ಅಡಿಕೆ ಕಳವು ಆರೋಪಿಯ ಬಂಧನ
ಕಡಬ, ಎ.13. ಠಾಣಾ ವ್ಯಾಪ್ತಿಯ ನೆಟ್ಟಣ ಎಂಬಲ್ಲಿ ಸತ್ತಾರ್ ಎಂಬವರಿಗೆ ಸೇರಿದ ಗೋದಾಮಿನಿಂದ ಅಡಿಕೆ ಕದ್ದೊಯ್ದಿದ್ದ ಆರೋಪಿಯನ್ನು ಕಡಬ ಪೊಲೀಸರು ಬಂಧಿಸಿದ್ದಾರೆ.
ಮಾರುತಿ 800 ಕಾರಿನಲ್ಲಿ ಆಗಮಿಸಿದ್ದ ಕಳ್ಳರು ಗೋದಾಮಿನ ಬಾಗಿಲನ್ನು ಮುರಿಯುವ ಶಬ್ದ ಕೇಳಿ ಮಾಲಕ ಸತ್ತಾರ್ ಆಗಮಿಸಿದಾಗ ಎರಡು ಚೀಲ ಅಡಿಕೆಯೊಂದಿಗೆ ಕಾರನ್ನು ಬಿಟ್ಟು ಪರಾರಿಯಾಗಿದ್ದರು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ಕಡಬ ಪೊಲೀಸರು ಆರೋಪಿಗಳಲ್ಲೊಬ್ಬನಾದ ಬೆಳ್ತಂಗಡಿ ತಾಲೂಕಿನ ಕುವೆಟ್ಟು ಗ್ರಾಮದ ಬರಾಯ ನಿವಾಸಿ ಅಬ್ದುಲ್ ಹಮೀದ್ ಎಂಬವರ ಪುತ್ರ ಮಹಮ್ಮದ್ ಇಸಾಕ್ (32ವ) ಎಂಬಾತನನ್ನು ಬಂಧಿಸಿದ್ದು, ಪ್ರಮುಖ ಆರೋಪಿ ತಲೆಮರೆಸಿಕೊಂಡಿದ್ದಾನೆನ್ನಲಾಗಿದೆ.
ಆರೋಪಿಯ ಮೇಲೆ ಈ ಹಿಂದೆ ಚಿಕ್ಕಮಗಳೂರು ಜಿಲ್ಲೆಯ ಬಣಕಲ್ ಪೊಲೀಸ್ ಠಾಣೆ, ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದ ಬಾರ್ ಕಳ್ಳತನ ಪ್ರಕರಣ ಮತ್ತು ಬೇಲೂರು ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದ ಪೆಟ್ರೋಲ್ ಪಂಪ್‌ನಲ್ಲಿ ಕಳವು ಪ್ರಕರಣ, ದ.ಕ. ಜಿಲ್ಲೆಯ ಬೆಳ್ತಂಗಡಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಪೆಟ್ರೋಲ್ ಪಂಪ್ ಮತ್ತು ಅಡಿಕೆ ಕಳ್ಳತನ ಹಾಗೂ ಪುಂಜಾಲಕಟ್ಟೆ ಪೊಲೀಸ್ ಠಾಣೆ, ವೇಣೂರು ಪೊಲೀಸ್ ಠಾಣೆ ಮತ್ತು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ, ಕಡಬ ಪೊಲೀಸ್ ಠಾಣೆ, ಉಪ್ಪಿನಂಗಡಿ ಪೊಲೀಸ್ ಠಾಣಾ ಸರಹದ್ದಿನಲ್ಲಿ ನಡೆದ ಅಡಿಕೆ ಕಳ್ಳತನ ಪ್ರಕರಣದಲ್ಲಿ ಕೇಸು ದಾಖಲಾಗಿದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೂಷಣ್ ಗುಲಾಬ್ ರಾವ್ ಬೋರಸೆಯವರ ಮಾರ್ಗದರ್ಶನದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ವೇದಮೂರ್ತಿ, ಪುತ್ತೂರು ಉಪವಿಭಾಗದ ಪೊಲೀಸ್ ಉಪ ಅಧೀಕ್ಷಕರಾದ ಎನ್.ಜಿ. ಭಾಸ್ಕರ ರೈ, ಪುತ್ತೂರು ಗ್ರಾಮಾಂತರ ಪೊಲೀಸ್ ವೃತ್ತ ನಿರೀಕ್ಷಕರಾದ ಅನಿಲ್ ಎಸ್.ಕುಲಕರ್ಣಿಯವರ ನಿರ್ದೇಶನದಲ್ಲಿ ಕಡಬ ಠಾಣಾಧಿಕಾರಿ ಪ್ರಕಾಶ್ ದೇವಾಡಿಗ, ಎ.ಎಸ್.ಐ ಚಂದ್ರಶೇಖರ, ಸಿಬ್ಬಂದಿ ಮೋನಪ್ಪ, ಮೋಹನ್, ಶಿವಪ್ರಸಾದ್, ಸತೀಶ್, ಪ್ರಕಾಶ್, ಶರತ್ ಕುಮಾರ್, ಕನಕರಾಜ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.