ಎರಡು ದಿನ ಕೂಲಿ ಕಾರ್ಮಿಕನಾಗಲಿರುವ ತೆಲಂಗಾಣ ಮುಖ್ಯಮಂತ್ರಿ!

Update: 2017-04-14 06:44 GMT

ಹೈದರಾಬಾದ್, ಎ.14: ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಎರಡು ದಿನಗಳ ಕಾಲ ರಾಜ್ಯದ ಕೂಲಿ ನಂ. 1 ಆಗಲಿದ್ದಾರೆ. ಸಾಮಾನ್ಯ ಕೂಲಿ ಕಾರ್ಮಿಕನಂತೆ ದುಡಿದು ದಿನಗೂಲಿ ಪಡೆಯಲಿದ್ದಾರೆ ಈ ಮುಖ್ಯಮಂತ್ರಿ.

ರಾಜ್ಯದ ಎಲ್ಲಾ ಸಚಿವರು ಶಾಸಕರು, ಪಕ್ಷ ನಾಯಕರು ಮತ್ತು ಕಾರ್ಯಕರ್ತರೂ ಶುಕ್ರವಾರದಿಂದ ಆರಂಭಗೊಂಡು ಒಂದು ವಾರದ ಅವಧಿಯಲ್ಲಿ ಕನಿಷ್ಠ ಎರಡು ದಿನ ಕೂಲಿ ಕೆಲಸ ನಿರ್ವಹಿಸಿ ತೆಲಂಗಾಣ ರಾಷ್ಟ್ರೀಯ ಸಮಿತಿಯ ವಾರ್ಷಿಕ ಅಧಿವೇಶನದಲ್ಲಿ ಭಾಗವಹಿಸಲು ಪ್ರಯಾಣ ಮತ್ತಿತರ ವೆಚ್ಚವನ್ನು ತಮ್ಮ ಕೂಲಿ ಹಣದಿಂದಲೇ ಭರಿಸಬೇಕು ಎಂದು ಅವರು ತಿಳಿಸಿದ್ದಾರೆ. ಅಧಿವೇಶನ ಮುಂದಿನ ಶುಕ್ರವಾರ ರಾಜ್ಯದ ವಿವಿಧೆಡೆ ಜರಗಲಿದ್ದು, ನಂತರ ವಾರಂಗಲ್ ನಲ್ಲಿ ಬೃಹತ್ ಸಾರ್ವಜನಿಕ ಸಭೆ ನಡೆಯಲಿದೆ.

ಟಿಆರ್ ಎಸ್ ನಾಯಕರು ಮತ್ತು ಕಾರ್ಯಕರ್ತರು ಕೂಲಿ ಕಾರ್ಮಿಕರಾಗಿ ಕೆಲಸ ಮಾಡುವ ಈ ವಿಶಿಷ್ಟ ಕಾರ್ಯಕ್ರಮವನ್ನು ‘ಗುಲಾಬಿ ಕೂಲಿ ದಿನಲು’ (ಗುಲಾಬಿ ಕಾರ್ಮಿಕ ದಿನಗಳು) ಎಂದು ಹೆಸರಿಸಲಾಗಿದ್ದು, ಗುಲಾಬಿ ಬಣ್ಣ ಟಿಆರ್ ಎಸ್ ನ ಬಣ್ಣವಾಗಿದೆ. ಮುಖ್ಯಮಂತ್ರಿ ಚಂದ್ರಶೇಖರ್ ರಾವ್ ತಾವು ಕೂಲಿ ಕಾರ್ಮಿಕನಾಗಿ ಯಾವ ಕೆಲಸ ನಿರ್ವಹಿಸುತ್ತಾರೆಂದು ಇನ್ನೂ ತಿಳಿದಿಲ್ಲವಾಗಿದ್ದರೂ ತಾವು ಇತರರಿಗೆ ಮಾದರಿಯಾಗುವುದಾಗಿ ಮುಖ್ಯಮಂತ್ರಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News