×
Ad

ಉಡುಪಿ ಜಿಲ್ಲೆಯಾದ್ಯಂತ ಗುಡ್‌ಫ್ರೈಡೆ ಆಚರಣೆ

Update: 2017-04-14 21:04 IST

ಉಡುಪಿ, ಎ.14: ಯೇಸುಕ್ರಿಸ್ತರನ್ನು ಶಿಲುಬೆಗೇರಿಸಿದ ದಿನ ನೆನೆಯುವ ಶುಭ ಶುಕ್ರವಾರವನ್ನು ಜಿಲ್ಲೆಯಾದ್ಯಂತ ಕ್ರೈಸ್ತ ಭಾಂಧವರು ಪ್ರಾರ್ಥನೆ ಧ್ಯಾನದೊಂದಿಗೆ ಶೃದ್ಧಾಭಕ್ತಿಯಿಂದ ಆಚರಿಸಿದರು.

ಜಿಲ್ಲೆಯ ವಿವಿಧ ಚರ್ಚ್‌ಗಳಲ್ಲಿ ಯೇಸುವಿನ ಶಿಲುಬೆಯ ಹಾದಿ (ವೆ ಆಫ್ ಕ್ರಾಸ್) ನೆನೆಯುವುದರೊಂದಿಗೆ ವಿಶೇಷ ಪ್ರಾರ್ಥನಾ ವಿಧಿಗಳು ನೆರವೇರಿಸ ಲಾಯಿತು. ಯೇಸುಕ್ರಿಸ್ತರ ಬೃಹತ್ ಪ್ರತಿಮೆಯನ್ನು ಮೆರವಣಿಗೆಯಲ್ಲಿ ಕೊಂಡೊಯ್ದು ಪ್ರಾರ್ಥನೆ ಸಲ್ಲಿಸಲಾಯಿತು. ಜಿಲ್ಲೆಯ ಪ್ರಮುಖ ಧಾರ್ಮಿಕ ವಿಧಿವಿಧಾನಗಳು ಕಲ್ಯಾಣಪುರ ಮಿಲಾಗ್ರಿಸ್ ಕ್ಯಾಥೆಡ್ರಲ್‌ನಲ್ಲಿ ಉಡುಪಿ ಧರ್ಮಾಧ್ಯಕ್ಷ ವಂ.ಡಾ.ಜೆರಾಲ್ಡ್ ಐಸಾಕ್ ಲೋಬೊ ನೇತೃತ್ವದಲ್ಲಿ ನಡೆಯಿತು.

ಧರ್ಮಪ್ರಾಂತದ ಎಸ್ಟೇಟ್ ಮ್ಯಾನೇಜರ್ ವಂ.ಹೆನ್ರಿ ಮಸ್ಕರೇನ್ಹಸ್ ತಮ್ಮ ಪ್ರವಚನದಲ್ಲಿ ‘ಯೇಸುವಿನ ದೀನತೆ ಮುಗ್ದತೆ, ದುರ್ಬಲತೆಯಾಗಿರಲಿಲ್ಲ ಬದಲಾಗಿ ಅವರು ನಮ್ಮೆಲ್ಲರ ಪಾಪಗಳಿಗೆ ಮುಕ್ತಿ ನೀಡುವುದಕ್ಕಾಗಿ ಶಿಲುಬೆಯ ಮರಣವನ್ನು ಅಪ್ಪುವುದರೊಂದಿಗೆ ಮನುಕುಲದ ಉದ್ಧಾರಕ್ಕಾಗಿ ಕಾರಣೀಭೂತರಾದರು. ದೇವರು ಈ ಲೋಕವನ್ನು ಎಷ್ಟಾಗಿ ಪ್ರೀತಿಸಿದರೆಂದರೆ, ತಮ್ಮ ಏಕೈಕ ಪುತ್ರನನ್ನೇ ಈ ಜಗತ್ತಿಗೆ ಧಾರೆಯೆರೆದರು ಎಂದು ಹೇಳಿದರು.

ಯೇಸುಕ್ರಿಸ್ತರು ಮರಣದಂಡನೆಗೆ ಗುರಿಯಾಗುವುದಲ್ಲಿಂದ ಆರಂಭಿಸಿ ಶಿಲುಬೆ ಹೊತ್ತು ಕಲ್ವಾರಿ ಬೆಟ್ಟಕ್ಕೆ ಸಾಗಿ ಶಿಲುಬೆಗೆ ಏರಿ ಮರಣವನ್ನಪ್ಪುವ ಘಟನೆಗಳನ್ನು ಸ್ಮರಿಸುವ ಶಿಲುಬೆಯ ಹಾದಿಯನ್ನು ಜಿಲ್ಲೆಯ ಕೆಲವೊಂದು ಚರ್ಚ್ ಗಳಲ್ಲಿ  ಪ್ರದರ್ಶಿಸಲಾಯಿತು.

ಯೇಸುಕ್ರಿಸ್ತರ ಮರಣದಿಂದಾಗಿ ಶೋಕದಿಂದ ಇರುವ ಧರ್ಮಸಭೆಯು ಶುಭಶುಕ್ರವಾರದಂದು ಚರ್ಚ್ ಗಳಲ್ಲಿ ಬಲಿಪೂಜೆಯನ್ನು ಅರ್ಪಿಸದೆ ಅದರ ಬದಲು ಯೇಸುವಿನ ಶಿಲುಬೆಯ ಹಾದಿಯನ್ನು ಸಂಪೂರ್ಣವಾಗಿ ಪರಿಚಯಿ ಸುವ ಹೊಸ ಒಡಬಂಡಿಕೆಯ ಪವಿತ್ರ ಬೈಬಲಿನ ಪಠಣಗಳನ್ನು ಪಠಿಸಲಾಯಿತು.

ಮಳೆಗಾಗಿ ವಿಶೇಷ ಪ್ರಾರ್ಥನೆ
ರಾಜ್ಯಾದ್ಯಂತ ಕಾಡುತ್ತಿರುವ ಬರ ಪರಿಸ್ಥಿತಿ ಹಾಗೂ ಉಡುಪಿ ಜಿಲ್ಲೆಯಲ್ಲಿ ಕಾಡುತ್ತಿರುವ ನೀರಿನ ಸಮಸ್ಯೆಯ ಕುರಿತು ಧಾರ್ಮಿಕ ವಿಧಿಯ ವೇಳೆ ಕಳವಳ ವ್ಯಕ್ತಪಡಿಸಿದ ಧರ್ಮಾಧ್ಯಕ್ಷರು, ಜಿಲ್ಲೆ ಹಾಗೂ ರಾಜ್ಯಕ್ಕೆ ಅಗತ್ಯವಿರುವ ಮಳೆಗಾಗಿ ವಿಶೇಷ ಪ್ರಾರ್ಥನೆಯನ್ನು ಸಲ್ಲಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News