ಭಾರತ ಮೂಲದ ಅಮೆರಿಕನ್ ವೈದ್ಯೆಯ ಬಂಧನ
ನ್ಯೂಯಾರ್ಕ್, ಎ. 13: ಆರರಿಂದ ಎಂಟು ವರ್ಷ ಪ್ರಾಯದ ಹೆಣ್ಣು ಮಕ್ಕಳ ಜನನಾಂಗಗಳನ್ನು ವಿಕೃತಗೊಳಿಸಿದ ಆರೋಪದಲ್ಲಿ ಅಮೆರಿಕದ ವೈದ್ಯರೊಬ್ಬರನ್ನು ಡೆಟ್ರಾಯಿಟ್ ನಗರದಲ್ಲಿ ಬಂಧಿಸಲಾಗಿದೆ ಎಂದು ಪ್ರಾಸಿಕ್ಯೂಟರ್‌ಗಳು ಗುರುವಾರ ತಿಳಿಸಿದರು.
ವ್ಯಾಪಕವಾಗಿ ಖಂಡನೆಗೊಳಗಾಗಿರುವ ಈ ಕೃತ್ಯವನ್ನು ಮಿಶಿಗನ್ ರಾಜ್ಯದ ನಾರ್ತ್‌ವಿಲ್‌ನ 44 ವರ್ಷದ ವೈದ್ಯೆ ಜಮುನಾ ನಗರ್‌ವಾಲಾ 12 ವರ್ಷಗಳಿಂದ ನಡೆಸಿಕೊಂಡು ಬರುತ್ತಿದ್ದಾರೆ ಎಂದು ಆರೋಪಿಸಲಾಗಿದೆ. ಅವರು ಮಿಶಿಗನ್‌ನ ಲಿವೋನಿಯ ನಗರದಲ್ಲಿರುವ ವೈದ್ಯಕೀಯ ಕಚೇರಿಯೊಂದರಲ್ಲಿ ಈ ಕೃತ್ಯವನ್ನು ನಡೆಸುತ್ತಿದ್ದಾರೆ ಎಂದು ಆರೋಪಿಸಲಾಗಿದೆ.
ಇಂಥ ಕೃತ್ಯವನ್ನು ನಡೆಸುವುದು ಅಮೆರಿಕದಲ್ಲಿ ಕಾನೂನುಬಾಹಿರವಾಗಿದೆ.ಅವರು ಗುರುವಾರ ಡೆಟ್ರಾಯಿಟ್‌ನಲ್ಲಿರುವ ಅಮೆರಿಕದ ಫೆಡರಲ್ ನ್ಯಾಯಾಲಯಕ್ಕೆ ಗುರುವಾರ ಹಾಜರಾದರು. ಅವರನ್ನು ನ್ಯಾಯಾಲಯವು ಸೋಮವಾರದವರೆಗೆ ನ್ಯಾಯಾಂಗ ಬಂಧನಕ್ಕೆ ನೀಡಿತು.
18 ವರ್ಷಕ್ಕಿಂತ ಕೆಳಗಿನ ಬಾಲಕಿಯರ ಜನನಾಂಗ ವಿಕೃತಗೊಳಿಸುವುದನ್ನು (ಕತ್ತರಿಸುವುದನ್ನು) ಅಮೆರಿಕದಲ್ಲಿ 1996ರಲ್ಲೇ ನಿಷೇಧಿಸಲಾಗಿದೆ.