​ಮಂಗಳೂರಿನಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಜನ್ಮ ದಿನಾಚರಣೆ

Update: 2017-04-14 09:44 GMT

ಮಂಗಳೂರು, ಎ.14: ಸಮಾನತೆ, ಸರ್ವರಿಗೂ ಸ್ವಾಭಿಮಾನದ ಬದುಕು ಸಿಗಬೇಕೆಂಬುದು ಡಾ. ಬಿ.ಆರ್. ಅಂಬೇಡ್ಕರ್ ವಿರಚಿತ ಸಂವಿಧಾನದ ಪ್ರಮುಖ ಆಶಯ. ಆ ಆಶಯಗಳನ್ನು ಸಂರಕ್ಷಿಸಿ ಜೀವಂತವಾಗಿರಿಸಿಕೊಳ್ಳುವ ಕಾರ್ಯವನ್ನು ನಾವು ಮಾಡಬೇಕು ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಹೇಳಿದ್ದಾರೆ.


ಅವರು ಇಂದು ನಗರದ ಪುರಭವನದಲ್ಲಿ ದ.ಕ. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಂಗಳೂರು ಮಹಾನಗರ ಪಾಲಿಕೆ ಹಾಗೂ ಸಮಾಜ ಕಲ್ಯಾಣ ಇಲಾಖೆ ಆಶ್ರಯದಲ್ಲಿ ನಡೆದ ಸಂವಿಧಾನ ಶಿಲ್ಪಿ, ಭಾರತ ರತ್ನ ಡಾ. ಬಿ.ಆರ್. ಅಂಬೇಡ್ಕರ್‌ರವರ 126ನೆ ಜನ್ಮ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಸಾಮಾಜಿಕ ನ್ಯಾಯದಿಂದ ವಂಚಿತವಾದ ಸಮುದಾಯದಿಂದ ಬಂದ ವ್ಯಕ್ತಿಯೊಬ್ಬರು ಸಂವಿಧಾನ ರಚನೆ ಮಾಡುವ ಮೇಧಾವಿ ಆಗಿ ಬೆಳೆದಿದ್ದೇ ಇಡೀ ಸಮಾಜಕ್ಕೊಂದು ಪ್ರೇರಣೆ. ಪ್ರಜಾಪ್ರಭುತ್ವ ವ್ಯವಸ್ಥೆಯ ಬಳಿಕ ದೇಶದಲ್ಲಿ ಸಾಕಷ್ಟು ಸಾಮಾಜಿಕ ಬದಲಾವಣೆಗಳು ಆಗಿದೆಯಾದರೂ, ಸಂವಿಧಾನದ ಆಶಯಕ್ಕೆ ಪೂರಕವಾದ ಸಾಮಾಜಿಕ ಸಮಾನತೆಯನ್ನು ನಾವು ಪಡೆದಿದ್ದೇವೆಯೇ ಎಂಬುದು ಪ್ರಶ್ನಾರ್ಹ. ಇಂತಹ ಸಂದರ್ಭದಲ್ಲಿ ಎಲ್ಲೋ ಹಾದಿ ತಪ್ಪುತ್ತಿರುವ ಆತಂಕದ ನಡುವೆಯೇ ನಾವು ಗಳಿಸಿದ ಸ್ವಾತಂತ್ರ ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆಯ ಆಶೋತ್ತರಗಳನ್ನು ಉಳಿಸಿಕೊಂಡು ಹೋಗಬೇಕಾಗಿದೆ ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಕೀರ್ತಿ ಕುಮಾರಿ, ಸಂಜೀವ ಸೂಟರ್ ಪೇಟೆ, ಡಾ. ಆಶಲತಾ ಪಿ., ಶೈಲೇಶ್ ಕೋಟ್ಯಾನ್, ಉಮೇಶ್ ಕೆ. ಅವರನ್ನು ಸನ್ಮಾನಿಸಲಾಯಿತು. ಇದೇ ವೇಳೆ ಅರ್ಹ ಫಲಾನುಭವಿಗಳಿಗೆ ವಿವಿಧ ಸವಲತ್ತುಗಳನ್ನು ವಿತರಿಸಲಾಯಿತು.

ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್‌ನ ಮುಖ್ಯ ಸಚೇತಕ ಐವನ್ ಡಿಸೋಜಾ, ಶಾಸಕ ಮೊಯ್ದಿನ್ ಬಾವಾ, ಮೇಯರ್ ಕವಿತಾ ಸನಿಲ್, ಉಪ ಮೇಯರ್ ರಜನೀಶ್, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಜಿಲ್ಲಾಧಿಕಾರಿ ಡಾ.ಕೆ.ಜಿ. ಜಗದೀಶ್, ಹೆಚ್ಚುವರಿ ಜಿಲ್ಲಾಧಿಕಾರಿ ಕುಮಾರ್, ಮಂಗಳೂರು ನಗರ ಪೊಲೀಸ್ ಆಯುಕ್ತ ಎಂ. ಚಂದ್ರಶೇಖರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೂಷಣ್ ಜಿ. ಬೊರಸೆ, ಮನಪಾ ಆಯುಕ್ತ ಮುಹಮ್ಮದ್ ನಝೀರ್, ಡಿಸಿಪಿಗಳಾದ ಶಾಂತರಾಜು, ಡಾ. ಸಂಜೀವ ಪಾಟೀಲ್, ಅರಣ್ಯ ಸಂರಕ್ಷಣಾಧಿಕಾರಿ ಡಾ. ಹನುಮಂತಪ್ಪ ಮೊದಲಾದವರು ಉಪಸ್ಥಿತರಿದ್ದರು.

ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಡಾ. ಸಂತೋಷ್ ಕುಮಾರ್ ಸ್ವಾಗತಿಸಿದರು 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News