ವಿಮಾನದಿಂದ ಪ್ರಯಾಣಿಕನನ್ನು ದರ ದರನೆ ನೆಲದಲ್ಲಿ ಎಳೆದೊಯ್ದ ಪ್ರಕರಣ : ಕ್ಷಮೆ ಕೋರಿದ ವಿಮಾನ ಸಂಸ್ಥೆಯ ಮುಖ್ಯಸ್ಥ
ಶಿಕಾಗೊ (ಅಮೆರಿಕ), ಎ. 12: ಯುನೈಟೆಡ್ ಏರ್‌ಲೈನ್ಸ್ ವಿಮಾನವೊಂದರಿಂದ ಪ್ರಯಾಣಿಕರೊಬ್ಬರನ್ನು ದರ ದರನೆ ನೆಲದಲ್ಲಿ ಎಳೆದುಕೊಂಡು ಹೋದ ಘಟನೆಗೆ ಸಂಬಂಧಿಸಿ ವಿಮಾನದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಂಗಳವಾರ ಕ್ಷಮೆ ಕೋರಿದ್ದಾರೆ ಹಾಗೂ ವಿಮಾನಯಾನ ಕಂಪೆನಿಯ ಕಾರ್ಯವಿಧಾನಗಳ ‘ಕೂಲಂಕಷ ಮರುಪರಿಶೀಲನೆ’ ನಡೆಸುವುದಾಗಿ ಭರವಸೆ ನೀಡಿದ್ದಾರೆ.
ವಿಮಾನದಲ್ಲಿ ರವಿವಾರ ನಡೆದ ಘಟನೆಗೆ ವಿಶ್ವಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾದ ಬಳಿಕ, ಆಸ್ಕರ್ ಮನೋಝ್ ನಿಶ್ಶರ್ತ ಕ್ಷಮೆ ಕೋರಿದರು.
ಅಮೆರಿಕದ ಸಾರಿಗೆ ಇಲಾಖೆಯೂ ಘಟನೆ ಬಗ್ಗೆ ತನಿಖೆ ನಡೆಸುವ ಭರವಸೆಯನ್ನು ನೀಡಿದೆ.
‘‘ಈ ವಿಮಾನದಲ್ಲಿ ನಡೆದ ಘಟನೆಯಿಂದ ನಾನು ಆಘಾತಗೊಂಡಿದ್ದೇನೆ. ಬಲವಂತವಾಗಿ ಹೊರದಬ್ಬಲ್ಪಟ್ಟ ಪ್ರಯಾಣಿಕ ಹಾಗೂ ವಿಮಾನದಲ್ಲಿದ್ದ ಇತರ ಪ್ರಯಾಣಿಕರ ಬಳಿ ನಾನು ಕ್ಷಮೆ ಕೋರುತ್ತೇನೆ’’ ಎಂದು ಮನೋಝ್ ಮಂಗಳವಾರ ಹೇಳಿದರು.
ಈ ಹೇಳಿಕೆಯು ಅವರ ಹಿಂದಿನ ಹೇಳಿಕೆಗಳಿಗೆ ವ್ಯತಿರಿಕ್ತವಾಗಿದೆ. ಈ ಮೊದಲು, ತನ್ನ ಕಂಪೆನಿಯ ಉದ್ಯೋಗಿಗಳಿಗೆ ಬರೆದ ಇಮೇಲ್‌ನಲ್ಲಿ, ಘಟನೆಯ ಆಂಶಿಕ ಜವಾಬ್ದಾರಿಯನ್ನು ಅವರು ಸಂತ್ರಸ್ತ ಪ್ರಯಾಣಿಕನ ಮೇಲೆ ಹೊರಿಸಿದ್ದರು. ಪ್ರಯಾಣಿಕ ಅಧಿಕಾರಿಗಳನ್ನು ಧಿಕ್ಕರಿಸಿದರು ಹಾಗೂ ಪರಿಸ್ಥಿತಿಯನ್ನು ಬಿಗಡಾಯಿಸಿದರು ಎಂದು ಅವರು ಹೇಳಿದ್ದರು.
ಆದರೆ, ಲೆಕ್ಕಕ್ಕಿಂತ ಹೆಚ್ಚು ಸಂಖ್ಯೆಯ ಟಿಕೆಟ್‌ಗಳು ಮಾರಾಟವಾಗುವ ಸಂದರ್ಭಗಳಲ್ಲಿ ಏನು ಮಾಡಬೇಕು ಎಂಬ ಕುರಿತ ತನ್ನ ಕಾರ್ಯವಿಧಾನವನ್ನು ಕಂಪೆನಿಯು ಆಮೂಲಾಗ್ರ ಮರುಪರಿಶೀಲನೆಗೆ ಒಡ್ಡುತ್ತದೆ ಎಂಬುದಾಗಿ ತನ್ನ ಮಂಗಳವಾರ ಮೇಲ್‌ನಲ್ಲಿ ಅವರು ಹೇಳಿದ್ದಾರೆ.
ವಿಯೆಟ್ನಾಮ್‌ನಲ್ಲಿ ಆಕ್ರೋಶ
ಹನೋಯಿ (ವಿಯೆಟ್ನಾಮ್), ಎ. 12: ಅಮೆರಿಕದಲ್ಲಿ ಯುನೈಟೆಡ್ ಏರ್‌ಲೈನ್ಸ್ ವಿಮಾನವೊಂದರಿಂದ ಅಮಾನವೀಯವಾಗಿ ಹೊರದಬ್ಬಲ್ಪಟ್ಟ ಪ್ರಯಾಣಿಕ ವಿಯೆಟ್ನಾಮ್ ಸಂಜಾತ ಎನ್ನುವುದು ಹೊರಬೀಳುತ್ತಿದ್ದಂತೆಯೇ, ಆ ದೇಶಾದ್ಯಂತ ಬುಧವಾರ ಆಕ್ರೋಶ ಹೊಗೆಯಾಡಿದೆ.
ಅಮೆರಿಕದಲ್ಲಿ ವೈದ್ಯರಾಗಿರುವ ವಿಯೆಟ್ನಾಮ್ ಸಂಜಾತ 69 ವರ್ಷದ ವ್ಯಕ್ತಿಯನ್ನು ಪೊಲೀಸರು ರವಿವಾರ ವಿಮಾನದಿಂದ ದರ ದರನೆ ನೆಲದ ಮೇಲಿಂದಲೇ ಎಳೆದುಕೊಂಡು ಹೋಗಿ ಹೊರಹಾಕಿದ್ದು ಭಾರಿ ವಿವಾದಕ್ಕೆ ಕಾರಣವಾಗಿತ್ತು.
ವಿಮಾನಯಾನ ಕಂಪೆನಿಯ ಸಿಬ್ಬಂದಿ ನಿಗದಿಗಿಂತ ಅಧಿಕ ಪ್ರಯಾಣಿಕರಿಗೆ ಟಿಕೆಟ್ ನೀಡಿದ್ದು ಈ ರಾದ್ಧಾಂತಕ್ಕೆ ಕಾರಣವಾಗಿತ್ತು. ವಿಮಾನ ಸಿಬ್ಬಂದಿಗಳಿಗೆ ವಿಮಾನದಲ್ಲಿ ಅವಕಾಶ ಮಾಡಿಕೊಡುವುದಕ್ಕಾಗಿ ಸಂಸ್ಥೆಯು ಈ ಕ್ರಮಕ್ಕೆ ಮುಂದಾಗಿತ್ತು.
ಡೇವಿಡ್ ಡಾವೊ ಅವರನ್ನು ನಡೆಸಿಕೊಂಡ ರೀತಿಗಾಗಿ ಯುನೈಟೆಡ್ ಏರ್‌ಲೈನ್ಸ್ ವಿಮಾನವನ್ನು ಬಹಿಷ್ಕರಿಸಬೇಕು ಎಂಬ ಕರೆಯನ್ನು ಸಾಮಾಜಿಕ ಮಾಧ್ಯಮಗಳಲ್ಲಿ ನೀಡಲಾಗಿದೆ.
ಆದಾಗ್ಯೂ, ಯುನೈಟೆಡ್ ಏರ್‌ಲೈನ್ಸ್ ವಿಯೆಟ್ನಾಮ್‌ಗೆ ನೇರ ವಿಮಾನ ಸಂಪರ್ಕವನ್ನು ಹೊಂದಿಲ್ಲ.
ಸಂತ್ರಸ್ತ ಪ್ರಯಾಣಿಕ ಚೀನಾ ಮೂಲದವರು ಎಂಬುದಾಗಿ ಆರಂಭದಲ್ಲಿ ತಿಳಿಯಲಾಗಿತ್ತು. ಆದರೆ, ಅವರು ವಿಯೆಟ್ನಾಮ್ ಮೂಲದವರು ಎನ್ನುವುದು ಖಚಿತವಾದ ಬಳಿಕ ವಿಯೆಟ್ನಾಮ್‌ನಲ್ಲಿ ಆಕ್ರೋಶ ಹೆಪ್ಪುಗಟ್ಟಿತು.