×
Ad

ಜಿಲ್ಲೆಯ ಎಲ್ಲಾ ಮೀನುಗಾರಿಕಾ ದೋಣಿಗಳ ಸಕ್ರಮಕ್ಕೆ ಕ್ರಮ: ಸಚಿವ ಪ್ರಮೋದ್

Update: 2017-04-14 20:19 IST

ಉಡುಪಿ, ಎ.14: ಜಿಲ್ಲೆಯಲ್ಲಿರುವ ಎಲ್ಲಾ ಮೀನುಗಾರಿಕಾ ದೋಣಿಗಳನ್ನು ಸಕ್ರಮಗೊಳಿಸಲು ಕ್ರಮ ಕೈಗೊಳ್ಳಲಾಗಿದ್ದು, ಇದು ಮುಗಿದ ತಕ್ಷಣ ಎಲ್ಲವನ್ನು ಕಟ್ಟುನಿಟ್ಟಾಗಿ ಕಾನೂನುಬದ್ಧಗೊಳಿಸಲಾಗುವುದು ಎಂದು ರಾಜ್ಯ ಮೀನುಗಾರಿಕಾ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದ್ದಾರೆ.

ಮಲ್ಪೆಯ ಮೀನುಗಾರಿಕಾ ಬಂದರಿನಲ್ಲಿ ಮೀನುಗಾರಿಕೆ ಉಪನಿರ್ದೇಶಕರ ನೂತನ ಕಚೇರಿಯನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಮೀನುಗಾರಿಕಾ ದೋಣಿಗಾಗಿ ಅರ್ಜಿ ಹಾಕಿದ ಅರ್ಹರಿಗೆ ಸಾಧ್ಯತಾ ಪತ್ರಗಳನ್ನು ನೀಡಲಾಗುತ್ತಿದೆ. ಮೀನುಗಾರರ ಪಾಸ್ ಪುಸ್ತಕ, ಪರವಾನಿಗೆ ಪತ್ರ ಸೇರಿದಂತೆ ಮೀನುಗಾರಿಕಾ ದೋಣಿಯ ಎಲ್ಲಾ ದಾಖಲೆಗಳನ್ನು ಸಕ್ರಮ ಗೊಳಿಸಲು ಕ್ರಮಕೈಗೊಳ್ಳಲಾಗುತ್ತಿದೆ. ದೇಶದಲ್ಲಿ ಗುಜರಾತ್‌ನ ವೆರಾವಲ್ ಬಿಟ್ಟರೆ ಅತೀ ಹೆಚ್ಚಿನ ಮೀನುಗಾರಿಕಾ ದೋಣಿಗಳಿರುವುದು ಮಲ್ಪೆ ಬಂದರಿನಲ್ಲಿ. ಇಲ್ಲಿನ ಎಲ್ಲಾ ಮೀನುಗಾರಿಕಾ ದೋಣಿಗಳನ್ನು ಸಕ್ರಮಗೊಳಿಸಲಾಗುತ್ತಿದ್ದು, ಇದರಿಂದ ಮೀನುಗಾರರಿಗೆ ಡೀಸೆಲ್ ಸಬ್ಸಿಡಿ ಕ್ರಮಬದ್ಧವಾಗಿ ದೊರಕಲಿದೆ. ಅಲ್ಲದೇ ಮುಂದೆ ಮೀನುಗಾರಿಕೆ ವೇಳೆ ಸಮುದ್ರದಲ್ಲಿ ಕೋಸ್ಟ್ ಗಾರ್ಡ್‌ನ ತಪಾಸಣೆಯ ವೇಳೆ ಎದುರಿಸಬಹುದಾದ ಕಾನೂನು ತೊಡಕುಗಳು ನಿವಾರಣೆಯಾಗಲಿದೆ ಎಂದರು.

ಮೀನುಗಾರರಿಗೆ ಈ ವರ್ಷದ ಜನವರಿಯಿಂದ ಮಾರ್ಚ್ ತಿಂಗಳವರೆಗಿನ ಬಾಕಿ ಇರುವ 38 ಕೋಟಿ ರೂ. ಡೀಸೆಲ್ ಸಬ್ಸಿಡಿಯನ್ನು ಇದೇ ತಿಂಗಳು ಎಲ್ಲರ ಖಾತೆಗಳಿಗೆ ಜಮೆ ಮಾಡಲಾಗುವುದು. ಎಪ್ರಿಲ್ ತಿಂಗಳಿನಿಂದ ಹೊಸ ವರ್ಷದ ಡೀಸೆಲ್ ಸಬ್ಸಿಡಿ ಕಾಲಕಾಲಕ್ಕೆ ಸರಿಯಾಗಿ ಆಯಾ ಮೀನುಗಾರರ ಬ್ಯಾಂಕ್ ಖಾತೆಗಳಿಗೆ ಜಮಾ ಆಗಲಿದೆ. ಈ ಬಗ್ಗೆ ಮೀನುಗಾರರಿಗೆ ಯಾವುದೇ ಆತಂಕ ಬೇಡ. ಏಕೆಂದರೆ ಈ ಬಾರಿಯ ಬಜೆಟ್‌ನಲ್ಲಿ ಡೀಸೆಲ್ ಸಬ್ಸಿಡಿಗಾಗಿ 157 ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ ಎಂದರು.

ಮಲ್ಪೆ ಸಮೀಪದ ಪಡುಕೆರೆಗೆ ಇತ್ತೀಚೆಗೆ ಸೇತುವೆ ನಿರ್ಮಿಸಲಾಗಿದ್ದು, ಇದೀಗ ಅಲ್ಲಿ ನಬಾರ್ಡ್ ನೆರವಿನಿಂದ 20 ಕೋಟಿ ರೂ. ವೆಚ್ಚದಲ್ಲಿ ಜಟ್ಟಿ ಹಾಗೂ ತಡೆಗೋಡೆ ನಿರ್ಮಾಣಕ್ಕೆ ಪ್ರಸ್ತಾಪ ಸಲ್ಲಿಸಲಾಗಿದೆ ಎಂದು ಪ್ರಮೋದ್ ನುಡಿದರು.

ಇದೇ ಸಂದರ್ದಲ್ಲಿ ವಿವಿಧ ಫಲಾನುಭವಿಗಳಿಗೆ ಸಂಕಷ್ಟ ಪರಿಹಾರ ನಿಧಿಯ ಚೆಕ್ ಮತ್ತು ಸಾಧ್ಯತಾ ಪತ್ರಗಳನ್ನು ಸಚಿವರು ವಿತರಿಸಿದರು.

ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನರಸಿಂಹಮೂರ್ತಿ, ತಾಪಂ ಅಧ್ಯಕ್ಷೆ ನಳಿನಿ ಪ್ರದೀಪ್ ರಾವ್, ಮಲ್ಪೆಮೀನುಗಾರರ ಸಂಘದ ಅಧ್ಯಕ್ಷ ಹಿರಿಯಣ್ಣ ಟಿ. ಕಿದಿಯೂರು, ಸತೀಶ್ ಅಮಿನ್ ಪಡುಕೆರೆ, ಮಂಗಳೂರು ಮೀನುಗಾರಿಕಾ ಇಲಾಖೆಯ ಉಪ ನಿರ್ದೇಶಕ ಮಹೇಶ್ ಕುಮಾರ್, ಉಡುಪಿ ಮೀನುಗಾರಿಕ ಇಲಾಖೆಯ ಜಂಟಿ ನಿರ್ದೇಶಕ ಗಣಪತಿ ಭಟ್ ಉಪಸ್ಥಿತರಿದ್ದರು.

ಉಡುಪಿ ಮೀನುಗಾರಿಕಾ ಇಲಾಖೆಯ ಉಪ ನಿರ್ದೇಶಕ ಪಿ.ಪಾರ್ಶ್ವನಾಥ್ ಸ್ವಾಗತಿಸಿ, ವಂದಿಸಿದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News