ಆಪರೇಷನ್ ಕ್ಲೀನ್ ಮನಿ:60,000ಕ್ಕೂ ಅಧಿಕ ಜನರ ವಿರುದ್ಧ ತೆರಿಗೆ ಇಲಾಖೆಯ ತನಿಖೆ
ಹೊಸದಿಲ್ಲಿ,ಎ.14: ಆದಾಯ ತೆರಿಗೆ ಇಲಾಖೆಯು ತನ್ನ ‘ಆಪರೇಷನ್ ಕ್ಲೀನ್ ಮನಿ’ಯ ಎರಡನೇ ಹಂತಕ್ಕೆ ಶುಕ್ರವಾರ ಚಾಲನೆ ನೀಡಿದ್ದು, ನೋಟು ಅಮಾನ್ಯ ಅವಧಿಯಲ್ಲಿ ಹೆಚ್ಚಿನ ನಗದು ಮಾರಾಟ ತೋರಿಸಿದ್ದ 60,000ಕ್ಕೂ ಅಧಿಕ ಜನರನ್ನು ತನಿಖೆಗೊಳಪಡಿಸಲಿದೆ.
ಅಧಿಕ ವೌಲ್ಯದ ಆಸ್ತಿ ಖರೀದಿಗಳ 6,000ಕ್ಕೂ ಅಧಿಕ ವಹಿವಾಟುಗಳು ಮತ್ತು ವಿದೇಶಗಳಿಗೆ ಹಣ ರವಾನೆಯ 6,600 ಪ್ರಕರಣಗಳ ಕುರಿತು ವಿವರವಾದ ತನಿಖೆ ನಡೆಯಲಿದೆ ಎಂದು ಸರಕಾರವು ಹೇಳಿಕೆಯೊಂದರಲ್ಲಿ ತಿಳಿಸಿದೆ. ಆದಾಯ ತೆರಿಗೆ ಇಲಾಖೆಯು ರವಾನಿಸಿದ್ದ ನೋಟಿಸ್‌ಗಳಿಗೆ ಉತ್ತರಿಸದಿದ್ದ ಎಲ್ಲ ಪ್ರಕರಣಗಳ ಕುರಿತೂ ವಿವರವಾದ ತನಿಖೆ ನಡೆಯಲಿದೆ.
2016,ನ.9-2017,ಫೆ.18ರ ಅವಧಿಯಲ್ಲಿ ಆದಾಯ ತೆರಿಗೆ ಇಲಾಖೆಯು 2,362ಕ್ಕೂ ಅಧಿಕ ಶೋಧ, ಜಪ್ತಿ, ಸರ್ವೆ ಕಾರ್ಯಾಚರಣೆಗಳನ್ನು ನಡೆಸಿದ್ದು, 622 ಕೋ.ರೂ.ನಗದು ಸೇರಿದಂತೆ 818 ಕೋ.ರೂ.ಗಳ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿತ್ತು. 9,334 ಕೋ.ರೂ.ಗೂ ಅಧಿಕ ಅಘೋಷಿತ ಆದಾಯವನ್ನು ಪತ್ತೆ ಹಚ್ಚಲಾಗಿತ್ತು.
ಆದಾಯ ತೆರಿಗೆ ಇಲಾಖೆಯು 400ಕ್ಕೂ ಅಧಿಕ ಪ್ರಕರಣಗಳನ್ನು ಜಾರಿ ನಿರ್ದೇಶನಾ ಲಯ(ಇಡಿ) ಮತ್ತು ಸಿಬಿಐಗೆ ಒಪ್ಪಿಸಿದೆ.
ನೋಟು ರದ್ದತಿ ಅವಧಿಯಲ್ಲಿ ಬ್ಯಾಂಕುಗಳಲ್ಲಿ ಜಮೆ ಮಾಡಲಾದ ನಗದು ಹಣದ ಇ-ದೃಢೀಕರಣಕ್ಕಾಗಿ ತಂತ್ರಜ್ಞಾನದ ಲಾಭ ಪಡೆಯಲು ‘ಆಪರೇಷನ್ ಕ್ಲೀನ್ ಮನಿ’ಗೆ ಆದಾಯ ತೆರಿಗೆ ಇಲಾಖೆಯು 2017,ಜ.31ರಂದು ಚಾಲನೆ ನೀಡಿತ್ತು. ಮೊದಲ ಹಂತ ಸಂಪೂರ್ಣವಾಗಿ ಆನ್‌ಲೈನ್‌ನಲ್ಲಿ ನಡೆದಿದ್ದು, ತಮ್ಮ ತೆರಿಗೆ ಲೆಕ್ಕಾಚಾರಕ್ಕೆ ಅನುಗುಣ ವಾಗಿರದ ನಗದು ವಹಿವಾಟುಗಳನ್ನು ನಡೆಸಿದ್ದ 17.92 ಲ.ಜನರನ್ನು ಗುರುತಿಸಲಾಗಿತ್ತು ಮತ್ತು ಈ ವಹಿವಾಟುಗಳ ಬಗ್ಗೆ ವಿವರಿಸುವಂತೆ ಕೋರಲಾಗಿತ್ತು. ಈ ಪೈಕಿ 9.46 ಲ.ಜನರು ಉತ್ತರಗಳನ್ನು ನೀಡಿದ್ದರು.