×
Ad

ಗೋವನ್ನು ರಕ್ಷಿಸುವ ನಿಮ್ಮಿಂದ ಮಹಿಳೆಯರ ರಕ್ಷಣೆ ಯಾಕಿಲ್ಲ?

Update: 2017-04-12 19:11 IST

ಹೊಸದಿಲ್ಲಿ, ಎ.12: ಪ.ಬಂಗಾಲ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತಲೆ ಕತ್ತರಿಸಿದವರಿಗೆ 11 ಲಕ್ಷ ರೂ. ಬಹುಮಾನ ಘೋಷಿಸಿದ ಬಿಜೆಪಿ ಯುವವಿಭಾಗದ ಮುಖಂಡ ಯೋಗೇಶ್ ವಾರ್ಷ್ನಿ ಹೇಳಿಕೆ ಬಗ್ಗೆ ಸಂಸತ್ತಿನಲ್ಲಿ ವಿರೋಧ ಪಕ್ಷದವರು ತೀವ್ರ ಖಂಡನೆ ವ್ಯಕ್ತಪಡಿಸಿದ್ದಾರೆ.

ಸಂಸತ್ತಿನಲ್ಲಿ ವಿಷಯ ಪ್ರಸ್ತಾಪಿಸಲ್ಪಟ್ಟಾಗ ಹೇಳಿಕೆ ನೀಡಿದ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ, ಈ ಹೇಳಿಕೆಯನ್ನು ಖಂಡಿಸುತ್ತೇನೆ. ಸೂಕ್ತ ಕ್ರಮ ಕೈಗೊಳ್ಳಲು ರಾಜ್ಯ ಸರಕಾರಕ್ಕೆ ಮುಕ್ತ ಅವಕಾಶವಿದೆ ಎಂದರು. ಆದರೆ ಈ ಹೇಳಿಕೆಯಿಂದ ತೃಪ್ತರಾಗದ ವಿರೋಧ ಪಕ್ಷಗಳು ತಕ್ಷಣ ಯೋಗೇಶ್‌ರನ್ನು ಬಂಧಿಸಬೇಕೆಂದು ಆಗ್ರಹಿಸಿದವು. ರಾಜ್ಯಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಟಿಎಂಸಿಯ ಸಂಸದ ಸುಖೇಂದು ಶೇಖರ್, ಪ.ಬಂಗಾಲದ ಮುಖ್ಯಮಂತ್ರಿಯನ್ನು ಸೈತಾನ ಎಂದು ಕರೆಯಲಾಗಿದೆ. ಬಂಗಾಲದಲ್ಲಿ ಧರ್ಮದ ಹೆಸರಲ್ಲಿ ಭೀತಿವಾದದ ವಾತಾವರಣ ಮೂಡಿಸುವ ಪ್ರಯತ್ನ ಸಾಗುತ್ತಿದೆ. ಇಂತಹ ಘಟನೆಯನ್ನು ಖಂಡಿಸಬೇಕು ಎಂದರು.

ವಿಷಯವನ್ನು ಖಂಡಿಸಿದ ಸಮಾಜವಾದಿ ಪಕ್ಷದ ಸಂಸದೆ ಜಯಾ ಬಚ್ಚನ್ , ನೀವು ಗೋವುಗಳನ್ನು ರಕ್ಷಿಸಬಹುದು. ಆದರೆ ಮಹಿಳೆಯರ ಮೇಲೆ ದೌರ್ಜನ್ಯ ಮುಂದುವರಿದಿದೆ ಎಂದು ಹೇಳಿದರು. ಮಹಿಳೆಯರ ಬಗ್ಗೆ ಈ ರೀತಿ ಮಾತಾಡಲು ಅದೆಷ್ಟು ಧೈರ್ಯ ಬೇಕು? ನಿಮ್ಮ ಪ್ರಕಾರ, ಮಹಿಳೆಯರನ್ನು ರಕ್ಷಿಸುವ ರೀತಿಯೆಂದರೆ ಇದೇ ಆಗಿರಬಹುದು ಅಲ್ಲವೇ ಎಂದು ಎಂದು ಪ್ರಶ್ನಿಸಿದ ಜಯಾ, ಮಹಿಳೆಯರಲ್ಲಿ ಅಸುರಕ್ಷತೆಯ ಭಾವನೆ ಬೆಳೆಯುತ್ತಿದೆ. ಗೋವನ್ನು ರಕ್ಷಿಸುವ ನಿಮಗೆ ಮಹಿಳೆಯರ ರಕ್ಷಣೆ ಸಾಧ್ಯವಿಲ್ಲವೇ ಎಂದು ಕೇಳಿದರು.

ಇದಕ್ಕೆ ಉತ್ತರಿಸಿದ ಬಿಜೆಪಿಯ ರೂಪಾ ಗಂಗುಲಿ, ನಾನೂ ಕೂಡಾ ಮಹಿಳೆ. ತೃಣಮೂಲ ಕಾಂಗ್ರೆಸ್‌ನ 17 ಮಂದಿ ಗೂಂಡಾಗಳು ಪೊಲೀಸರ ಸಮ್ಮುಖದಲ್ಲೇ ನನ್ನ ಮೇಲೆ ಹಲ್ಲೆ ನಡೆಸಿದ್ದರು. ಇದಕ್ಕೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮೊದಲು ಉತ್ತರ ನೀಡಲಿ ಎಂದರು.

ಲೋಕಸಭೆಯಲ್ಲಿ ಮತ್ತೋರ್ವ ಸಚಿವ ಅನಂತಕುಮಾರ್, ಯೋಗೇಶ್ ಹೇಳಿಕೆಯನ್ನು ಖಂಡಿಸಿದರು. ಈ ರೀತಿಯ ಹೇಳಿಕೆ ನೀಡುವವರಿಗೆ ಸರಕಾರದಿಂದ ಕಠಿಣ ಸಂದೇಶ ರವಾನೆಯಾಗಬೇಕು ಎಂದು ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಖರ್ಗೆ ಆಗ್ರಹಿಸಿದರು. ಈ ಹಿಂದಿನ ವಿವಾದಾಸ್ಪದ ಹೇಳಿಕೆಯನ್ನೂ ಉಲ್ಲೇಖಿಸಿದ ಸ್ಪೀಕರ್ ಸುಮಿತ್ರಾ ಮಹಾಜನ್, ಎಲ್ಲಾ ಪಕ್ಷಗಳೂ ಈ ರೀತಿಯ ಹೇಳಿಕೆ ನೀಡದೆ ಸಂಯಮ ವಹಿಸಬೇಕೆಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News