ಝಾಕಿರ್ ನಾಯ್ಕ್ ವಿರುದ್ಧ ಬಂಧನ ವಾರಂಟ್

Update: 2017-04-13 17:46 GMT

ಮುಂಬೈ,ಎ.13: ಸೌದಿ ಅರೇಬಿಯಾದಲ್ಲಿ ವಾಸವಿದ್ದಾರೆನ್ನಲಾಗಿರುವ ಇಸ್ಲಾಮಿಕ್ ವಾಗ್ಮಿ ಝಾಕಿರ್ ನಾಯ್ಕ್ ವಿರುದ್ಧ ಇಲ್ಲಿಯ ನ್ಯಾಯಾಲಯವು ಬಂಧನ ವಾರಂಟ್ ಹೊರಡಿಸಿದೆ. ಕಳೆದ ವರ್ಷ ಬಾಂಗ್ಲಾದೇಶದ ಢಾಕಾದ ರೆಸ್ಟೋರಂಟ್‌ವೊಂದರ ಮೇಲೆ ನಡೆದ ಭಯೋತ್ಪಾದಕರ ದಾಳಿಯೊಂದಿಗೆ ಝಾಕಿರ್ ಹೆಸರು ತಳುಕು ಹಾಕಿಕೊಂಡಿದ್ದು, ವಿಚಾರಣೆಗೆ ಹಾಜರಾಗುವಂತೆ ಒಂದು ತಿಂಗಳಿಗೂ ಹಿಂದೆ ಅವರಿಗೆ ಸಮನ್ಸ್ ಹೊರಡಿಸಲಾಗಿತ್ತು. ಭಾರತದಲ್ಲಿ ವಿಚಾರಣೆಗೆ ಹಾಜರಾಗಲು ತಿರಸ್ಕರಿಸಿದ್ದ ಅವರು ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ತನ್ನ ಹೇಳಿಕೆಯನ್ನು ಪಡೆಯುವಂತೆ ತಿಳಿಸಿದ್ದರು.

ಪ್ರಕರಣದ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯವು ಭಾರತವು ಯುಎಇ ಜೊತೆ ಗಡಿಪಾರು ಒಪ್ಪಂದವನ್ನು ಹೊಂದಿರುವುದರಿಂದ ಝಾಕಿರ್ ನಾಯ್ಕ್ರನ್ನು ಸ್ವದೇಶಕ್ಕೆ ಗಡಿಪಾರುಗೊಳಿಸಬಹುದಾಗಿದೆ ಎಂದು ಗುರುವಾರ ನ್ಯಾಯಾಲಯಕ್ಕೆ ತಿಳಿಸಿತು. ಹಣ ಚೆಲುವೆಗೆ ಸಂಬಂಧಿಸಿದಂತೆ ಝಾಕಿರ್ ವಿರುದ್ಧ ಕಳೆದ ವರ್ಷದ ಡಿಸೆಂಬರ್‌ನಲ್ಲಿ ಕ್ರಿಮಿನಲ್ ಪ್ರಕರಣವೊಂದು ದಾಖಲಾಗಿದೆ.

ಇಡಿ ನೋಟಿಸಿಗೆ ಪ್ರತಿಕ್ರಿಯಿಸಿದ್ದ ಝಾಕಿರ್ ನಾಯ್ಕ್, ತನ್ನ ಲಾಭರಹಿತ ಸಂಘಟನೆ ಇಸ್ಲಾಮಿಕ್ ರೀಸರ್ಚ್ ಫೌಂಡೇಷನ್ (ಐಆರ್‌ಎಫ್) ಮೇಲೆ ಹೇರಲಾಗಿರುವ ನಿಷೇಧವನ್ನು ಪ್ರಶ್ನಿಸಿ ತಾನು ಸಲ್ಲಿಸಿರುವ ಮೇಲ್ಮನವಿಯ ವಿಚಾರಣೆಯನ್ನು ದಿಲ್ಲಿ ಉಚ್ಚ ನ್ಯಾಯಾಲಯದ ನ್ಯಾಯಾಧಿಕರಣವು ವಿಚಾರಣೆಗೆತ್ತಿಕೊಂಡಾಗ ತಾನು ಭಾರತಕ್ಕೆ ಮರಳುವುದಾಗಿ ತಿಳಿಸಿದ್ದರು. ಮಾ.16ರಂದು ಐಆರ್‌ಎಫ್ ಮೇಲಿನ ಕೇಂದ್ರದ ನಿಷೇಧವನ್ನು ಬೆಂಬಲಿಸಿದ್ದ ನ್ಯಾಯಾಲಯವು, ರಾಷ್ಟ್ರೀಯ ಭದ್ರತೆಯ ದೃಷ್ಟಿಯಿಂದ ಸರಕಾರವು ಈ ನಿರ್ಧಾರವನ್ನು ಕೈಗೊಂಡಿದೆ ಎಂದು ಹೇಳಿತ್ತು.

ಕಳೆದ ವರ್ಷದ ಭಯೋತ್ಪಾದಕ ದಾಳಿಯಲ್ಲಿ ಪಾಲ್ಗೊಂಡಿದ್ದ ಐವರು ಭಯೋತ್ಪಾದಕರು ಝಾಕಿರ್ ಅವರ ಪ್ರವಚನಗಳನ್ನು ಅನುಸರಿಸುತ್ತಿದ್ದರು ಎಂದು ಬಾಂಗ್ಲಾದೇಶವು ಹೇಳಿದ ಬಳಿಕ ಸಮುದಾಯಗಳ ನಡುವೆ ದ್ವೇಷವನ್ನು ಹರಡುವ ಭಾಷಣಗಳಿಗಾಗಿ ಝಾಕಿರ್ ಅವರ ವಿರುದ್ಧ ತನಿಖೆ ನಡೆಯುತ್ತಿದೆ.

ಝಾಕಿರ್ ಸಹಚರ ಆಮಿರ್ ಗಝ್ದರ್‌ನನ್ನು ಇಡಿ ಕಳೆದ ತಿಂಗಳು ಬಂಧಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News