ಉತ್ತರ ಕೊರಿಯ: ಶಾಂತಿಯುತ ಇತ್ಯರ್ಥಕ್ಕೆ ಚೀನಾ ಒತ್ತಾಯ

Update: 2017-04-12 14:49 GMT

ಬೀಜಿಂಗ್, ಎ. 12: ಉತ್ತರ ಕೊರಿಯದ ಪರಮಾಣು ಕಾರ್ಯಕ್ರಮದಿಂದ ಉದ್ಭವಿಸಿರುವ ಉದ್ವಿಗ್ನತೆಯನ್ನು ಶಾಂತಿಯುತವಾಗಿ ಬಗೆಹರಿಸಿಕೊಳ್ಳುವಂತೆ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರನ್ನು ಒತ್ತಾಯಿಸಿದ್ದಾರೆ.

ಅಮೆರಿಕದ ಯುದ್ಧ ನೌಕೆಗಳು ಕೊರಿಯನ್ ಪರ್ಯಾಯ ದ್ವೀಪದತ್ತ ಧಾವಿಸುತ್ತಿರುವಂತೆಯೇ, ಈ ಬೆಳವಣಿಗೆ ನಡೆದಿದೆ.

ವಿಮಾನವಾಹಕ ನೌಕೆ ಸೇರಿದಂತೆ ನೌಕಾ ಬಲವನ್ನು ಕೊರಿಯ ಪರ್ಯಾಯ ದ್ವೀಪದಲ್ಲಿ ಟ್ರಂಪ್ ನಿಯೋಜಿಸಿದ ಬಳಿಕ, ಉದ್ವಿಗ್ನತೆ ಮತ್ತಷ್ಟು ವಿಕೋಪಕ್ಕೆ ಹೋಗದಂತೆ ತಡೆಯುವ ಯತ್ನವಾಗಿ ಉಭಯ ನಾಯಕರು ಫೋನ್‌ನಲ್ಲಿ ಮಾತುಕತೆ ನಡೆಸಿದರು ಎಂದು ಚೀನಾದ ಸರಕಾರಿ ಮಾಧ್ಯಮ ಬುಧವಾರ ವರದಿ ಮಾಡಿದೆ.

ತನ್ನ ನೆರೆ ದೇಶದ ಪರಮಾಣು ಮಹತ್ವಾಕಾಂಕ್ಷೆಯನ್ನು ನಿಯಂತ್ರಿಸಲು ಚೀನಾ ನೆರವು ನೀಡದಿದ್ದರೆ, ಉತ್ತರ ಕೊರಿಯವನ್ನು ಏಕಾಂಗಿಯಾಗಿ ಎದುರಿಸಲು ಅಮೆರಿಕ ಸಿದ್ಧ ಎಂಬ ಎಚ್ಚರಿಕೆಯನ್ನು ಅಮೆರಿಕದ ಅಧ್ಯಕ್ಷರು ಇತ್ತೀಚೆಗೆ ನೀಡಿರುವುದನ್ನು ಸ್ಮರಿಸಬಹುದಾಗಿದೆ.

ಇದಕ್ಕೆ ಪ್ರತಿಕ್ರಿಯಿಸಿರುವ ಉತ್ತರ ಕೊರಿಯ, ಅಮೆರಿಕ ಆಯ್ದುಕೊಳ್ಳುವ ‘ಯಾವುದೇ ರೀತಿಯ ಯುದ್ಧ’ಕ್ಕೂ ತಾನು ಸಿದ್ಧ ಎಂದು ಹೇಳಿದೆ ಹಾಗೂ ಅಮೆರಿಕದ ನೆಲೆಗಳ ಮೇಲೆ ಪರಮಾಣು ದಾಳಿಗಳನ್ನು ನಡೆಸುವ ಬೆದರಿಕೆಯನ್ನೂ ಹಾಕಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News