ವೃದ್ಧನ ರಕ್ಷಣೆಗೆ ಮುಂದಾದ ಯುವಕನಿಗೆ ಹಲ್ಲೆ ನಡೆಸಿದ ತಲಪಾಡಿ ಟೋಲ್‌ಗೇಟ್ ಸಿಬ್ಬಂದಿ
ಉಳ್ಳಾಲ, ಎ.13: ತಲಪಾಡಿ ಟೋಲ್‌ಗೇಟ್‌ನಲ್ಲಿ ಟೋಲ್ ಸಿಬ್ಬಂದಿಯೋರ್ವ ವೃದ್ಧರೋರ್ವರಿಗೆ ಹಲ್ಲೆ ನಡೆಸಲು ಮುಂದಾಗುತ್ತಿದ್ದಾಗ ಅದನ್ನು ತಡೆಯಲು ಹೋದ ಯುವಕನಿಗೆ ಟೋಲ್ ಸಿಬ್ಬಂದಿ ಸೇರಿ ಹಲ್ಲೆ ನಡೆಸಿರುವ ಘಟನೆ ಗುರುವಾರ ನಡೆದಿದೆ.
ಹಲ್ಲೆಗೊಳಗಾದ ಯುವಕನನ್ನು ಕಂದುಕ ನಿವಾಸಿ ಮುಹಮ್ಮದ್ ಸ್ವಾಲಿಹ್ ಎಂಬವರ ಪುತ್ರ ಅಬ್ದುಲ್ ಹಮೀದ್ ಶರಾಫತ್ (25) ಎಂದು ಗುರುತಿಸಲಾಗಿದೆ.
ಶರಾಫತ್ ಮಂಗಳೂರಿನಿಂದ ಕಾಸರಗೋಡಿಗೆ ತೆರಳುತ್ತಿದ್ದ ವೇಳೆ ತಲಪಾಡಿ ಟೋಲ್ ಗೇಟ್ ತಲುಪುತ್ತಿದ್ದಂತೆ ಅಲ್ಲಿದ್ದ ಟೋಲ್ ಗೇಟ್ ಸಿಬ್ಬಂದಿ ಚಾಲಕರೋರ್ವರನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿ ಹಲ್ಲೆಗೆ ಮುಂದಾಗುತ್ತಿದ್ದರು. ಇದನ್ನು ಪ್ರಶ್ನಿಸಿದ್ದ ಶರಾಫತ್, "ಅವರ ತಪ್ಪಿದ್ದಲ್ಲಿ ಪೊಲೀಸರಿಗೆ ಮಾಹಿತಿ ನೀಡಿ, ಕಾನೂನು ಕೈಗೆತ್ತಿಕೊಂಡು ಹಲ್ಲೆ ನಡೆಸುವುದು ಸರಿಯಲ್ಲ" ಎಂದು ತಿಳಿಸಿದ್ದರು ಎನ್ನಲಾಗಿದೆ. ಇದೇ ವೇಳೆ ಟೋಲ್‌ಗೇಟಿನ ಸುಮಾರು 20ರಷ್ಟು ಸಿಬ್ಬಂದಿ ಸುತ್ತುವರಿದು ಶರಾಫತ್ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.
ಹಲ್ಲೆ ನಡೆಸಿದ ಎಲ್ಲರಲ್ಲೂ ಗುರುತಿನ ಚೀಟಿಯಿದ್ದು, ಇದರಿಂದ ಸಿಬ್ಬಂದಿಯೇ ಹಲ್ಲೆ ನಡೆಸಿದ್ದಾರೆಂದು ಹಲ್ಲೆಗೊಳಗಾದವರು ಆರೋಪಿಸಿದ್ದಾರೆ. ಈ ಕುರಿತು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ. ಹಲ್ಲೆಗೊಳಗಾದ ಯುವಕನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಟೋಲ್ ಗೇಟಿನಲ್ಲಿರುವ ಸಿಸಿಟಿವಿ ದಾಖಲೆಯನ್ನು ಸಂಗ್ರಹಿಸಿರುವ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ.