ಉಡುಪಿಯಲ್ಲಿ ಶೀಘ್ರವೇ ಇನ್ನೂ 18 ನರ್ಮ್ ಬಸ್ ಗಳ ಓಡಾಟ
ಉಡುಪಿ, ಎ.13: ಜಿಲ್ಲಾ ಆರ್‌ಟಿಎ ವ್ಯಾಪ್ತಿಯಲ್ಲಿ ಈವರೆಗೆ ಒಟ್ಟು 55 ಸರಕಾರಿ ಬಸ್‌ಗಳ ಸೇವೆ ಕಲ್ಪಿಸಲಾಗಿದೆ. ಇನ್ನೂ 30 ಬಸ್‌ಗಳನ್ನು ಓಡಿಸಲು ಪರವಾನಿಗೆ ಸಿಕ್ಕಿದೆ. ಈಗಾಗಲೇ 77 ಬಸ್‌ಗಳಿಗೆ ಪರವಾನಿಗೆ ಸಿಕ್ಕಿದರೂ, ವೇಳಾಪಟ್ಟಿ ನಿಗದಿಯಾಗದ್ದರಿಂದ ಕೆಲವು ಬಾಕಿ ಇವೆ. ಶೀಘ್ರವೇ ಜಿಲ್ಲೆಯಲ್ಲಿ ಬೇಡಿಕೆ ಇರುವ ಕಡೆ 18 ಹೊಸ ನರ್ಮ್ ಬಸ್‌ಗಳ ಸಂಚಾರವನ್ನು ಪ್ರಾರಂಭಿಸಲಾಗುವುದು ಎಂದು ಕೆಎಸ್ಸಾರ್ಟಿಸಿ ಮಂಗಳೂರು ವಿಭಾಗೀಯ ಸಂಚಾರ ಅಧಿಕಾರಿ ಜೈಶಾಂತ್ ಕುಮಾರ್ ಭರವಸೆ ನೀಡಿದ್ದಾರೆ
ರಾಜ್ಯ ರಸ್ತೆ ಸಾರಿಗೆ ನಿಗಮದ ಮಂಗಳೂರು ವಿಭಾಗದ ಉಡುಪಿ ನಿಟ್ಟೂರಿನ ಘಟಕದ ವತಿಯಿಂದ ಗುರುವಾರ ಬಸ್‌ಗಳ ಕಾರ್ಯಾಚರಣೆ ಕುರಿತಂತೆ ನಡೆದ ಸಾರ್ವಜನಿಕ ಸಂಪರ್ಕ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು.
ನಗರದ ಜನತೆಯ ಬಹುದಿನಗಳ ಬೇಡಿಕೆಯಾಗಿರುವ ಉಡುಪಿ- ಕಲ್ಸಂಕ- ಅಂಬಾಗಿಲು ಮಾರ್ಗವಾಗಿ ಬಸ್ ಓಡಿಸಲು ಪರವಾನಿಗೆ ಸಿಕ್ಕಿದ್ದು, ಸಮಯ ಹಾಗೂ ಹಂತಗಳನ್ನು ಶೀಘ್ರ ಅಂತಿಮಗೊಳಿಸಿ ವಾರದೊಳಗೆ ನರ್ಮ್ ಬಸ್ ಸಂಚಾರಕ್ಕೆ ಚಾಲನೆ ನೀಡಲಾಗುವುದು ಎಂದವರು ತಿಳಿಸಿದರು.
ನರ್ಮ್ ವಿರುದ್ಧ ಕೋರ್ಟಿಗೆ: ಹೆಚ್ಚಿನ ಕಡೆ ಜನರಿಂದ ಬೇಡಿಕೆಗಳು ಬಂದ ತಕ್ಷಣ ಅಲ್ಲಿಗೆ ಬಸ್ ಸೇವೆ ಒದಗಿಸಲು ರಾಷ್ಟ್ರೀಕೃತ ರಸ್ತೆಯಲ್ಲದಿದ್ದರೆ ಕೆಎಸ್ಸಾರ್ಟಿಸಿಗೆ ಅಧಿಕಾರವಿಲ್ಲ. ಕೆಲವೊಮ್ಮೆ ಖಾಸಗಿಯವರ ಲಾಬಿಯಿಂದಾಗಿ ಈ ಪ್ರಕ್ರಿಯೆ ವಿಳಂಬವಾಗುತ್ತವೆ. ಉಡುಪಿಯಲ್ಲಿ ನರ್ಮ್ ಬಸ್ ಸಂಚಾರ ಆರಂಭಿಸಿರುವುದರ ವಿರುದ್ಧ ಖಾಸಗಿ ಬಸ್‌ನವರು ಕೋರ್ಟಿಗೆ ಅರ್ಜಿ ಹಾಕಿದ್ದಾರೆ. ಈ ಹಿಂದೆ ಸಹ ಪರವಾನಿಗೆ, ಕಡಿಮೆ ದರ, ಸಮಯ ವ್ಯತ್ಯಯ ಹೀಗೆ ಅನೇಕ ಸಂದರ್ಭಗಳಲ್ಲಿ ಕೋರ್ಟು ಮೆಟ್ಟಿಲು ಹತ್ತಿದ್ದಾರೆ ಎಂದರು.
ಸಭೆಯಲ್ಲಿ ವಿಭಾಗೀಯ ನಿಯಂತ್ರಣಾಧಿಕಾರಿ ವಿವೇಕಾನಂದ ಹೆಗಡೆ, ಘಟಕ ವ್ಯವಸ್ಥಾಪಕ ಎ. ಉದಯ್ ಶೆಟ್ಟಿ, ಅಂಕಿ-ಅಂಶ ಅಧಿಕಾರಿ ಸ್ವರ್ಣಲತಾ, ಸಹಾಯಕ ವಿಭಾಗೀಯ ಸಂಚಾರಅಧಿಕಾರಿ ಮಂಜುನಾಥ್, ಸಂಚಾರ ನಿರೀಕ್ಷಕಿ ಸಿಂಧೂಜಾ ನಾಯಕ್ ಉಪಸ್ಥಿತರಿದ್ದರು.