ಅರಂದ್ ಪ್ರದೇಶದ ಅಭಿವೃದ್ಧಿಗೆ ಶಾಸಕರು ಬದ್ಧ: ಜಲಜಾ
ಮುಲ್ಕಿ, ಎ.13: ಹಳೆಯಂಗಡಿ ಪಂಚಾಯತ್ ವ್ಯಾಪ್ತಿಯ ಅರಂದ್ ಪ್ರದೇಶ ದ್ವೀಪದಂತಿದ್ದು, ಇಲ್ಲಿಯ ಜನರ ಮೂಲಭೂತ ಸೌಕರ್ಯಕ್ಕಾಗಿ ಶಾಸಕ ಕೆ. ಅಭಯಚಂದ್ರ ಈಗಾಗಲೇ ವಿವಿಧ ಮೂಲದ ಅನುದಾನವನ್ನು ವಿನಿಯೋಗಿಸಿದ್ದಾರೆ. ಪ್ರದೇಶದ ಸಂಪೂರ್ಣ ಅಭಿವೃದ್ಧಿಗೆ ಶಾಸಕರು ಬದ್ಧರಾಗಿದ್ದಾರೆ ಎಂದು ಹಳೆಯಂಗಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಜಲಜಾ ವಿಶ್ವಾಸ ವ್ಯಕ್ತ ಪಡಿಸಿದ್ದಾರೆ.
ಮೀನುಗಾರಿಕಾ ಇಲಾಖೆ ಮುಖಾಂತರ 10 ಲಕ್ಷ ರೂ. ಅಂದಾಜು ವೆಚ್ಚದಲ್ಲಿ ಅಭಿವೃದ್ಧಿಗೊಂಡ ಅರಂದ್ ರಸ್ತೆಯನ್ನು ಉದ್ಘಾಟಿಸಿ ಅವರು, ಮಾತನಾಡುತ್ತಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯ ಎಚ್. ವಸಂತ್ ಬೆರ್ನಾರ್ಡ್, ಶಾಸಕ ಅಭಯ ಚಂದ್ರಜೈನ್ ಅವರು ಕೊಂಡಿ ರಸ್ತೆಗಳನ್ನು ಅಭಿವೃದ್ಧಿ ಪಡಿಸುವ ಕಾಯಕಕ್ಕೆ ಚಾಲನೆ ನೀಡಿದ್ದಾರೆ. ಅರಂದ್ ಪ್ರದೇಶದ ರಸ್ತೆ ಕಾಂಕ್ರಿಟೀಕರಣಗಳಿಗೆ 10 ಲಕ್ಷ ರೂ. ವಿನಿಯೋಗಿಸಿ ದ್ವಿತೀಯ ಹಂತದ ಕಾಮಗಾರಿಗಾಗಿ ಈಗಾಗಲೇ 5ಲಕ್ಷ ಬಿಡುಗಡೆಗೊಳಿಸಿದ್ದಾರೆ. ಶೀಘ್ರದಲ್ಲಿ ಎಲ್ಲಾ ರಸ್ತೆಗಳನ್ನು ಕಾಂಕ್ರಿಟೀಕರಣಗೊಳಿಸುವ ಬಗ್ಗೆ ಭರವಸೆ ನೀಡಿದ್ದಾರೆ ಎಂದರು.
ಈ ಸಂದರ್ಭ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಪದ್ಮಾವತಿ ಶೆಟ್ಟಿ, ತಾಲೂಕು ಪಂಚಾಯತ್ ಸದಸ್ಯ ಜೀವನ್ ಪ್ರಕಾಶ್, ಗ್ರಾಮ ಪಂಚಾಯತ್ ಸದಸ್ಯೆ ಜಯಂತಿ, ಎನ್.ಎಂ.ಪಿ.ಟಿ ವರ್ಕರ್ಸ್ ಯೂನಿಯನ್ ಅಧ್ಯಕ್ಷ ರಮೇಶ್ ಚೆಳ್ಳಾಯರು, ಸ್ಥಳೀಯ ಮುಖಂಡರಾದ ರಾಜೇಶ್ ದೇವಾಡಿಗ, ಭಾಸ್ಕರ್ ದೇವಾಡಿಗ, ಉದ್ಯಮಿ ರಾಕೇಶ್ ಶೆಟ್ಟಿ. ನಂದಿನಿ ಫ್ರೆಂಡ್ಸ್‌ನ ಅಧ್ಯಕ್ಷ ರಾಮಚಂದ್ರ ದೇವಾಡಿಗ, ಹರಿಯಪ್ಪ, ಗಣೇಶ್ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.