ದಿಲ್ಲಿ ವಿಧಾನಸಭಾ ಉಪ ಚುನಾವಣೆ : ರಾಜೌರಿ ಗಾರ್ಡನ್‌ನಲ್ಲಿ ಸೋಲನ್ನೊಪ್ಪಿಕೊಂಡ ಆಪ್

Update: 2017-04-13 08:34 GMT

ಹೊಸದಿಲ್ಲಿ,ಎ.13: ಪಂಜಾಬ್ ಮತ್ತು ಗೋವಾ ವಿಧಾನಸಭಾ ಚುನಾವಣೆಗಳಲ್ಲಿ ಕಳಪೆ ಪ್ರದರ್ಶನದ ಬಳಿಕ ತವರು ಅಖಾಡಾ ದಿಲ್ಲಿಯಲ್ಲಿಯೂ ಆಪ್ ಪೆಟ್ಟು ತಿಂದಿದೆ. ದಿಲ್ಲಿಯ ಪ್ರಮುಖ ವಿಧಾನಸಭಾ ಕ್ಷೇತ್ರ ರಾಜೌರಿ ಗಾರ್ಡನ್ ಉಪಚುನಾವಣೆಯಲ್ಲಿ ದಯನೀಯ ಸ್ಥಿತಿಯಲ್ಲಿರುವ ಆಪ್ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದು, ಚುನಾವಣಾ ಫಲಿತಾಂಶ ಘೋಷಣೆಯಾಗುವ ಮುನ್ನವೇ ಅದು ಸೋಲನ್ನೊಪ್ಪಿಕೊಂಡಿದೆ.

ಎಂಟನೇ ಸುತ್ತಿನ ಮತಎಣಿಕೆಯ ಬಳಿಕ ಇಲ್ಲಿ ಬಿಜೆಪಿ-ಎಸ್‌ಎಡಿ ಮೈತ್ರಿಕೂಟದ ಅಭ್ಯರ್ಥಿಯಾಗಿರುವ ಮಂಜಿಂದರ್ ಸಿಂಗ್ ಅವರು 19,557 ಮತಗಳೊಂದಿಗೆ ಅಗ್ರಸ್ಥಾನದಲ್ಲಿದ್ದು, 15,972 ಮತಗಳನ್ನು ಪಡೆದಿರುವ ಕಾಂಗ್ರೆಸ್‌ನ ಮೀನಾಕ್ಷಿ ಚಂದೇಲಾ ಅವರು ದ್ವಿತೀಯ ಸ್ಥಾನದಲ್ಲಿದ್ದಾರೆ. ಆಪ್ ಅಭ್ಯರ್ಥಿ ಹರ್ಜೀತ್ ಸಿಂಗ್‌ಗೆ ಕೇವಲ 3,848 ಮತಗಳು ಬಿದ್ದಿವೆ.

ದಿಲ್ಲಿ ಮಹಾನಗರ ಪಾಲಿಕೆ(ಡಿಎಂಸಿ)ಚುನಾವಣೆ ಸನ್ನಿಹಿತವಾಗಿರುವಾಗಲೇ ಈ ಸೋಲನ್ನು ಅರಗಿಸಿಕೊಳ್ಳುವ ಅನಿವಾರ್ಯತೆ ಆಪ್‌ಗೆದುರಾಗಿದೆ. ರಾಜೌರಿ ಗಾರ್ಡನ್ ಕ್ಷೇತ್ರದಲ್ಲಿ ಕಳಪೆ ಪ್ರದರ್ಶನದ ಹೊರತಾಗಿಯೂ ಪಕ್ಷವು ಡಿಎಂಸಿ ಚುನಾವಣೆಯಲ್ಲಿ ಜಯಭೇರಿ ಬಾರಿಸಲಿದೆ ಎಂದು ದಿಲ್ಲಿ ಉಪಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ಇಂದಿಲ್ಲಿ ವಿಶ್ವಾಸ ವ್ಯಕ್ತಪಡಿಸಿದರು.

ರಾಜೌರಿ ಗಾರ್ಡನ್ ಕ್ಷೇತ್ರದ ಶಾಸಕರಾಗಿದ್ದ ಆಪ್‌ನ ಜರ್ನೈಲ್ ಸಿಂಗ್ ಅವರು ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ರಾಜೀನಾಮೆ ನೀಡಿದ್ದರಿಂದ ಈ ಕ್ಷೇತ್ರ ತೆರವಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News