ಕಾಶ್ಮೀರಿ ಯುವಕನನ್ನು ಸೇನಾ ಜೀಪಿನೆದುರು ಕಟ್ಟಿದ ವೀಡಿಯೊ ಕ್ಲಿಪ್ ವೈರಲ್

Update: 2017-04-14 10:06 GMT

ಶ್ರೀನಗರ,ಎ.14: ಬಡ್ಗಾಮ್ ಜಿಲ್ಲೆಯಲ್ಲಿ ಕಾಶ್ಮೀರಿ ಯುವಕನೋರ್ವನನ್ನು ಸೇನೆಯ ಜೀಪಿನ ಎದುರು ಕಟ್ಟಿದ ಮತ್ತು ಆತನನ್ನು ಮಾನವ ಗುರಾಣಿಯಾಗಿ ಬಳಸಿಕೊಂಡ ದೃಶ್ಯವನ್ನು ತೋರಿಸುವ ವೀಡಿಯೊ ತುಣುಕೊಂದು ವೈರಲ್ ಆಗಿದೆ.

ಬಡ್ಗಾಮ್ ಜಿಲ್ಲೆಯಲ್ಲಿಯ, ರವಿವಾರ ಮತದಾನ ಮತ್ತು ಗುರುವಾರ ಮರುಮತದಾನ ನಡೆದ ಗ್ರಾಮವೊಂದರಲ್ಲಿ ಚಲಿಸುತ್ತಿದ್ದ ಸೇನೆಯ ಜೀಪಿನ ಎದುರು ಭಾಗಕ್ಕೆ ಯುವಕನನ್ನು ಹಗ್ಗದಿಂದ ಕಟ್ಟಿ ಹಾಕಿದ್ದನ್ನು ಈ ವೀಡಿಯೊ ತುಣುಕು ತೋರಿಸುತ್ತಿದೆ. ಗುರುವಾರ ಸಂಜೆ ಕಾಶ್ಮೀರದಲ್ಲಿ ಅಂತರ್ಜಾಲ ಸೇವೆ ಮರುಸ್ಥಾಪನೆಯಾದ ಬೆನ್ನಿಗೇ ಈ ವೀಡಿಯೊ ತುಣುಕನ್ನು ಅಪ್‌ಲೋಡ್ ಮಾಡಲಾಗಿದೆ.

ಈ ವೀಡಿಯೊ ತುಣುಕಿನ ಸತ್ಯಾಸತ್ಯತೆಯನ್ನು ಸೇನೆಯು ಪರಿಶೀಲಿಸುತ್ತಿದೆ ಎಂದು ಸೇನೆಯ ವಕ್ತಾರ ಕರಾಜೇಶ ಕಾಲಿಯಾ ಸುದ್ದಿಗಾರರಿಗೆ ತಿಳಿಸಿದರು.

 ಕಲ್ಲುಗಳನ್ನು ತೂರುವವರಿಗೆ ಈ ಯುವಕನಿಗಾದ ಗತಿಯೇ ಆಗಲಿದೆ ಎಂದು ಯೋಧನೋರ್ವ ಹೇಳುತ್ತಿರುವುದು ವೀಡಿಯೊದಲ್ಲಿ ಸ್ಪಷ್ಟವಾಗಿ ಕೇಳುತ್ತಿದೆ. ಮತಗಟ್ಟೆಗಳಿಗೆ ತೆರಳುತ್ತಿದ್ದ ಸೇನೆಯ ಗಸ್ತುವಾಹನದ ಎದುರಿನಿಂದ ಈ ಜೀಪು ಚಲಿಸುತ್ತಿತ್ತು.

ಈ ಘಟನೆಗೆ ಪ್ರತಿಕ್ರಿಯಿಸಿರುವ ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಉಮರ್ ಅಬ್ದುಲ್ಲಾ ಅವರು, ಈ ಸಿಆರ್‌ಪಿಎಫ್ ವೀಡಿಯೋ ಜನರಲ್ಲಿ ಸೃಷ್ಟಿಸಿರುವ ಆಕ್ರೋಶ ನನಗೆ ಅರ್ಥವಾಗುತ್ತದೆ. ಈ ಆಕ್ರೋಶ ನನ್ನಲ್ಲೂ ಇದೆ ಎಂದು ಟ್ವೀಟಿಸಿದ್ದಾರೆ.

ಈ ಘಟನೆ ಬೀರ್ವ್ಹಾದ ಗಂಡಿಪೋರಾ ಗ್ರಾಮದಲ್ಲಿ ನಡೆದಿದೆ ಎಂದು ತಿಳಿಸಿರುವ ನ್ಯಾಷನಲ್ ಕಾನ್‌ಫರೆನ್ಸ್‌ನ ತನ್ವೀರ್ ಸಾದಿಕ್ ಅವರು, ಇದೊಂದು ಆಘಾತಕಾರಿ ಮತ್ತು ನಾಚಿಕೆಗೇಡಿನ ಘಟನೆ ಎಂದು ಬಣ್ಣಿಸಿದ್ದಾರೆ.

ಎ.9ರಂದು ಶ್ರೀನಗರ ಲೋಕಸಭಾ ಕ್ಷೇತ್ರದ ಉಪಚುನಾವಣೆಯ ಸಂದರ್ಭ ಯುವಕರ ಗುಂಪೊಂದು ಸಿಆರ್‌ಪಿಎಫ್ ಯೋಧರನ್ನು ಥಳಿಸುತ್ತಿರುವ ವೀಡಿಯೊ ಕ್ಲಿಪ್ ವೈರಲ್ ಆದ ಬೆನ್ನಿಗೇ ಈ ವೀಡಿಯೊ ತುಣುಕು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News