನಿಖೆ ಮುಂದುವರೆದಿದೆ.