×
Ad

ಪ್ರತಿಭಟನಾನಿರತರ ಮೇಲೆ ಪೊಲೀಸ್ ದೌರ್ಜನ್ಯ: ಖಾಸಗಿ ಪ್ರಕರಣ ದಾಖಲಿಸಲು ಕ್ರಮ; ಪಿಯುಸಿಎಲ್

Update: 2017-04-13 12:40 IST

ಮಂಗಳೂರು, ಎ.13: ಸುರತ್ಕಲ್ ಕಾಟಿಪಳ್ಳದ 1ನೆ ಬ್ಲಾಕ್ ನಿವಾಸಿ ಅಹ್ಮದ್ ಖುರೇಷಿಯವರ ಮೇಲೆ ನಡೆದ ಪೊಲೀಸ್ ದೌರ್ಜನ್ಯವನ್ನು ಖಂಡಿಸಿ ನಡೆಸಲಾದ ಪ್ರತಿಭಟನೆಯ ವೇಳೆ ಪೊಲೀಸರ ಲಾಠಿಚಾರ್ಜ್ ಅಮಾನವೀಯವಾಗಿದ್ದು, ಈ ಬಗ್ಗೆ ಸ್ಥಳೀಯ ನ್ಯಾಯಾಲಯದಲ್ಲಿ ಖಾಸಗಿ ಪ್ರಕರಣ ದಾಖಲಿಸಲು ಪಿಯುಸಿಎಲ್ ಮತ್ತು ಎನ್‌ಸಿಎಚ್‌ಆರ್‌ಒ ನಿರ್ಧರಿಸಿದೆ.

ಪ್ರಕರಣಕ್ಕೆ ಸಂಬಂಧಿಸಿ ಉಭಯ ಸಂಘಟನೆಗಳು ನಡೆಸಿರುವ ಸತ್ಯ ಶೋಧನೆಯ ಮಧ್ಯಂತರ ವರದಿಯ ಕುರಿತು ಸುದ್ದಿಗೋಷ್ಠಿಯಲ್ಲಿಂದು ಮಾಹಿತಿ ನೀಡಿದ "ಬಾರುಕೋಲು" ಪತ್ರಿಕೆಯ ಸಂಪಾದಕ ಬಿ.ಆರ್. ರಂಗಸ್ವಾಮಿ, ಸಂಘಟನೆಗಳು ನಡೆಸಿದ ಸತ್ಯ ಶೋಧನೆಯ ಸಂದರ್ಭ ಅಹ್ಮದ್ ಖುರೇಷಿ ಮೇಲಿನ ಪೊಲೀಸ್ ದೌರ್ಜನ್ಯ ಹಾಗೂ ಆ ಬಳಿಕದ ಲಾಠಿ ಚಾರ್ಜ್ ಪ್ರಕರಣ, ವೈಯಕ್ತಿಕ ಹಾಗೂ ಧಾರ್ಮಿಕ ಹಿತಾಸಕ್ತಿಯಿಂದ ಕೂಡಿರುವುದಾಗಿ ಕಂಡುಬಂದಿದೆ ಎಂದರು.

2016ರಲ್ಲಿ ನಡೆದ ಪ್ರಕರಣವೊಂದಕ್ಕೆ ಸಂಬಂಧಿಸಿ ಅಹ್ಮದ್ ಖುರೇಷಿಯನ್ನು ಬಂಧಿಸಿದ್ದ ಸಿಸಿಬಿ ಪೊಲೀಸರು ಗುಪ್ತವಾಗಿ ಹಾಗೂ ರಜಾದಿನದಂದೇ ರಾತ್ರಿ ವೇಳೆ ಉದ್ದೇಶಪೂರ್ವಕವಾಗಿ ನ್ಯಾಯಾಧೀಶರ ಎದುರು ಹಾಜರುಪಡಿಸಿದ್ದರು. ಖುರೇಷಿ ಮೇಲಿನ ಪೊಲೀಸ್ ದೌರ್ಜನ್ಯವನ್ನು ಖಂಡಿಸಿ ನ್ಯಾಯಕ್ಕೆ ಆಗ್ರಹಿಸಿ ಎ. 4ರಂದು ನಡೆದ ಪ್ರತಿಭನೆಯ ವೇಳೆ ಅಮಾನುಷವಾಗಿ ಹಾಗೂ ಅನಗತ್ಯವಾಗಿ ಪೊಲೀಸರು ಲಾಠಿ ಬೀಸಿರುವುದು ಸಿಸಿ ಕ್ಯಾಮರಾದಲ್ಲಿ ಕಂಡು ಬಂದಿದೆ.

ಪ್ರತಿಭಟನಾನಿರತರ ಕೈಯ್ಯಲ್ಲಿ ಯಾವುದೇ ಮಾರಕಾಸ್ತ್ರಗಳಿಲ್ಲದಿದ್ದರೂ, ಯಾವುದೇ ರೀತಿಯ ಸಂಘರ್ಷ ನಡೆಯದಿದ್ದರೂ ಪೊಲೀಸರು ಏಕಾಏಕಿ ಲಾಠಿಚಾರ್ಜ್ ಮಾಡಿ ಪ್ರತಿಭಟನಾನಿರತರ ತಲೆಗೂ ಗಾಯಗಳಾಗುವಂತೆ ಅಮಾನುಷವಾಗಿ ವರ್ತಿಸಿದ್ದಾರೆ. ಈ ಬಗ್ಗೆ ಸತ್ಯಶೋಧನೆ ಮುಂದುವರಿಯಲಿದೆ ಎಂದು ಅವರು ಹೇಳಿದರು. ಪ್ರತಿಭಟನೆಯ ಸಂದರ್ಭ ಲಾಠಿಚಾರ್ಜ್ ಕೊನೆಯ ಅಸ್ತ್ರ. ಮಾತ್ರವಲ್ಲದೆ, ಲಾಠಿಯನ್ನು ಮನುಷ್ಯನ ಕಾಲಿಗೆ ಮಾತ್ರ ಪ್ರಯೋಗಿಸಬೇಕಿದೆ. ಆದರೆ ಈ ಪ್ರಕರಣದಲ್ಲಿ ತಲೆಗೂ ಹೊಡೆಯುತ್ತಿರುವ ದೃಶ್ಯ, ಯದ್ವಾತದ್ವವಾಗಿ ಪೊಲೀಸರು ಪ್ರತಿಭಟನಕಾರರನ್ನು ಎಳೆದೊಯ್ಯುತ್ತಿರುವುದು ಕಂಡು ಬಂದಿದೆ. ಇದು ಅಸಂವಿಧಾನಿಕ ಕ್ರಮ. ಈ ಪ್ರಕರಣದಲ್ಲಿ ಪೊಲೀಸರು ತಮ್ಮ ಅಧಿಕಾರವನ್ನು ದುರುಪಯೋಗ ಮಾಡಿಕೊಂಡಿರುವುದು ಸ್ಪಷ್ಟವಾಗಿದೆ ಎಂದು ಪಿಯುಸಿಎಲ್‌ನ ರಾಷ್ಟ್ರೀಯ ಉಪಾಧ್ಯಕ್ಷ ಪಿ.ಬಿ. ಡೇಸಾ ಹೇಳಿದರು.

ಸತ್ಯ ಶೋಧನಾ ತಂಡವು ಸಮಗ್ರ ವರದಿಯನ್ನು ಸಿದ್ಧಪಡಿಸಿ ರಾಜ್ಯ ಮತ್ತು ರಾಷ್ಟ್ರೀಯ ಮಾನವ ಹಕ್ಕು ಆಯೋಗಗಳಿಗೆ ಸಲ್ಲಿಸಲು ನಿರ್ಧರಿಸಿದೆ. ಸದ್ಯದ ಪರಿಸ್ಥಿತಿಯಲ್ಲಿ ಪೊಲೀಸರಿಂದ ದೌರ್ಜನ್ಯಕ್ಕೊಳಗಾದ ಅಹ್ಮದ್ ಖುರೇಷಿ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಳಪಡಿಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರಗಿಸಬೇಕು. ಅಹ್ಮದ್ ಖುರೇಷಿಯ ಸಂಪೂರ್ಣ ಚಿಕಿತ್ಸಾ ವೆಚ್ಚವನ್ನು ಭರಿಸಬೇಕು. ತೀವ್ರ ಆಘಾತಕ್ಕೆ ಒಳಗಾಗಿರುವ ಖುರೇಷಿ ತಾಯಿ ಕ್ಯಾನ್ಸರ್ ಪೀಡಿತೆಯೂ ಆಗಿದ್ದು, ಅವರ ಕುಟುಂಬಕ್ಕೆ ಸೂಕ್ತ ರಕ್ಷಣೆ ಒದಗಿಸಬೇಕು ಎಂದು ಪಿ.ಬಿ. ಡೇಸಾ ಒತ್ತಾಯಿಸಿದರು.

ಸಿಸಿಬಿ ಪೊಲೀಸರನ್ನು ಬರ್ಕಾಸ್ತು ಮಾಡಬೇಕೆಂದು ಆಗ್ರಹಿಸಿದ ಪಿಯುಸಿಎಲ್ ಜಿಲ್ಲಾಧ್ಯಕ್ಷ ಕಬೀರ್ ಉಳ್ಳಾಲ್, ಪ್ರತಿಭಟನಾ ನಿರತರ ಮೇಲೆ ಪೊಲೀಸರು ನಡೆಸಿದ ವ್ಯವಸ್ಥಿತ ದಾಳಿ ಕುರಿತು ಸೂಕ್ತ ತನಿಖೆ ನಡೆಸಿ ಅಮಾಯಕರಿಗೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಮೈಸೂರಿನ ಸಾಮಾಜಿಕ ಕಾರ್ಯಕರ್ತ ಪಿ.ಆರ್. ಮೋಹನ್, ಎನ್‌ಸಿಎಚ್‌ಆರ್‌ಒನ ಸುಫಿಯಾನ್ ಎಂ.ಎಂ. ಉಪಸ್ಥಿತರಿದ್ದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News