×
Ad

ಸಾಮಾಜಿಕ ನ್ಯಾಯಪರ ಆಡಳಿತಕ್ಕೆ ಜನತೆಯ ತೀರ್ಪು: ಸಚಿವ ರಮಾನಾಥ ರೈ

Update: 2017-04-13 12:24 IST

ಬಂಟ್ವಾಳ, ಎ.13: ನಂಜನಗೂಡು ಮತ್ತು ಗುಂಡ್ಲುಪೇಟೆ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಭರ್ಜರಿ ಜಯ ಗಳಿಸಿರುವುದು ಮುಖ್ಯಮಂತ್ರಿ ಸಿದ್ದರಾಮಯ್ಯರ ಸಾಮಾಜಿಕ ನ್ಯಾಯಪರ ಆಡಳಿತಕ್ಕೆ ಜನತೆ ನೀಡಿದ ತೀರ್ಪಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಪ್ರತಿಕ್ರಿಯಿಸಿದ್ದಾರೆ.

ವಿಧಾನಸಭಾ ಚುನಾವಣಾ ಸಂದರ್ಭ ಕಾಂಗ್ರೆಸ್ ಪಕ್ಷ ತನ್ನ ಪ್ರಣಾಳಿಕೆಯಲ್ಲಿ ಘೋಷಿಸಿದ್ದ ಎಲ್ಲ ಅಂಶಗಳನ್ನು ಸಿದ್ದರಾಮಯ್ಯ ನೇತೃತ್ವದ ಸರಕಾರ ಕಾರ್ಯರೂಪಕ್ಕೆ ತಂದಿದೆ. ಜೊತೆಗೆ ಅನ್ನಭಾಗ್ಯ, ಕ್ಷೀರಭಾಗ್ಯ ಮೊದಲಾದ ಕ್ರಾಂತಿಕಾರಿ ಯೋಜನೆಗಳು ಜನರನ್ನು ತಲುಪಿವೆ. ಉಪಚುನಾವಣೆಯ ಫಲಿತಾಂಶ ರಾಜ್ಯ ಸರಕಾರದ ಸಾಮಾಜಿಕ ನ್ಯಾಯಪರ ಆಡಳಿತಕ್ಕೆ ಜನತೆ ನೀಡಿದ ತೀರ್ಪಾಗಿದೆ ಎಂದರು.

ದಕ್ಷಿಣ ಭಾರತದಲ್ಲಿ ಬಿಜೆಪಿ ಪರ ಅಲೆಯೂ ಇಲ್ಲ. ಬಿಜೆಪಿಗೆ ಭವಿಷ್ಯವೂ ಇಲ್ಲ. ಯಾರೋ ಮಾಡಿದ ತಪ್ಪಿನಿಂದ ರಾಜ್ಯದಲ್ಲೊಮ್ಮೆ ಬಿಜೆಪಿ ಆಡಳಿತ ನಡೆಸಿದೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲೂ ಕಾಂಗ್ರೆಸ್ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ ಎಂದು ನುಡಿದರು.

ಕಾಂಗ್ರೆಸ್ ತೊರೆದು ಬಿಜೆಪಿಯಲ್ಲಿ ಸ್ಪರ್ಧಿಸಿದ ಶ್ರೀನಿವಾಸ್ ಪ್ರಸಾದ್‌ಗೆ ಭಾರೀ ಮುಖಭಂಗವಾಗಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ನಂಜನಗೂಡು ಕ್ಷೇತ್ರದಲ್ಲಿ ಕೆಳ ವರ್ಗದ ಜನತೆಯೇ ಹಚ್ಚಿನ ಸಂಖ್ಯೆಯಲ್ಲಿದ್ದಾರೆ. ರಾಜ್ಯದ ಜನತೆಗೆ ಕೆಳ ವರ್ಗದ ಸೇವೆ ಮಾಡುವ ಸರಕಾರ ಬೇಕೆ ಹೊರೆತು ಒಬ್ಬ ವ್ಯಕ್ತಿಯಲ್ಲ. ಸಿದ್ದರಾಮಯ್ಯ ಸರಕಾರ ಸಾಮಾಜಿಕ ನ್ಯಾಯ ತತ್ವದಡಿ ಕೆಳ ವರ್ಗದ ಜನರಿಗೆ ಅನುಕೂಲವಾಗುವಂತೆ ನೀಡಿರುವ ಯೋಜನೆಗಳು ಕಾಂಗ್ರೆಸನ್ನು ಜನರು ಬೆಂಬಲಿಸುವಂತೆ ಮಾಡಿದೆ ಎಂದು ಉತ್ತರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News