ಈಗಲೂ ನನ್ನ ಕೈಯೆಲ್ಲಾ ನನ್ನ ಮಗುವಿನ ರಕ್ತ : ಹಿಲಾಲ್

Update: 2017-04-13 09:35 GMT

ನಾನೆಲ್ಲಿ ಹೋಗುತ್ತಿದ್ದೇನೆ ಎಂದು ನನಗೇ ತಿಳಿದಿಲ್ಲ. ಕೆಲವೊಮ್ಮೆ ಎತ್ತರದಿಂದ ಜಿಗಿಯಬೇಕು ಎಂದು ನನಗನಿಸುತ್ತದೆ. ಆದರೆ ಹಾಗೆ ಮಾಡಲು ಒಂದು ಹೆಜ್ಜೆ ಮುಂದಿಡುತ್ತಿದ್ದಂತೆಯೇ ನನ್ನ ಗಂಡು ಮಗು ನನ್ನನ್ನು ಹಿಡಿದೆಳೆಯಲು ಯತ್ನಿಸುತ್ತಾನೆ ಹಾಗೂ ನನ್ನೆದೆಯ ಮೇಲೆ ತೆವಳುತ್ತಾನೆ. ಆತನ ಪುಟ್ಟ ಬೆರಳುಗಳಿಂದ ನನ್ನ ಕೆನ್ನೆ ಮುಟ್ಟಲು ಯತ್ನಿಸುತ್ತಾನೆ. ಆತನನ್ನು ಗಟ್ಟಿಯಾಗಿ ಅಪ್ಪಿಕೊಳ್ಳಬೇಕು ಎಂದು ನನಗನಿಸುವಷ್ಟರಲ್ಲಿ ಆತ ಎಲ್ಲಿಯೂ ಕಾಣಿಸುವುದಿಲ್ಲ.

ಒಂದು ವರ್ಷದ ಹಿಂದೆ ನನ್ನ ಜೀವನ ಬೇರೆಯಾಗಿತ್ತು. ನನ್ನ ಪುಟ್ಟ ಮಗುವಿನೊಂದಿಗೆ ನನ್ನ ಪತ್ನಿ ಪ್ರತಿ ರಾತ್ರಿ ನನಗಾಗಿ ಆತಂಕದಿಂದ ಕಾಯುತ್ತಿದ್ದಳು. ಆದರೆ ನನಗೆ ಯಾವತ್ತೂ ಮಧ್ಯರಾತ್ರಿಗಿಂತ ಮೊದಲು ಮನೆಗೆ ಹಿಂದಿರುಗಲು ಆಗುತ್ತಲೇ ಇರಲಿಲ್ಲ. ನನ್ನ ಜೀವನದ ಬಹುಪಾಲು ದಿನಗಳಲ್ಲಿ ನಾನು ಹಸಿವಿನಿಂದ ನರಳಿದಂತೆ ಅವರು ಕೂಡ ನರಳುವುದು ನನಗೆ ಬೇಕಿರಲಿಲ್ಲ.

ನಾನೊಬ್ಬ ಮೆಕ್ಯಾನಿಕ್. ಊಟ ಕೂಡ ಮಾಡದೆ ಹಣವೇಕೆ ಉಳಿತಾಯ ಮಾಡುತ್ತಿ ಎಂದು ಎಲ್ಲರೂ ನನ್ನನ್ನು ಪ್ರಶ್ನಿಸುತ್ತಿದ್ದರು. ನನ್ನ ಹೆಚ್ಚಿನ ಜೀವನವೆಲ್ಲಾ ನಾನು ಸ್ವಲ್ಪವೇ ಆಹಾರ ಸೇವಿಸುತ್ತಿದ್ದೆ. ಇದೇ ಗತಿ ನನ್ನ ಮಗುವಿಗೂ ಬರಬಾರದೆಂದು ನಾನು ಬಯಸಿದ್ದೆ.

ಆ ಕೊಳಚೆಗೇರಿಯಲ್ಲಿದ್ದ ನಮ್ಮ ಕೊಠಡಿಯಲ್ಲಿ ಬಹಳ ಸೆಕೆಯಿತ್ತು. ನನಗೆ ಒಂದು ಕೊಠಡಿಯ ಟೆರೇಸ್ ಇರುವ ಮನೆಯನ್ನು ಬಾಡಿಗೆಗೆ ಪಡೆಯಬೇಕೆಂಬ ಇಚ್ಛೆಯಿತ್ತು. ಒಂದು ಫ್ಯಾನ್ ಕೊಂಡುಕೊಳ್ಳಬೇಕೆಂದಿದ್ದೆ. ನನಗೆ ಒಂದು ವರ್ಷ ಸಮಯ ಕೊಡಬೇಕೆಂದು ನನ್ನ ಪತ್ನಿಯಲ್ಲಿ ಕೇಳಿಕೊಂಡಿದ್ದೆ ಹಾಗೂ ನಂತರ ನಮ್ಮ ಜೀವನ ಅಮೋಘವಾಗುವುದೆಂದು ನಾನು ಅವಳಿಗೆ ಭರವಸೆ ನೀಡಿದ್ದೆ.

ನಾನು ನಮಗಾಗಿ ಸಂತೋಷವನ್ನು ಉಳಿತಾಯ ಮಾಡುತ್ತಿದ್ದೆ, ನಮ್ಮ ಮಣ್ಣಿನ ಬ್ಯಾಂಕಿನಲ್ಲಿನ ಸಂತೋಷವನ್ನು. ನನ್ನೊಂದಿಗೆ ಎಲ್ಲಿಯಾದರೂ ದೂರ ಹೋಗಬೇಕೆಂಬುದು ನನ್ನ ಪತ್ನಿಯ ಬಹು ಕಾಲದ ಕನಸಾಗಿತ್ತು. ಅವರನ್ನು ಎಲ್ಲಿಯಾದರೂ ಒಂದು ವರ್ಷದ ನಂತರ ಕರೆದುಕೊಂಡು ಹೋಗುವುದಾಗಿ ಮಾತು ಕೊಟ್ಟಿದ್ದೆ.

ಆ ದಿನ ನಾನು ಕೆಲಸಕ್ಕೆ ಹೊರಟಿದ್ದೆ. ನನ್ನ ಪತ್ನಿ ತಾನು ನನ್ನ ಸೈಕಲ್ಲಿನಲ್ಲಿ ನಮ್ಮ ಒಂದು ವರ್ಷದ ಮಗನೊಂದಿಗೆ ಒಂದು ಸಣ್ಣ ರೈಡ್ ಹೋಗಬೇಕೆಂದು ಬಯಸಿದ್ದಳು. ಇಬ್ಬರೂ ಹಿಂದಿನಿಂದ ನನ್ನ ಶರ್ಟ್ ಹಿಡಿದಿದ್ದರು. ನಾನು ತುಂಬ ನಕ್ಕಿದ್ದೆ. ನಾನು ಯಾವತ್ತೂ ಅವರ ಜತೆಗಿರಬೇಕೆಂದು ಅವರೇಕೆ ಬಯಸುತ್ತಿದ್ದಾರೆ, ನಾನು ಸತ್ತರೆ ಅವರು ಹೇಗೆ ಜೀವಿಸುತ್ತಾರೆಂದು ನಾನು ಕೇಳಿದೆ.

ಕೆಲವೇ ನಿಮಿಷಗಳಲ್ಲಿ ಎಲ್ಲಿಂದಲೋ ಬಂದ ಕಾರು ನಮಗೆ ಢಿಕ್ಕಿ ಹೊಡೆದಿತ್ತು. ನಾನು ರಸ್ತೆಯ ಇನ್ನೊಂದು ಬದಿಗೆ ಬಿದ್ದರೆ ಇನ್ನೊಂದು ಕಾರು ನನ್ನ ಪತ್ನಿ ಹಾಗೂ ಮಗುವಿಗೆ ಢಿಕ್ಕಿ ಹೊಡೆದಿತ್ತು. ಅವರ ಕಿರುಚಾಟಗಳನ್ನು ಕೆಲವೇ ಹೊತ್ತು ನಾನು ಕೇಳಿದ್ದೆ. ನಂತರ ಅವರು ಶಾಶ್ವತವಾಗಿ ಮೌನವಾಗಿ ಬಿಟ್ಟರು.

ನನ್ನ ಮಗುವಿನ ದೇಹದ ಕೆಲ ಭಾಗಗಳನ್ನು ಕೈಯ್ಯಲ್ಲಿ ಹಿಡಿದುಕೊಂಡು ರಕ್ತದ ಮಡುವಿನಲ್ಲಿದ್ದ ನನ್ನ ಪತ್ನಿಯ ದೇಹದ ಪಕ್ಕದಲ್ಲಿ ನಾನು ಕುಳಿತಿದ್ದೆ. ನಾನು ಮತ್ತೆ ಸಹಜ ಸ್ಥಿತಿಗೆ ಮರಳಲು ನನಗೆಷ್ಟು ದಿನಗಳು, ರಾತ್ರಿಗಳು ಹಾಗೂ ತಿಂಗಳುಗಳು ಬೇಕಾಯಿತೆಂದು ನನಗೆ ತಿಳಿದಿಲ್ಲ. ನನ್ನ ಕೈಯ್ಯನ್ನು ನೋಡಿದಾಗಲೆಲ್ಲಾ ನನಗೆ ಕೇವಲ ರಕ್ತ ಕಾಣಿಸುತಿತ್ತು. ನನ್ನ ಮಗುವಿನ ರಕ್ತ. ಆದರೆ ಅದು ಕೆಟ್ಟ ವಾಸನೆ ಬರುತ್ತಿರಲಿಲ್ಲ. ಅದರ ಪರಿಮಳ ನನಗೆ ಹಾಲಿನಂತಿತ್ತು.

ಹಲವು ತಿಂಗಳುಗಳ ಕಾಲ ನನಗೇನೂ ಕೇಳಲಿಲ್ಲ. ತನ್ನನ್ನು ಎಲ್ಲಿಯಾದರೂ ದೂರ ಕರೆದುಕೊಂಡು ಹೋಗುವಂತೆ ನನ್ನ ಪತ್ನಿ ಹೇಳುತ್ತಿರುವುದು ಮಾತ್ರ ಕೇಳಿಸುತ್ತಿತ್ತು. ನನ್ನ ಮಗು ನನ್ನ ಹಿಂದೆ ಗಟ್ಟಿಯಾಗಿ ಹಿಡಿದಿರುವಂತೆಯೂ ಭಾಸವಾಗುತ್ತಿತ್ತು. ಆದರೆ ಅವರನ್ನು ಮುಟ್ಟಬೇಕೆಂದು ಅನಿಸಿದಾಗಲೆಲ್ಲಾ ಅಲ್ಲಿ ಬರೀ ರಕ್ತವಿತ್ತು.

ನಾನು ಮತ್ತೆ ಮನೆಗೆ ಮರಳಲೇ ಇಲ್ಲ. ನನ್ನ ಕುಟುಂಬ ರಸ್ತೆಯಲ್ಲಿ ಕಳೆದು ಹೋಯಿತು ಹಾಗೂ ನಾನು ಅವರೊಂದಿಗೆ ಎಲ್ಲ ಕಡೆ ತಿರುಗುತ್ತಿದ್ದೇನೆ. ನಾನು ಸಾಯಬೇಕೆಂದು ಅನಿಸಿದಾಗಲೆಲ್ಲಾ ಅವರು ನನ್ನ ಶರ್ಟನ್ನು ಗಟ್ಟಿಯಾಗಿ ಹಿಡಿದುಕೊಳ್ಳುತ್ತಾರೆ. ಅವರನ್ನು ಅಪ್ಪಿಕೊಳ್ಳಬೇಕೆಂದು ನನಗನಿಸುತ್ತಿದೆ. ಅವರನ್ನು ಒಂದು ಕೊಠಡಿಯ ಟೆರೇಸ್ ಇರುವ ಮನೆಗೆ ಕರೆದುಕೊಂಡು ಹೋಗಬೇಕೆಂದೆನಿಸುತ್ತದೆ. ಆ ಫ್ಯಾನ್ ಖರೀದಿಸಬೇಕೆಂದಿನಿಸುತ್ತದೆ. ಅವರೊಂದಿಗೆ ಒಟ್ಟಿಗೆ ಎಲ್ಲಿಯಾದರೂ ಹೋಗಬೇಕೆಂದು ಅನಿಸುತ್ತದೆ. ಎಲ್ಲಿಯಾದರೂ ದೂರದಲ್ಲಿ ಅವರು ಮತ್ತೆ ನನಗೆ ಕಾಣ ಸಿಗಬಹುದು ಎಂಬ ನಿರೀಕ್ಷೆಯೊಂದಿಗೆ ನಾನು ನಡೆಯುತ್ತಲೇ ಇದ್ದೇನೆ.

ಹಿಲಾಲ್ (35)

Full View

Writer - ಜಿ ಎಂ ಬಿ ಆಕಾಶ್

contributor

Editor - ಜಿ ಎಂ ಬಿ ಆಕಾಶ್

contributor

Similar News