ಪಡಿತರ ದುರುಪಯೋಗ ತಡೆಯಲು ಆಧಾರ ಜೋಡಣೆ; ಪ್ರಮೋದ್
ಉಡುಪಿ, ಎ.13: ಪಡಿತರದ ದುರುಪಯೋಗ ತಡೆಯುವ ಉದ್ದೇಶದಿಂದ ಪಡಿತರ ಚೀಟಿಗೆ ಆಧಾರ್ ಜೋಡಣೆ ಮಾಡಲಾಗಿದ್ದು, ಇದರಿಂದ ಅನ್ನಭಾಗ್ಯದ ಅಕ್ಕಿ ದುರುಪಯೋಗ ಆಗದಂತೆ ತಡೆದು ಬಡವರಿಗೆ ಹೆಚ್ಚುವರಿ ವಿತರಿಸಲು ಸಾಧ್ಯವಾಗಿದೆ ಎಂದು ರಾಜ್ಯ ಮೀನುಗಾರಿಕೆ, ಯುವಜನ ಸಬಲೀಕರಣ ಹಾಗೂ ಕ್ರೀಡಾ ಸಚಿವರು ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ತಿಳಿಸಿದ್ದಾರೆ.
ಉಡುಪಿ ಜಿಲ್ಲಾಡಳಿತ ಹಾಗೂ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಜಂಟಿ ಆಶ್ರಯದಲ್ಲಿ ಗುರುವಾರ ಉಡುಪಿ ಪುರಭವನದ ಮಿನಿಹಾಲ್‌ನಲ್ಲಿ ಆಯೋಜಿಸಲಾದ ಅನ್ನಭಾಗ್ಯ ಉಚಿತ ಹೆಚ್ಚುವರಿ ಅಕ್ಕಿ ವಿತರಣೆ ಹಾಗೂ ಜಾಗೃತ ಸಮಿತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು,
ಪಡಿತರ ವಿತರಣೆಯಲ್ಲಿ ಕುರಿತು ಮೇಲ್ವಿಚಾರಣೆ ನಡೆಸುವ ಉದ್ದೇಶದಿಂದ ಪ್ರತಿಯೊಂದು ನ್ಯಾಯ ಬೆಲೆ ಅಂಗಡಿಗಳಲ್ಲಿ ಸಾರ್ವಜನಿಕರಿಂದ ಕೂಡಿದ 5 ಜನರ ಜಾಗೃತ ಸಮಿತಿಯನ್ನು ರಚಿಸಲಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಕಂದಾಯ ಇಲಾಖೆಯಿಂದ ನೀಡುವ ರಾಷ್ಟ್ರೀಯ ಕುಟುಂಬ ಸಹಾಯಧನದ ಚೆಕ್ ವಿತರಿಸಲಾಯಿತು.
ಉಡುಪಿ ನಗರ ಸಭೆ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ನರಸಿಂಹ ಮೂರ್ತಿ, ತಾಪಂ ಅಧ್ಯಕ್ಷೆ ನಳಿನಿ ಪ್ರದೀಪ್ ರಾವ್, ಜಿಪಂ ಸದಸ್ಯ ಜನಾರ್ದನ ತೋನ್ಸೆ, ಉಡುಪಿ ತಹಶೀಲ್ದಾರ್ ಮಹೇಶ್ಚಂದ್ರ, ಬ್ರಹ್ಮಾವರ ವಿಶೇಷ ತಹಶೀಲ್ದಾರ್ ಪ್ರದೀಪ್ ಕುರ್ಡೆಕರ್ ಉಪಸ್ಥಿತರಿದ್ದರು.
ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ ಪ್ರಭಾರ ಉಪ ನಿರ್ದೇಶಕ ಪ್ರವೀಣ್ ಬಿ.ನಾಯಕ್ ಸ್ವಾಗತಿಸಿದರು. ಕೊಡಂಕೂರು ಜಯ ರಾಮ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.