​ಕೋಟೆಕ್ಕಾರ್: ವಿದ್ಯುತ್ ಆಘಾತಕ್ಕೊಳಗಾಗಿ ಓರ್ವ ಯುವಕ ಮೃತ್ಯು, ಇನ್ನೋರ್ವ ಗಂಭೀರ

Update: 2017-04-14 05:11 GMT

ಉಳ್ಳಾಲ, ಎ.14: ಕೊಳವೆಬಾವಿಯಿಂದ ಪೈಪ್‌ಗಳನ್ನು ಹೊರ ತೆಗೆಯುವ ವೇಳೆ ಪೈಪ್ ವಿದ್ಯುತ್ ತಂತಿಗೆ ತಗುಲಿ ಯುವಕನೋರ್ವ ದಾರುಣವಾಗಿ ಮೃತಪಟ್ಟ ಘಟನೆ ಉಳ್ಳಾಲ ಠಾಣಾ ವ್ಯಾಪ್ತಿಯ ಕೋಟೆಕಾರ್ ಬೀರಿ ಎಂಬಲ್ಲಿ ಗುರುವಾರ ತಡರಾತ್ರಿ ಸಂಭವಿಸಿದೆ. ಘಟನೆಯಲ್ಲಿ ಇನ್ನೋರ್ವ ಗಂಭೀರ ಗಾಯಗೊಂಡಿರುವುದಾಗಿ ತಿಳಿದುಬಂದಿದೆ.
ಕೊಣಾಜೆ ಅಡ್ಕರೆಪಡ್ಪು ನಿವಾಸಿ ಹಸೈನಾರ್ ಎಂಬವರ ಪುತ್ರ ಉಸ್ಮಾನ್ ಮೃತಪಟ್ಟವರಾಗಿದ್ದಾರೆ. ಕೊಣಾಜೆ ತಿಬ್ಲೆಪದವಿನ ಶರೀಫ್ ಎಂಬವರು ಗಾಯಗೊಂಡಿದ್ದಾರೆ.

ಖಲೀಲ್ ಎಂಬವರು ಗುತ್ತಿಗೆ ಪಡೆದುಕೊಂಡಿದ್ದ ಕೋಟೆಕಾರು ಬೀರಿ ಸಮೀಪ ಕೊಳವೆಯೊಂದರಿಂದ ಪೈಪ್‌ಗಳನ್ನು ಹೊರತೆಗೆಯುವ ಕಾಮಗಾರಿ ನಿನ್ನೆ ರಾತ್ರಿ ನಡೆಯುತ್ತಿತ್ತು. ಆರು ಕಾರ್ಮಿಕರು ಈ ಕಾಮಗಾರಿಯಲ್ಲಿ ನಿರತರಾಗಿದ್ದರು. ಸುಮಾರು ನಾಲ್ಕು ಪೈಪ್‌ಗಳನ್ನು ಅದಾಗಲೇ ಮೇಲಕ್ಕೆತ್ತಿದ್ದ ಉಸ್ಮಾನ್ ಮತ್ತು ಶರೀಫ್‌ ಐದನೇ ಪೈಪನ್ನು ಮೇಲಕ್ಕೆತ್ತುವ ಸಂದರ್ಭ ಈ ದುರಂತ ಸಂಭವಿಸಿದೆ.

ಮೇಲಕ್ಕೆತ್ತಿದ ಪೈಪ್ ಅಲ್ಲೇ ಹಾದು ಹೋಗಿದ್ದ ಹೈಟೆನ್ಶನ್ ವಿದ್ಯುತ್ ತಂತಿಗೆ ತಗುಲಿದೆ. ಇದರಿಂದ ಲೋಹದ ಪೈಪಿನಲ್ಲಿ ಒಮ್ಮೆಲೇ ಭಾರೀ ವಿದ್ಯುತ್ ಪ್ರವಹಿಸಿ ಉಸ್ಮಾನ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಶರೀಫ್ ಗಾಯಗೊಂಡಿದ್ದಾರೆ. ಶರೀಫ್ ಅವರನ್ನು ದೇರಳಕಟ್ಟೆಯ ಯೆನೆಪೋಯ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಪಡೆದು ಅವರು ಅಲ್ಲಿಂದ ತೆರಳಿದ್ದಾರೆ.

ಮೃತ ಉಸ್ಮಾನ್  ಹೆತ್ತವರಿಗೆ ಓರ್ವನೇ ಪುತ್ರನಾಗಿದ್ದ.  9ನೇ ತರಗತಿ ಮುಗಿಸಿದ ಬಳಿಕ ಮನೆಯಲ್ಲೇ ಉಳಿದುಕೊಂಡಿದ್ದ.  ಕೂಲಿ ಕೆಲಸ ಇದ್ದಲ್ಲಿ ಮಾತ್ರ ತೆರಳುತ್ತಿದ್ದ. ಇತ್ತೀಚೆಗೆ ಹಲವು ಸಮಯಗಳಿಂದ ಮನೆಯಲ್ಲೇ ಉಳಿದುಕೊಂಡಿದ್ದಾತ  ಬುಧವಾರದಂದು ಖಲೀಲ್ ಜತೆಗೆ ಬೋರ್ ವೆಲ್ ಪೈಪ್ ಹಿಂತೆಗೆಯುವ ಕಾಮಗಾರಿಯಲ್ಲಿ ಕೈಜೋಡಿಸಿಕೊಂಡಿದ್ದ. ಗುತ್ತಿಗೆದಾರ ಖಲೀಲ್ ತಲೆಮರೆಸಿಕೊಂಡಿದ್ದಾರೆ.  

ಈ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News