ಅಭಿನಂದನಾ ಸಮಿತಿ ರಚನೆ
ಮಂಗಳೂರು, ಎ.13: ಹಿರಿಯ ಸಿಪಿಎಂ ಮುಖಂಡ ಕೆ.ಆರ್.ಶ್ರೀಯಾನ್ 83 ವರ್ಷ ಪ್ರಾಯ ಪೂರ್ತಿಗೊಳಿಸುತ್ತಿರುವ ಸಂದರ್ಭ ಬರೆದ ತಮ್ಮ ಆತ್ಮಕಥನವನ್ನು ಕ್ರಿಯಾ ಪ್ರಕಾಶನ ಪ್ರಕಟಿಸುತ್ತಿದೆ. ಈ ಪುಸ್ತಕದ ಲೋಕಾರ್ಪಣೆ ಕಾರ್ಯಕ್ರಮದ ಯಶಸ್ಸಿಗೆ ಅಭಿನಂದನಾ ಸಮಿತಿಯನ್ನು ರಚಿಸಲಾಯಿತು.
ಸಿಪಿಎಂ ರಾಜ್ಯ ಸಮಿತಿಯ ಮುಖಂಡ ಜೆ.ಬಾಲಕೃಷ್ಣ ಶೆಟ್ಟಿಯ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸಾಹಿತಿ ಅದಮಾರು ಶ್ರೀಪತಿ ಆಚಾರ್ಯ, ಹೋರಾಟಗಾರ ಎಂ.ಜಯಾನಂದ ದೇವಾಡಿಗ, ಪ್ರೊ.ಕೆ.ರಾಜೇಂದ್ರ ಉಡುಪ, ವಾಸುದೇವ ಉಚ್ಚಿಲ, ಕೆ.ಆರ್.ಜಯಾನಂದ ಮಂಜೇಶ್ವರ ಪಾಲ್ಗೊಂಡಿದ್ದರು. ಸಿಪಿಎಂ ದ.ಕ.ಜಿಲ್ಲಾ ಕಾರ್ಯದರ್ಶಿ ವಸಂತ ಆಚಾರಿ ಸ್ವಾಗತಿಸಿದರು. ರಾಜ್ಯ ಸಮಿತಿ ಸದಸ್ಯ ಯಾದವ ಶೆಟ್ಟಿ ವಂದಿಸಿದರು.
ಅಭಿನಂದನಾ ಸಮಿತಿಯ ಗೌರವಾಧ್ಯಕ್ಷರಾಗಿ ನ್ಯಾಯವಾದಿ ಯಶವಂತ ಮರೋಳಿ, ಕಾರ್ಯದರ್ಶಿಯಾಗಿ ಸುನೀಲ್ ಕುಮಾರ್ ಬಜಾಲ್ ಆಯ್ಕೆಯಾಗಿದ್ದಾರೆ. ಬಿ.ಮಾಧವ, ಜಿ. ರಾಜಶೇಖರ, ಪ್ರೊ.ಕೆ.ಫಣಿರಾಜ್, ಚಂದ್ರಕಲಾ ನಂದಾವರ, ಪ್ರೊ.ನರೇಂದ್ರ ನಾಯಕ್, ಪ್ರೊ.ಚಂದ್ರಪೂಜಾರಿ, ಪ್ರೊ.ಜಿ.ಭಾಸ್ಕರ ಮಯ್ಯ, ವಿಲ್ಫ್ರೆಡ್ ಡಿಸೋಜ, ಕೆ. ಶಂಕರ್, ಬಾಲಕೃಷ್ಣ ಶೆಟ್ಟಿ ಉಡುಪಿ ಅಭಿನಂದನಾ ಸಮಿತಿಯ ಗೌರವ ಸದಸ್ಯರಾಗಿರುತ್ತಾರೆ.
ಕಾರ್ಯಕ್ರಮವು ಮೇ 28ರಂದು ನಗರದ ಪುರಭವನದಲ್ಲಿ ನಡೆಯಲಿದ್ದು, ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪಮೊಯ್ಲಿ ಕೃತಿ ಬಿಡುಗಡೆಗೊಳಿಸಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ, ಮಾಜಿ ಸಚಿವ ಅಮರನಾಥ ಶೆಟ್ಟಿ, ಉದ್ಯಮಿಗಳಾದ ಹರೀಶ್ ಶೇರಿಗಾರ ದುಬೈ, ಶ್ರೀನಿವಾಸ ಶೇರಿಗಾರ, ಸಿಪಿಐ ಮುಖಂಡರಾದ ವಿ.ಕುಕ್ಯಾನ್, ಚಲನಚಿತ್ರ ಕಲಾವಿದೆ ಸರೋಜಿನಿ ಶೆಟ್ಟಿ ಭಾಗವಹಿಸುವರು ಎಂದು ಪ್ರಕಟನೆ ತಿಳಿಸಿದೆ.