×
Ad

ತ್ರಿವರ್ಣ ಧ್ವಜದ ಅರ್ಥ ತಿರುಚಿದ ಗೌತಮ್ ಗಂಭೀರ್

Update: 2017-04-14 15:17 IST

ಹೊಸದಿಲ್ಲಿ,ಎ.14: ಕ್ರಿಕೆಟಿಗ ಗೌತಮ್ ಗಂಭೀರ ಪಾಲಿಗೆ ಗುರುವಾರ ಮಹತ್ವಪೂರ್ಣ ದಿನವಾಗಿತ್ತು. ಕೋಲ್ಕತಾದ ಈಡನ್ ಗಾರ್ಡನ್ಸ್‌ನಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ಕಿಂಗ್ಸ್ ಇಲೆವನ್ ಪಂಜಾಬ್ ಅನ್ನು ಬಗ್ಗುಬಡಿಯಲು ಕೋಲ್ಕತಾ ನೈಟ್ ರೈಡರ್ಸ್ ತಂಡದ ನಾಯಕನಾಗಿ ಅವರು ಅಮೋಘ ಬ್ಯಾಟಿಂಗ್ ಪ್ರದರ್ಶಿಸಿದ್ದರು. ಆದರೆ ಗಂಭೀರ್ ಸುದ್ದಿಯಲ್ಲಿರಲು ಇದೊಂದೇ ಕಾರಣವಲ್ಲ.

ಕಾಶ್ಮೀರ ಕಣಿವೆಯಲ್ಲಿ ಕಲ್ಲುತೂರಾಟಗಾರರ ದಾಳಿಗೊಳಗಾಗಿದ್ದ ಸಿಆರ್‌ಪಿಎಫ್ ಯೋಧರಿಗೆ ಬೆಂಬಲ ಸೂಚಿಸಿ ಸರಣಿ ಟ್ವೀಟ್‌ಗಳನ್ನು ಮಾಡಿದ್ದ ಗಂಭೀರ್,ಕಾಶ್ಮೀರದ ಕಲ್ಲು ತೂರಾಟಗಾರರು ಸಿಆರ್‌ಪಿಎಫ ಯೋಧರ ಮೇಲೆ ಹಲ್ಲೆ ನಡೆಸಿದ ವೀಡಿಯೊ ವೈರಲ್ ಆಗಿದೆ. ನಮ್ಮ ಯೋಧರಿಗೆ ಬಿದ್ದಿರುವ ಪ್ರತಿ ಪೆಟ್ಟಿಗೂ ಕನಿಷ್ಠ ನೂರು ಜಿಹಾದಿಗಳ ಹೆಣಗಳು ಬೀಳಬೇಕು. ಯಾರಿಗೆ ಈಗ ಸ್ವಾತಂತ್ರ ಬೇಕೋ ಅವರು ಭಾರತವನ್ನು ಬಿಟ್ಟು ಹೊರಡಬಹುದು. ಕಾಶ್ಮೀರ ನಮ್ಮದು. ನಮ್ಮ ತ್ರಿವರ್ಣ ಧ್ವಜದಲ್ಲಿರುವ ಕೇಸರಿ ಬಣ್ಣ ನಮ್ಮ ಆಕ್ರೋಶದ ಬೆಂಕಿಯನ್ನು, ಬಿಳಿಯ ಬಣ್ಣ ಜಿಹಾದಿಗಳ ಶವವಸ್ತ್ರವನ್ನು, ಹಸಿರು ಬಣ್ಣ ಭಯೋತ್ಪಾದನೆಗೆ ವಿರೋಧವನ್ನು ಸಹ ಸೂಚಿಸುತ್ತವೆ ಎನ್ನುವುದನ್ನು ಭಾರತ ವಿರೋಧಿಗಳು ಮರೆತಿದ್ದಾರೆ ಎಂದು ಕಿಡಿಕಾರಿದ್ದರು.

 ತನ್ನ ರಾಷ್ಟ್ರವಾದದ ನಿಲವಿಗೆ ಗಂಭೀರ್ ಪ್ರಶಂಸೆಗಳಿಗೆ ಪಾತ್ರರಾಗಿದ್ದಾರಾದರೂ ಅವರ ಈ ತೀವ್ರಗಾಮಿ ಅಭಿಪ್ರಾಯಗಳ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಹಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಗಂಭೀರ್ ಓರ್ವ ದೇಶದ್ರೋಹಿ,ಅವರನ್ನು ಜೈಲಿಗೆ ಅಟ್ಟಬೇಕು ಎಂಬ ಆಕ್ರೋಶ ವ್ಯಕ್ತವಾಗಿದೆ.

ಪಠ್ಯಪುಸ್ತಕದ ಹುಳವಾಗುವುದು ಬೇಡ, ಗೌತಮ್. ಕೇಸರಿ ಹಿಂದುತ್ವ, ಬಿಳಿ ಕ್ರಿಶ್ಚಿಯನ್, ಹಸಿರು ಮುಸ್ಲಿಂ ಮತ್ತು ಚಕ್ರ ಬೌದ್ಧಧರ್ಮವನ್ನು ಸೂಚಿಸುತ್ತವೆ ಎಂದು ಒಂದು ಟ್ವೀಟ್ ಹೇಳಿದ್ದರೆ, ನೀವು ಸೇನೆಯಲ್ಲಿ ಸೇವೆ ಸಲ್ಲಿಸಲು ಸಿದ್ಧರಿದ್ದೀರಾ? ಗಡಿಗೆ ತೆರಳಿ ಅಲ್ಲಿಯ ಪ್ರತಿಕೂಲ ಸ್ಥಿತಿಗಳಲ್ಲಿ ಕಾದಾಡಲು ತಯಾರಿದ್ದೀರಾ ಎಂದು ಇನ್ನೊಂದು ಟ್ವೀಟ್ ಪ್ರಶ್ನಿಸಿದೆ.

ಗೌತಮ್,ನೀವೊಬ್ಬ ವಿಫಲ ಕ್ರಿಕೆಟಿಗ. ಈಗ ಸರಕಾರದಲ್ಲೊಂದು ಸ್ಥಾನ, ಸೇನೆ ಅಥವಾ ಜನರ ಸಹಾನುಭೂತಿಗಳನ್ನು ಬಯಸುತ್ತಿದ್ದೀರಿ. ರಾಜಕೀಯದಲ್ಲಿ ನೀವು ಮಾಡಬಹುದಾದದ್ದು ಏನೂ ಇಲ್ಲ ಎಂದು ಓರ್ವರು ಉಪದೇಶಿಸಿದ್ದರೆ, ಗಂಭೀರ್ ಸರಿಯೋ ತಪ್ಪೋ ತನಗೆ ಗೊತ್ತಿಲ್ಲ. ಆದರೆ ತ್ರಿವರ್ಣ ಧ್ವಜ ಕುರಿತ ಅವರ ಟ್ವೀಟ್ ರಾಷ್ಟ್ರೀಯವಾದಿಗಳಾಗಲು ಪ್ರಯತ್ನಿಸುತ್ತಿರುವ ಹಲವಾರು ನಕಲಿ ಶ್ಯಾಮರ ಬಣ್ಣವನ್ನು ಬಯಲುಗೊಳಿಸಿದೆ ಎಂದು ಇನ್ನೊಂದು ಟ್ವೀಟ್ ಕುಟುಕಿದೆ.

ತ್ರಿವರ್ಣ ಧ್ವಜವನ್ನು ಶವವಸ್ತ್ರ ಮತ್ತು ದ್ವೇಷದ ಸಂಕೇತ ಎಂದು ಹೇಳಿರುವುದು ನಮ್ಮ ರಾಷ್ಟ್ರಧ್ವಜಕ್ಕೆ ಮಾಡಿರುವ ಅವಮಾನವಾಗಿದೆ. ಇದು ದೇಶದ್ರೋಹವಾಗಿದೆ ಎಂದೊಬ್ಬರು ಹೇಳಿದರೆ, ದೇಶದ್ರೋಹಕ್ಕಾಗಿ ಯಾರನ್ನಾದರೂ ಬಂಧಿಸಬೇಕಿದ್ದರೆ ಅದು ಗಂಭೀರ್ ಅವರೇ ಆಗಿದ್ದಾರೆ. ತ್ರಿವರ್ಣ ಧ್ವಜವು ಶವವಸ್ತ್ರವಲ್ಲ ಅಥವಾ ದ್ವೇಷವನ್ನು ಸೂಚಿಸುವುದಿಲ್ಲ ಎಂದು ಇನ್ನೊಂದು ಟ್ವೀಟ್ ಆಕ್ರೋಶ ವ್ಯಕ್ತಪಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News