×
Ad

ಕರ್ಣಾಟಕ ಬ್ಯಾಂಕ್ ಅಧ್ಯಕ್ಷರಾಗಿ ಪಿ.ಜಯರಾಮ ಭಟ್ ನೇಮಕ

Update: 2017-04-12 20:25 IST

ಮಂಗಳೂರು, ಎ.12: ಖಾಸಗಿ ರಂಗದ ಪ್ರತಿಷ್ಠಿತ ಬ್ಯಾಂಕ್ ಆಗಿರುವ ಕರ್ಣಾಟಕ ಬ್ಯಾಂಕ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಆಡಳಿತ ನಿರ್ದೇಶಕರಾಗಿದ್ದ ಪಿ.ಜಯರಾಮ ಭಟ್ ಮುಂದಿನ ಮೂರು ವರ್ಷದ ಅವಧಿಗೆ ಅರೆ ಕಾಲಿಕ (ನಾನ್ ಎಕ್ಸ್‌ಕ್ಯೂಟಿವ್ )ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ. ನೂತನ ಎಂ.ಡಿ., ಸಿಇಒ ಆಗಿ ಮಹಾಬಲೇಶ್ವರ ಎಂ.ಎಸ್. ನೇಮಕಗೊಂಡಿರುವುದಾಗಿ ನೂತನ ಅಧ್ಯಕ್ಷರು ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ. 

ಅ.26, 2016ರಲ್ಲಿ ಬ್ಯಾಂಕಿನ ಅಧ್ಯಕ್ಷರಾಗಿದ್ದ ಅನಂತಕೃಷ್ಣ ನಿವೃತ್ತರಾದ ಬಳಿಕ ತೆರವಾಗಿದ್ದ ಈ ಹುದ್ದೆಗೆ ಬ್ಯಾಂಕಿನ ಕೇಂದ್ರ ಕಚೇರಿಯಲ್ಲಿ ಇಂದು ನಡೆದ ನಿರ್ದೇಶಕರ ಮಂಡಳಿಯ ಸಭೆಯಲ್ಲಿ ನೂತನ ಆಯ್ಕೆ ನಡೆದಿದೆ. ಜುಲೈ14, 2009ರಲ್ಲಿ ಕರ್ಣಾಟಕ ಬ್ಯಾಂಕಿನ ಆಡಳಿತ ನಿರ್ದೇಶಕ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಎದುರಾದ ಸವಾಲುಗಳನ್ನು ಎದುರಿಸಿ ಬ್ಯಾಂಕನ್ನು ಸಮರ್ಥವಾಗಿ ನಡೆಸಿ, ಬಲಿಷ್ಠ ಬ್ಯಾಂಕ್ ಆಗಿ ಪರಿವರ್ತಿಸಲು ಪ್ರಯತ್ನಿಸಿದ್ದೇನೆ. ಮುಂದಿನ ಸಿಇಒ ಮತ್ತು ಎಂ.ಡಿ.ಯಾಗಿ ಮಹಾಬಲೇಶ್ವರ ರಾವ್ ಎಂ.ಎಸ್. ಅವರಿಗೆ ಅಧಿಕಾರವನ್ನು ಹಸ್ತಾಂತರಿಸಲು ಸಂತೋಷಪಡುತ್ತೇನೆ. ಅವರ ಅವಧಿಯಲ್ಲಿ ಬ್ಯಾಂಕ್ ಇನ್ನಷ್ಟು ಸಾಧನೆಯನ್ನು ಮಾಡಿ ಉನ್ನತ ಮಟ್ಟಕ್ಕೆ ತಲುಪುತ್ತದೆ ಎಂಬ ವಿಶ್ವಾಸ ಹೊಂದಿರುವುದಾಗಿ ಜಯರಾಮ ಭಟ್ ತಿಳಿಸಿದ್ದಾರೆ.

ಜಯರಾಮ ಭಟ್ ಬ್ಯಾಂಕಿನ ಸಿಇಒ ಮತ್ತು ಎಂ.ಡಿ.ಯಾಗಿ ಅಧಿಕಾರ ಸ್ವೀಕರಿಸಿದ ಬಳಿಕದ ಎಂಟು ವರ್ಷಗಳಲ್ಲಿ ಬ್ಯಾಂಕಿನ ಆರ್ಥಿಕ ವಹಿವಾಟು 32,034 ಕೋಟಿ ರೂಪಾಯಿಯಿಂದ 93,843 ಕೋಟಿ ರೂಪಾಯಿಗೆ ಏರಿಕೆಯಾಗಿದೆ. ಠೇವಣಿ ಸಂಗ್ರಹ 21,044 ಕೋಟಿ ರೂ. ನಿಂದ 56,737 ಕೋಟಿ ರೂ.ಗೆ ಏರಿಕೆಯಾಗಿದೆ. ಸಾಲ ನೀಡಿಕೆಯ ಪ್ರಮಾಣ 10,990 ಕೋಟಿ ರೂ.ನಿಂದ 37,106 ಕೋಟಿ ರೂ.ಗೆ ಏರಿಕೆಯಾಗಿದೆ..

ಚಾಲ್ತಿ ಖಾತೆ ಹಾಗೂ ಉಳಿತಾಯ ಖಾತೆಗಳ ಸಂಖ್ಯೆ ಶೇ.18.80 ರಿಂದ ಶೇ.29.03ಗೆ ಏರಿಕೆಯಾಗಿದ್ದು, 2015-16ರಲ್ಲಿ ಬ್ಯಾಂಕ್ 451 ಕೋಟಿ ರೂ. ಲಾಭ ಗಳಿಕೆಯೊಂದಿಗೆ ಗರಿಷ್ಠ ಮಟ್ಟವನ್ನು ಸಾಧಿಸಿದೆ. ಇವರ ಅವಧಿಯಲ್ಲಿ ಆರಂಭಗೊಂಡ 316 ಶಾಖೆಗಳು ಹೆಚ್ಚುವರಿಯಾಗಿ  ಮಾರ್ಚ್ ಅಂತ್ಯದ ವೇಳೆಗೆ 765ಕ್ಕೆ ತಲುಪಿವೆ. ಎಟಿಎಂ ಸಂಖ್ಯೆ 177ರಿಂದ 1,380ಕ್ಕೆ ಏರಿಕೆಯಾಗಿದೆ. 110 ಇ-ಲಾಭಿಗಳು ಸ್ಥಾಪನೆಯಾಗಿದೆ. ಬ್ಯಾಂಕಿನ ಒಟ್ಟು ಸೊತ್ತಿನ ಮೌಲ್ಯ 1,567 ಕೋಟಿ ರೂ. ಗಳಿಂದ 4,769 ಕೋಟಿ ರೂ. ಗೆ ಏರಿಕೆಯಾಗಿದೆ. ಬ್ಯಾಂಕ್ ಈ ಅವಧಿಯಲ್ಲಿ ಹಲವು ಪ್ರಶಸ್ತಿ ಪುರಸ್ಕಾರಗಳಿಗೆ ಪಾತ್ರವಾಗಿದ್ದು, ಜಯರಾಮ್ ಭಟ್ ಎಂ.ಡಿ.ಯಾಗಿ ತಮ್ಮ ಅವಧಿ ಪೂರ್ಣಗೊಳ್ಳುವ 15 ತಿಂಗಳು ಮುಂಚಿತವಾಗಿ ಹುದ್ದೆಯಿಂದ ತೆರಳಿದ್ದಾರೆ.

ಅವರು ನಮಗೆ ಉತ್ತಮ ಮಾರ್ಗದರ್ಶಕರಾಗಿದ್ದರು. ಅವರ ಸಮರ್ಥ ನಾಯಕತ್ವದಲ್ಲಿ ಬ್ಯಾಂಕ್ 8 ಮಿಲಿಯಕ್ಕೂ ಅಧಿಕ ಗ್ರಾಹಕರನ್ನು ಹೊಂದು ವಂತಾಗಿದೆ. ಜೊತೆಗೆ ಬ್ಯಾಂಕಿನ ಪಾಲುದಾರರಿಗೆ ಸೇವೆ ಸಲ್ಲಿಸುವ ಸಾಮಾಜಿಕ ಹೊಣೆಗಾರಿಕೆಯನ್ನು ನಿಭಾಯಿಸಿದೆ ಎಂದು ನೂತನ ಎಂ.ಡಿ ಹಾಗೂ ಸಿಇಒ ಮಹಾಬಲೇಶ್ವರ ತಿಳಿಸಿದ್ದಾರೆ.

ನೂತನ ಸಿಇಒ, ಎಂ.ಡಿ ಮಹಾಬಲೇಶ್ವರ ಎಂ.ಎಸ್.

32 ವರ್ಷಗಳಿಂದ ಕರ್ಣಾಟಕ ಬ್ಯಾಂಕಿನ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿರುವ ಅನುಭವ ಹೊಂದಿರುವ ಮಹಾಬಲೇಶ್ವರ ಎಂ.ಎಸ್. ಕೃಷಿ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದು, ಯುಎಸ್‌ಎಯ ವಿಶ್ವ ವಿದ್ಯಾನಿಲಯದಿಂದ ಪದವಿ ಪಡೆದಿದ್ದಾರೆ. ವ್ಯವಹಾರ ಆಡಳಿತದಲ್ಲಿ ಸ್ನಾತಕೋತ್ತರ ಡಿಪ್ಲೋಮಾ ಪದವಿ ಗಳಿಸಿದ್ದಾರೆ

ಬೆಂಗಳೂರು ಕೃಷಿ ವಿಶ್ವ ವಿದ್ಯಾನಿಲಯದಲ್ಲಿ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸುತ್ತಿದ್ದ ಮಹಾಬಲೇಶ್ವರ ಎಂ.ಎಸ್. 1984ರಲ್ಲಿ ಕರ್ಣಾಟಕ ಬ್ಯಾಂಕಿನ ಕೃಷಿ ಕ್ಷೇತ್ರ ಅಧಿಕಾರಿಯಾಗಿ ಕೆಲಸಕ್ಕೆ ನೇಮಕಗೊಂಡು ವಿವಿಧ ಕಡೆಗಳಲ್ಲಿ ಬ್ಯಾಂಕಿನ ವಿವಿಧ ಹೊಣೆಗಾರಿಕೆಯನ್ನು ಸಮರ್ಥವಾಗಿ ನಿಭಾಯಿಸುತ್ತಾ ಪ್ರಧಾನ ವ್ಯವಸ್ಥಾಪಕರಾಗಿ, ಸಹಾಯಕ ಮಹಾ ಪ್ರಬಂಧಕರಾಗಿ, ಮಹಾಪ್ರಬಂಧಕರಾಗಿ ಕಾರ್ಯನಿರ್ವಹಿಸುತ್ತಾ ಬಂದಿದ್ದಾರೆ.

2013ರಲ್ಲಿ ಬ್ಯಾಂಕಿನ ಪ್ರಧಾನ ಮಹಾ ಪ್ರಬಂಧಕರಾಗಿ ನೇಮಕಗೊಂಡಿದ್ದು, ಬ್ಯಾಂಕಿನ ಎಂ.ಡಿ. ಹಾಗೂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯಾಗಿ ಎಪ್ರಿಲ್ 15ರಂದು ಅಧಿಕಾರ ಸ್ವೀಕರಿಸುವುದಾಗಿ ಮಹಾಬಲೇಶ್ವರ ಎಂ.ಎಸ್. ತಿಳಿಸಿದರು.

ಈ ಸಂದರ್ಭ ಬ್ಯಾಂಕಿನ ಮಹಾಪ್ರಬಂಧಕ ರಘುರಾಮ್, ಮೀರಾ ಅರ್ಹಾನ್ನಾ, ರಾಘವೇಂದ್ರ ಭಟ್, ಬಾಲಚಂದ್ರ, ಸುಭಾಸ್ ಚಂದ್ರ ಪುರಾಣಿಕ್, ಮುರಳೀ ಕೃಷ್ಣ ರಾವ್ ಹಾಗೂ ಪ್ರಧಾನ ವ್ಯವಸ್ಥಾಪಕ ಶ್ರೀನಿವಾಸ ದೇಶಪಾಂಡೆ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News