ಭೂಸ್ವಾಧೀನಕ್ಕಾಗಿ ಪತಂಜಲಿ ನೀಡಿದ್ದ ಎರಡು ಚೆಕ್ ಬೌನ್ಸ್ !

Update: 2017-04-14 06:34 GMT

ನಾಗಪುರ್, ಎ.14: ಯೊಗಗುರು ಬಾಬಾ ರಾಮದೇವ್ ಅವರ ಪತಂಜಲಿ ಆಯುರ್ವೇದ ಲಿಮಿಟೆಡ್ ಸಂಸ್ಥೆ ಮಿಹಾನ್ ವಿಶೇಷ ಆರ್ಥಿಕ ವಲಯದಲ್ಲಿ 106 ಎಕರೆ ಭೂಮಿ ಸ್ವಾಧೀನಪಡಿಸುವ ಸಲುವಾಗಿ ನೀಡಿದ್ದ ಚೆಕ್ ಎರಡು ಬಾರಿ ಬೌನ್ಸ್ ಆಗಿದೆ.

ಪತಂಜಲಿ ಈಗಾಗಲೇ ಮಿಹಾನ್ ಇಲ್ಲಿನ ವಿಶೇಷ ಆರ್ಥಿಕ ವಲಯದ ಹೊರಗಿನ 230 ಎಕರೆ ಪ್ರದೇಶವನ್ನು ಫುಡ್ ಪಾರ್ಕ್ ಸ್ಥಾಪಿಸುವ ಉದ್ದೇಶದಿಂದ ಖರೀದಿಸಿತ್ತು. ಇದರ ಶಿಲಾನ್ಯಾಸ ಸಮಾರಂಭ ಕಳೆದ ವರ್ಷದ ಆಗಸ್ಟ್ ತಿಂಗಳಲ್ಲಿ ನಡೆದಾಗ ವಿಶೇಷ ಆರ್ಥಿಕ ವಲಯದೊಳಗಡೆ ಭೂಮಿ ಪಡೆಯುವುದಾಗಿ ಅದು ಘೋಷಿಸಿತ್ತು. ಈ ಹಿಂದಿನ ಭೂಮಿ ಖರೀದಿ ಕೂಡ ವಿವಾದಕ್ಕೀಡಾಗಿದ್ದು, ಕಾಂಗ್ರೆಸ್ ನಾಯಕ ಸಂಜಯ್ ನಿರುಪಮ್ ಸಂಸ್ಥೆಯ ವಿರುದ್ಧ ಸಾರ್ವಜನಿಕ ಹಿತಾಸಕ್ತಿ ದಾವೆ ದಾಖಲಿಸಿದ್ದರು.

ಭೂ ಸ್ವಾಧೀನ ಸಂಬಂಧ ರಾಮದೇವ್ ಮತ್ತವರ ಸಮೀಪವರ್ತಿ ಮತ್ತು ಪತಂಜಲಿಯ ಆಡಳಿತ ನಿರ್ದೇಶಕ ಆಚಾರ್ಯ ಬಾಲಕಿಶನ್ ರೂ.10 ಕೋಟಿಯ ಚೆಕ್ ಸಾಂಕೇತಿಕವಾಗಿ ನೀಡಿದ್ದರೆ ಸಂಪೂರ್ಣ ಮೊತ್ತದ ಇನ್ನೊಂದು ರೂ.64 ಕೋಟಿಯ ಚೆಕ್ ಎರಡು ಬಾರಿ ಬೌನ್ಸ್ ಆಗಿತ್ತು.

ಬ್ಯಾಂಕ್ ಈ ಬಗ್ಗೆ ಮಾಹಿತಿ ನೀಡಿದ್ದು, ಚೆಕ್ ಬೌನ್ಸ್ ಆಗಲು ಖಾತೆಯು 21ರಿಂದ 25ರ ಸಂಖ್ಯೆಯಡಿಯಲ್ಲಿ ನಮೂದಿಸಲಾದ ಕಾರಣಗಳಿಗಾಗಿ ಬ್ಲಾಕ್ ಆಗಿದೆ ಎಂದು ತಿಳಿಸಿತ್ತು. ಬ್ಯಾಂಕ್ ವೆಬ್ ಸೈಟ್ ನಲ್ಲಿ 21-25 ಕಾರಣಗಳನ್ನು ಪರಿಶೀಲಿಸಲಾಗಿ ಸಂಬಂಧಿತರಿಂದ ಸ್ಟಾಪ್ ಪೇಮೆಂಟ್, ವಶಪಡಿಸುವ ಆದೇಶ, ಕೋರ್ಟ್ ನಿರ್ದೇಶನ, ಖಾತೆದಾರನ ಸಾವು, ಆತನಿಗೆ ಮಾನಸಿಕ ಸಮಸ್ಯೆ- ಕಾರಣಗಳನ್ನು ನೀಡಲಾಗಿದೆ.

ಚೆಕ್ ಬೌನ್ಸ್ ನಿಂದಾಗಿ ಪತಂಜಲಿ ಸಮಸ್ಯೆಗೊಳಗಾಗುವ ಸಾಧ್ಯತೆಯಿದ್ದು, ಕ್ರಿಮಿನಲ್ ಪ್ರಕರಣ ಕೂಡ ಎದುರಿಸಬೇಕಾಗಬಹುದು. ಆದರೆ ಪತಂಜಲಿಯ ಪ್ರಕಾರ ಸಹಿಯ ಸಮಸ್ಯೆಯಿಂದ ಚೆಕ್ ಬೌನ್ಸ್ ಆಗಿದೆ. ಪ್ರಕರಣವನ್ನು ಶೀಘ್ರ ಇತ್ಯರ್ಥಪಡಿಸಲಾಗುವುದು ಎಂದು ಅದು ಹೇಳಿದೆ. ಆದರೆ ಬ್ಯಾಂಕ್ ಸೂಚಿಸಿದ್ದ 21-25 ಸಂಖ್ಯೆಯ ಕಾರಣಗಳಲ್ಲಿ ಸಹಿಯ ಬಗ್ಗೆ ನಮೂದಿತವಾಗಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News