ನಗದುರಹಿತ ವ್ಯವಹಾರಕ್ಕೆ 1 ಸಾವಿರ ರೂ. ಬಹುಮಾನ ಪಡೆದ ಶಿಕ್ಷಕ
ಮೂಡುಬಿದಿರೆ, ಎ.12: ನೋಟು ಅಮಾನ್ಯದ ನಂತರ ನಗದುರಹಿತ ವ್ಯವಹಾರವನ್ನು ಉತ್ತೇಜಿಸಲು ಆರಂಭಿಸಿದ್ದ ಬಹುಮಾನ ಯೋಜನೆಯಲ್ಲಿ ಮೂಡುಬಿದಿರೆಯ ಶಿಕ್ಷಕರೊಬ್ಬರು 1 ಸಾವಿರ ರೂ. ಬಹುಮಾನ ಪಡೆದಿದ್ದಾರೆ.
ಮೂಡುಬಿದಿರೆ ಪುರಸಭಾ ವ್ಯಾಪ್ತಿಯ ಪ್ರಾಂತ್ಯ ಸರಕಾರಿ ಪ್ರೌಢಶಾಲೆಯ ಶಿಕ್ಷಕ ಬಾಲಕೃಷ್ಣ ರೆಖ್ಯ ವಿಶೇಷ ಬಹುಮಾನವನ್ನು ಪಡೆದವರು. ನೋಟು ಅಮಾನ್ಯಕ್ಕೂ ಮೊದಲಿನಿಂದಲೇ ಬಾಲಕೃಷ್ಣ ಕ್ಯಾಶ್‌ಲೆಸ್ ವ್ಯವಹಾರವನ್ನು ರೂಢಿಸಿಕೊಂಡಿದ್ದರು. ನಗದು ರಹಿತ ವ್ಯವಹಾರಗಳ ಪ್ರೋತ್ಸಾಹಕ ಬಹುಮಾನ ಯೋಜನೆ ಜಾರಿಯಾದ ಮೇಲಿನ ಇವರ ವ್ಯವಹಾರ ಗಮನಿಸಿ ಬಹುಮಾನದ ಮೊತ್ತವು ಬಂದಿದೆ. ಮಾರ್ಚ್ 24ರಂದು ಬಾಲಕೃಷ್ಣರ ಸಿಂಡಿಕೇಟ್ ಬ್ಯಾಂಕ್ ಖಾತೆಗೆ 1 ಸಾವಿರ ರೂ. ಜಮೆಯಾಗಿದೆ.
ಈ ಬಗ್ಗೆ ಮಾಧ್ಯಮದವರಿಗೆ ಮಾಹಿತಿ ನೀಡಿದ ಅವರು, "ಜನರಲ್ ಸ್ಟೋರ್, ಮಾಲ್, ಪೆಟ್ರೋಲ್ ಬಂಕ್ ಹೀಗೆ ಎಲ್ಲೆಡೆ ನಗದುರಹಿತ ವ್ಯವಹಾರ ಮಾಡುತ್ತಿದ್ದೇನೆ. ನನ್ನ ಬ್ಯಾಂಕ್ ಖಾತೆಗೆ 1 ಸಾವಿರ ರೂ. ಜಮೆಯಾದ ಬಗ್ಗೆ ಬ್ಯಾಂಕ್‌ನಲ್ಲಿ ವಿಚಾರಿಸಿದಾಗ, ಇದು ನಿಮ್ಮ ನಗದುರಹಿತ ವ್ಯವಹಾರಕ್ಕೆ ಬಂದ ಬಹುಮಾನ" ಎಂದು ಬ್ಯಾಂಕ್ ಸಿಬ್ಬಂದಿ ಮಾಹಿತಿ ನೀಡಿದರು ಎಂದು ಬಾಲಕೃಷ್ಣ ತಿಳಿಸಿದ್ದಾರೆ.