ಮಂಗಳೂರಿನಿಂದ ಇಂಡಿಗೋ ವಿಮಾನ ಹಾರಾಟ

Update: 2017-04-12 15:00 GMT

ಮಂಗಳೂರು, ಎ.12: ಇಂಡಿಗೋ ವಿಮಾನಯಾನ ಕಂಪೆನಿಯು ಮಂಗಳೂರಿನಿಂದ ಬೆಂಗಳೂರು ಮತ್ತು ಮುಂಬೈಗೆ ಮೇ 1ರಿಂದ ವಿಮಾನ ಯಾನ ಆರಂಭಿಸಲಿದೆ ಎಂದು ಇಂಡಿಗೋ ಚೀಫ್ ಕಮರ್ಷಿಯಲ್ ಅಧಿಕಾರಿ ಸಂಜಯ್ ಕುಮಾರ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿಂದು ಮಾಹಿತಿ ನೀಡಿದ ಅವರು, ಇಂಡಿಗೋ ದೇಶದಲ್ಲೇ ಕಡಿಮೆ ವೆಚ್ಚದಲ್ಲಿ ವಿಮಾನ ಯಾನ ಸೌಲಭ್ಯವನ್ನು ಕಲ್ಪಿಸುತ್ತಿದೆ. ಬೆಂಗಳೂರಿಗೆ 1,499 ರೂ. ಮತ್ತು ಮುಂಬೈಗೆ 1,799 ರೂ. ದರ ನಿಗದಿ ಮಾಡಲಾಗಿದೆ. ಪ್ರತಿದಿನ ವಿಮಾನ ಹಾರಾಟ ನಡೆಯಲಿದೆ. ಏರ್‌ಬಸ್ 320 ವಿಮಾನಗಳು ಮೇ 1ರಿಂದ ಬೆಂಗಳೂರಿಗೆ ಎರಡು ಮತ್ತು ಮುಂಬಯಿಗೆ ಒಂದು ಯಾನ ಆರಂಭಿಸಲಿವೆ. ಜುಲೈ ವೇಳೆಗೆ ಬೆಂಗಳೂರಿಗೆ ಮೂರನೇ ವಿಮಾನ ಆರಂಭಿಸಲಿದ್ದು, ಬಳಿಕ ಹೈದರಾಬಾದ್, ದಿಲ್ಲಿಗೂ ಆರಂಭಿಸುವ ಗುರಿ ಇದೆ. ಇವೆಲ್ಲದರ ಯಶಸ್ಸಿನ ನಂತರ ಅಂತಾರಾಷ್ಟ್ರೀಯ ವಿಮಾನ ಹಾರಾಟದ ಬಗ್ಗೆಯೂ ಆಲೋಚನೆ ಇದೆ ಎಂದು ಅವರು ಹೇಳಿದರು.

ಇಂಡಿಗೋದಿಂದ ಒಟ್ಟು 132 ವಿಮಾನಗಳು ಕಾರ್ಯಾಚರಿಸುತ್ತಿದ್ದು, ಪ್ರಸ್ತುತ ಪ್ರತಿದಿನ 907 ಬಾರಿ ಹಾರಾಟ ನಡೆಸುತ್ತಿವೆ. ದೇಶದ 45 ಗಮ್ಯ ಸ್ಥಾನಗಳನ್ನು ತಲುಪುತ್ತಿವೆ ಎಂದು ಅವರು ಹೇಳಿದರು.

ವಿಮಾನ ಸಮಯ: ಬೆಂಗಳೂರಿನಿಂದ ಪ್ರತಿದಿನ ಬೆಳಗ್ಗೆ 5:30ಕ್ಕೆ ಟೇಕಾಫ್ ಆಗುವ ವಿಮಾನ ಮಂಗಳೂರಿನಲ್ಲಿ ಬೆಳಗ್ಗೆ 6:30ಕ್ಕೆ ಲ್ಯಾಂಡ್ ಆಗಲಿದೆ. ಅದೇ ರೀತಿ ಮಂಗಳೂರಿನಿಂದ ಪ್ರತಿದಿನ ಬೆಳಗ್ಗೆ 7 ಗಂಟೆಗೆ ಟೇಕಾಫ್ ಆಗಲಿರುವ ವಿಮಾನ ಬೆಂಗಳೂರಿನಲ್ಲಿ ಬೆಳಗ್ಗೆ 7:55ಕ್ಕೆ ಲ್ಯಾಂಡ್ ಆಗಲಿದೆ. ಮಧ್ಯಾಹ್ನ 2:55ಕ್ಕೆ ಟೇಕಾಫ್ ಆಗಲಿರುವ ವಿಮಾನ 3:50ಕ್ಕೆ ಮಂಗಳೂರಿನಲ್ಲಿ ಲ್ಯಾಂಡ್ ಆಗಲಿದೆ. ಮಂಗಳೂರಿನಿಂದ ಸಂಜೆ 4:20ಕ್ಕೆ ಟೇಕಾಫ್ ಆಗಲಿರುವ ವಿಮಾನ ಬೆಂಗಳೂರಿನಲ್ಲಿ ಸಂಜೆ 5:15ಕ್ಕೆ ಲ್ಯಾಂಡ್ ಆಗಲಿದೆ.

ಮುಂಬೈಯಿಂದ ಬೆಳಗ್ಗೆ 9:40ಕ್ಕೆ ಟೇಕಾಫ್ ಆಗಲಿರುವ ವಿಮಾನ ಮಂಗಳೂರಿನಲ್ಲಿ ಪೂರ್ವಾಹ್ನ 11:30ಕ್ಕೆ ಲ್ಯಾಂಡ್ ಆಗಲಿದೆ. ಮಂಗಳೂರಿನಿಂದ ಮಧ್ಯಾಹ್ನ 12:05ಕ್ಕೆ ಟೇಕಾಫ್ ಆಗಲಿರುವ ವಿಮಾನ ಮುಂಬೈಯಲ್ಲಿ ಮಧ್ಯಾಹ್ನ 2 ಗಂಟೆಗೆ ಲ್ಯಾಂಡ್ ಆಗಲಿದೆ ಎಂದು ಅವರು ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಇಂಡಿಗೋ ಕಾರ್ಪೊರೇಟ್ ಕಮ್ಯುನಿಕೇಶನ್ಸ್ ನಿರ್ದೇಶಕ ಅಜಯ್ ಎಸ್.ಜಸ್ರಾ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News