ಕೆನಡದಲ್ಲಿ ಪ್ರಯಾಣಿಕರನ್ನು ಹೊರದಬ್ಬುವುದಕ್ಕೆ ನಿಷೇಧ

Update: 2017-04-14 15:11 GMT

ಒಟ್ಟಾವ (ಕೆನಡ), ಎ. 14: ನಿಗದಿಗಿಂತ ಹೆಚ್ಚು ಟಿಕೆಟ್‌ಗಳನ್ನು ಮಾರಾಟ ಮಾಡಿದ ಪ್ರಕರಣಗಳಲ್ಲಿ, ಯಾವುದೇ ವಿಮಾನಯಾನ ಸಂಸ್ಥೆಗಳು ಯಾವುದೇ ಪ್ರಯಾಣಿಕರನ್ನು ಹೊರಹಾಕುವುದನ್ನು ಕೆನಡ ಸರಕಾರ ನಿಷೇಧಿಸಿದೆ.

ದೇಶದೊಳಕ್ಕೆ ಬರುವ ಮತ್ತು ಹೋಗುವ ವಿಮಾನಯಾನ ಸಂಸ್ಥೆಗಳ ಮುಖ್ಯಸ್ಥರಿಗೆ ಗುರುವಾರ ಪತ್ರವೊಂದನ್ನು ಬರೆದಿರುವ ಕೆನಡ ಸಾರಿಗೆ ಸಚಿವ ಮಾರ್ಕ್ ಗಾರ್ನೊ, ಅಮೆರಿಕದಲ್ಲಿ ಯುನೈಟೆಡ್ ಏರ್‌ಲೈನ್ಸ್ ವಿಮಾನವೊಂದರಲ್ಲಿ ನಡೆದಿರುವ ಘಟನೆ ಕೆನಡದಲ್ಲಿ ನಡೆಯಬಾರದು ಎಂದು ಹೇಳಿದ್ದಾರೆ ಎಂದು ಕ್ಸಿನುವಾ ವಾರ್ತಾ ಸಂಸ್ಥೆ ವರದಿ ಮಾಡಿದೆ.

ಈ ವಾರದ ಆರಂಭದಲ್ಲಿ ಅಮೆರಿಕದ ಶಿಕಾಗೊ ನಗರದ ವಿಮಾನ ನಿಲ್ದಾಣವೊಂದರಲ್ಲಿ ಪ್ರಯಾಣಿಕರೊಬ್ಬರನ್ನು ವಿಮಾನದಿಂದ ಭದ್ರತಾ ಸಿಬ್ಬಂದಿ ನೆಲದಲ್ಲೇ ದರದರನೆ ಎಳೆದುಕೊಂಡು ಹೋಗಿ ಹೊರಹಾಕಿದ್ದರು. ಈ ಘಟನೆಯಲ್ಲಿ ಪ್ರಯಾಣಿಕನಿಗೆ ಗಾಯಗಳಾಗಿದ್ದವು ಹಾಗೂ ವಿಶ್ವಾದ್ಯಂತ ಆಕ್ರೋಶ ವ್ಯಕ್ತವಾಗಿತ್ತು.

ನಿಗದಿಗಿಂತ ಹೆಚ್ಚು ಪ್ರಯಾಣಿಕರಿಗೆ ಟಿಕೆಟ್‌ಗಳನ್ನು ನೀಡಲಾಗಿದ್ದು, ಸಿಬ್ಬಂದಿಗೆ ಸ್ಥಳಾವಕಾಶ ಮಾಡಿಕೊಡುವುದಕ್ಕಾಗಿ ಓರ್ವ ಪ್ರಯಾಣಿಕನನ್ನು ಹೊರಹಾಕುವುದು ಅನಿವಾರ್ಯವಾಗಿತ್ತು ಎಂದು ಯುನೈಟೆಡ್ ಏರ್‌ಲೈನ್ಸ್ ಹೇಳಿಕೊಂಡಿದೆ.

‘‘ಅಮೆರಿಕದಲ್ಲಿ ನಡೆದ ಘಟನೆಯಿಂದ ನಾನು ಮತ್ತು ಎಲ್ಲ ಕೆನಡಿಯನ್ನರು ಆಘಾತಗೊಂಡಿರುವಷ್ಟೇ ನೀವೂ ಆಘಾತಗೊಂಡಿರುತ್ತೀರಿ ಎನ್ನುವುದು ನನಗೆ ಗೊತ್ತಿದೆ. ಕೆನಡದಲ್ಲಿ ಇಂಥ ಘಟನೆಗಳು ಅಸ್ವೀಕಾರಾರ್ಹ ಎನ್ನುವುದನ್ನು ತಿಳಿಸಲು ನಾನು ನಿಮಗೆ ಈ ಪತ್ರ ಬರೆಯುತ್ತಿದ್ದೇನೆ’’ ಎಂದು ಪತ್ರದಲ್ಲಿ ಸಚಿವರು ಹೇಳಿದ್ದಾರೆ.

ಮೂಗು ಮುರಿತಕ್ಕೆ ಒಳಗಾದ ಸಂತ್ರಸ್ತ

ಶಿಕಾಗೊ ವಿಮಾನ ನಿಲ್ದಾಣದಲ್ಲಿ ಯುನೈಟೆಡ್ ಏರ್‌ಲೈನ್ಸ್ ವಿಮಾನವೊಂದರಿಂದ ಅಮಾನುಷವಾಗಿ ಹೊರದಬ್ಬಲ್ಪಟ್ಟ ವೈದ್ಯ ಡೇವಿಡ್ ಡಾವೊ ಮೂಗು ಮುರಿತ ಹಾಗೂ ಮಾನಸಿಕ ಆಘಾತಕ್ಕೆ ಒಳಗಾಗಿದ್ದಾರೆ ಎಂದು ಅವರ ವಕೀಲ ಗುರುವಾರ ಹೇಳಿದ್ದಾರೆ.

‘‘ತುಂಬಾ ಸಮಯದಿಂದ ವಿಮಾನಯಾನ ಕಂಪೆನಿಗಳು, ಅದರಲ್ಲೂ ಮುಖ್ಯವಾಗಿ ಯುನೈಟೆಡ್ ಏರ್‌ಲೈನ್ಸ್ ನಮ್ಮನ್ನು ಕೆಟ್ಟದಾಗಿ ನಡೆಸಿಕೊಂಡು ಬಂದಿದೆ’’ ಎಂದು ಶಿಕಾಗೊದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಥಾಮಸ್ ಡೆಮೆಟ್ರಿಯೊ ಹೇಳಿದರು.

ಯುನೈಟೆಡ್ ಏರ್‌ಲೈನ್ಸ್ ಮತ್ತು ಶಿಕಾಗೊ ನಗರದ ವಿರುದ್ಧ ತಾವು ಮೊಕದ್ದಮೆ ಹೂಡುವ ಸಾಧ್ಯತೆಯಿಂದೆ ಎಂದರು.

69 ವರ್ಷದ ವಿಯೆಟ್ನಾಮಿ-ಅಮೆರಿಕನ್ ವೈದ್ಯ ಈಗ ಆಸ್ಪತ್ರೆಯಲ್ಲಿ ಚಿಕತ್ಸೆ ಪಡೆಯುತ್ತಿದ್ದಾರೆ. ಅವರನ್ನು ಕೆಂಟಕಿಯ ಲೂಯಿಸ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಯುನೈಟೆಡ್ ಏರ್‌ಲೈನ್ಸ್ ವಿಮಾನದಿಂದ ಬರ್ಬರವಾಗಿ ನೆಲದಲ್ಲೇ ಎಳೆದೊಯ್ದು ಹೊರಹಾಕಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News