×
Ad

ವ್ಯಸನದಲ್ಲಿದ್ದವರನ್ನು ಎಬ್ಬಿಸಲು ಜಾಗೃತಿ ಮೂಡಿಸುವುದೇ ತಂತ್ರ: ಡಾ.ಹೆಗ್ಗಡೆ

Update: 2017-04-12 19:32 IST

ಬೆಳ್ತಂಗಡಿ, ಎ.12: ನಿದ್ದೆಯಿಂದ ಮಕ್ಕಳನ್ನು ಎಬ್ಬಿಸಿದರೆ ಅಳುವುದು ಸ್ವಾಭಾವಿಕ. ಅವರಾಗಿಯೇ ಜಾಗೃತರಾಗಿ ಎದ್ದರೆ ಶಾಂತವಾಗಿರುತ್ತಾರೆ. ಹಾಗೆಯೇ ವ್ಯಸನದಲ್ಲಿದ್ದವರನ್ನು ಎಬ್ಬಿಸಲು, ಅವರಾಗಿಯೇ ಜಾಗೃತರಾಗಲು ಪ್ರೇರಣೆ ನೀಡುವುದೇ ಮದ್ಯವರ್ಜನ ಶಿಬಿರದ ತಂತ್ರವಾಗಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ ಡಿ. ವೀರೇಂದ್ರ ಹೆಗ್ಗಡೆಯವರು ಅಭಿಪ್ರಾಯಪಟ್ಟರು.

ಉಜಿರೆಯಲ್ಲಿರುವ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವ್ಯಸನಮುಕ್ತಿ ಮತ್ತು ಸಂಶೋಧನಾ ಕೇಂದ್ರದಲ್ಲಿ ನಡೆಯುತ್ತಿರುವ 86ನೇ ವಿಶೇಷ ಮದ್ಯವರ್ಜನ ಶಿಬಿರದಲ್ಲಿ ಭೇಟಿ ನೀಡಿ, ಶಿಬಿರಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.

ಪ್ರತಿಷ್ಠೆಯ ವ್ಯವಹಾರದ ಕುಂಟು ನೆಪವೊಡ್ಡಿ ಸಾಧನಾ ರಹಿತ ಜೀವನ ನಡೆಸಲು ಅಮಲಿನ ಅವಾಂತರ ಕಾರಣವಾಗುತ್ತದೆ. ಕುಡಿತಕ್ಕೆ ಕಾರಣವಿಲ್ಲ. ಗೆದ್ದಾಗ ಮತ್ತು ಸೋತಾಗ ಎರಡನ್ನೂ ಕುಡಿತದ ಅಮಲು ನುಂಗಿ ಬಿಡುತ್ತದೆ. ಒಮ್ಮೆ ಬಿಟ್ಟವರು ಮಗದೊಮ್ಮೆ ಕುಡಿಯಬಾರದು ಎಂದರು.

ಈ ಸಂದರ್ಭ ಯೋಗ, ಧ್ಯಾನ, ಭಜನೆ, ಆಟೋಟ, ಗುಂಪು ಸಲಹೆ, ಕೌಟುಂಬಿಕ ಸಲಹೆ, ಗುಂಪು ಚಟುವಟಿಕೆ, ಕಿರುಚಿತ್ರಗಳ ಪ್ರದರ್ಶನ ನೀಡಲಾಯಿತು. ಶಿಬಿರದಲ್ಲಿ ರಾಜ್ಯದ ಮತ್ತು ಹೊರರಾಜ್ಯಗಳ 83 ಶಿಬಿರಾರ್ಥಿಗಳು ಭಾಗವಹಿಸಿದ್ದರು. ವಿಶ್ವ ಆರೋಗ್ಯ ಸಂಸ್ಥೆ ಮತ್ತು ಮನೋವೈದ್ಯಕೀಯ ವಿಭಾಗದಿಂದ ಸೂಚಿಸಲ್ಪಡುವ ಉಪಯುಕ್ತ ಚಿಕಿತ್ಸೆಯನ್ನು 8 ದಿನಗಳ ಕಾಲ ನಡೆಯುವ ಶಿಬಿರದಲ್ಲಿ ಶಿಬಿರಾರ್ಥಿಗಳಿಗೆ ಒದಗಿಸಲಾಗಿದೆ. 

ಈ ಸಂದರ್ಭ ನಿರ್ದೇಶಕ ವಿವೇಕ್ ವಿ., ಯೋಜನಾಧಿಕಾರಿ ತಿಮ್ಮಯ್ಯ ನಾಯ್ಕ, ಸಲಹೆಗಾರ ಚೈತನ್ಯ ಜೈನ್, ಶಿಬಿರಾಧಿಕಾರಿಗಳಾದ ಗಣೇಶ್ ಆಚಾರ್ಯ ಮಾಧವ, ಆರೋಗ್ಯ ಸಹಾಯಕಿ ಚಿತ್ರಾ, ಡಾ. ಹೆಗ್ಗಡೆಯವರ ಆಪ್ತ ಕಾರ್ಯದರ್ಶಿ ವೀರು ಶೆಟ್ಟಿ, ಬಂಟ್ವಾಳ ಡಿವೈಎಸ್‌ಪಿ ರವೀಶ್, ಜನಜಾಗೃತಿ ವೇದಿಕೆ ರಾಜ್ಯಾಧ್ಯಕ್ಷ ಸತೀಶ್ ಹೊನ್ನವಳ್ಳಿ, ಸ್ಥಾಪಕಾಧ್ಯಕ್ಷ ಕೆ. ವಸಂತ ಸಾಲ್ಯಾನ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News