ಕಳೆದುಕೊಂಡ ಹುದ್ದೆ ಮರಳಿ ಪಡೆಯಲು ಗಡ್ಡ ಬೋಳಿಸಲು ನಿರಾಕರಿಸಿದ ಮುಸ್ಲಿಮ್ ಪೊಲೀಸ್ ಸಿಬ್ಬಂದಿ
ಹೊಸದಿಲ್ಲಿ, ಎ.14: ಮಹಾರಾಷ್ಟ್ರ ರಾಜ್ಯ ಮೀಸಲು ಪೊಲೀಸ್ ಪಡೆಯ ನಿಯಮದಂತೆ ಗಡ್ಡ ಬೆಳೆಸುವ ಹಾಗಿಲ್ಲವಾದ ಕಾರಣ ಗಡ್ಡ ಬೋಳಿಸಲು ನಿರಾಕರಿಸಿ ಸೇವೆಯಿಂದ ವಜಾಗೊಂಡಿದ್ದ ಮುಸ್ಲಿಂ ಪೊಲೀಸ್ ಕಾನಸ್ಟೇಬಲ್ ಒಬ್ಬರು ಇದೀಗ ಸುಪ್ರೀಂ ಕೋರ್ಟ್ ಅವರ ಮುಂದೆ ಇಟ್ಟಿರುವ ಕೊಡುಗೆಯೊಂದನ್ನೂ ನಿರಾಕರಿಸಿದ್ದಾರೆ. ಕೇವಲ ಧಾರ್ಮಿಕ ಆಚರಣೆ ಸಂದರ್ಭ ಮಾತ್ರ ಗಡ್ಡ ಬೆಳೆಸುವುದಾಗಿ ಆತ ಒಪ್ಪಿಕೊಂಡರೆ ಮರಳಿ ಕೆಲಸಕ್ಕೆ ಸೇರ್ಪಡೆಗೊಳಿಸುವುದಾಗಿ ಸುಪ್ರೀಂ ಕೋರ್ಟ್ ಹೇಳಿದರೂ ಪೇದೆ ಝಹಿರುದ್ದೀನ್ ಶಂಸುದ್ದೀನ್ ಬೆಡಡೆ ನಿರಾಕರಿಸಿದ್ದಾರೆ.
ಶಂಸದ್ದೀನ್ ಜನವರಿ 16, 2008ರಂದು ಮಹಾರಾಷ್ಟ್ರ ಮೀಸಲು ಪೊಲೀಸ್ ಪಡೆಯಲ್ಲಿ ಕಾನಸ್ಟೇಬಲ್ ಆಗಿ ಸೇರಿದ್ದರು. ಜಲ್ನಾದಲ್ಲಿ ಅವರನ್ನು ನಿಯೋಜಿಸಿದಾಗ ಫೆಬ್ರವರಿ 2012ರಲ್ಲಿ ತಮಗೆ ಗಡ್ಡ ಬೆಳೆಸಲು ಅನುಮತಿಸುವಂತೆ ಅವರು ಕಮಾಂಡೆಂಟ್ ಅವರಿಗೆ ಮನವಿ ಸಲ್ಲಿಸಿದ್ದರು. ಮೇ 2012ರಲ್ಲಿ ಅದಕ್ಕೆ ಅನುಮತಿಯೂ ದೊರಕಿತ್ತು. ಆದರೆ ಐದು ತಿಂಗಳ ನಂತರ ಮಹಾರಾಷ್ಟ್ರ ಗೃಹ ಇಲಾಖೆಯ ತಿದ್ದುಪಡಿಗೊಂಡ ಮಾರ್ಗಸೂಚಿಯಂತೆ ಆತನಿಗೆ ನೀಡಿದ್ದ ಅನುಮತಿಯನ್ನು ಹಿಂಪಡೆಯಲಾಗಿತ್ತು. ಇದನ್ನು ಪ್ರಶ್ನಿಸಿ ಅವರು ಬಾಂಬೆ ಹೈಕೋರ್ಟಿನ ಔರಂಗಾಬಾದ್ ಪೀಠಕ್ಕೆ ಅಪೀಲು ಸಲ್ಲಿಸಿದ್ದರು. ಈ ಸಂದರ್ಭ ತನ್ನ ವಾದ ಮಂಡಿಸಿದ ರಾಜ್ಯ ಸರಕಾರ ಆತ ಧಾರ್ಮಿಕ ಆಚರಣೆಗಾಗಿ ಕೆಲ ಸಂದರ್ಭ ಗಡ್ಡ ಬೆಳೆಸಬಹುದೆಂದು ಹೇಳಿದ ಕಾರಣ ಇದನ್ನು ಒಪ್ಪಿದ ನ್ಯಾಯಾಲಯವು ಶಂಸುದ್ದೀನ್ ಅವರ ಅಪೀಲನ್ನು ಡಿಸೆಂಬರ್ 2012ರಲ್ಲಿ ತಿರಸ್ಕರಿಸಿತ್ತು. ಜನವರಿ 2013ರಲ್ಲಿ ಹೈಕೋರ್ಟ್ ತೀರ್ಪಿನ ವಿರುದ್ಧ ಸಂಶುದ್ದೀನ್ ಸುಪ್ರೀಂ ಕೋರ್ಟ್ ಕದ ತಟ್ಟಿದ್ದರು.
ಗುರುವಾರ ಈ ಪ್ರಕರಣದ ವಿಚಾರಣೆಯನ್ನು ನ್ಯಾಯಾಲಯ ಕೈಗೆತ್ತಿಕೊಂಡಾಗ ನಾಲ್ಕು ವರ್ಷಗಳಿಂದ ಬಾಕಿಯಿರುವ ಪ್ರಕರಣವನ್ನು ಶೀಘ್ರ ವಿಲೇವಾರಿಗೊಳಿಸುವಂತೆ ಶಂಸುದ್ದೀನ್ ಅವರ ವಕೀಲ ಮುಖ್ಯ ನ್ಯಾಯಮೂರ್ತಿ ಜೆ.ಎಸ್.ಖೇಹರ್ ಮತ್ತು ನ್ಯಾಯಧೀಶರಾದ ಡಿ.ವೈ.ಚಂದ್ರಚೂಡ್ ಮತ್ತು ಸಂಜಯ್ ಕಿಶನ್ ಕೌಲ್ ಅವರನ್ನು ಆಗ್ರಹಿಸಿದ್ದ ಹಿನ್ನೆಲೆಯಲ್ಲಿ ಪೊಲೀಸ್ ಸಿಬ್ಬಂದಿಗೆ ಮೇಲಿನ ಆಫರ್ ಅನ್ನು ನ್ಯಾಯಾಲಯ ಮಾಡಿತ್ತು. ಆದರೆ ಆತ ಅದನ್ನು ಒಪ್ಪದೇ ಇದ್ದಾಗ ‘‘ಹಾಗಾದರೆ ನಾವು ನಿಮಗೆ ಸಹಾಯ ಮಾಡಲು ಸಾಧ್ಯವಿಲ್ಲ’’ ಎಂದು ನ್ಯಾಯಾಧೀಶರು ಹೇಳಿದ್ದು ಪ್ರಕರಣದ ಶೀಘ್ರ ವಿಲೇವಾರಿ ನಡೆಸಲೂ ನ್ಯಾಯಾಲಯ ನಿರಾಕರಿಸಿದೆ.