ಹೆದ್ದಾರಿಯಲ್ಲಿ ತ್ಯಾಜ್ಯ ನೀರು ಬಿಡುವ ಲಾರಿಗಳ ವಿರುದ್ಧ ಆಕ್ರೋಶ
ಮುಲ್ಕಿ, ಎ.14: ರಾಷ್ಟ್ರೀಯ ಹೆದ್ದಾರಿ 66ರ ಕೋಲ್ನಾಡು-ಕಾರ್ನಾಡ್ ಬೈಪಾಸ್ ನಡುವೆ ಹೆದ್ದಾರಿ ಬದಿಯಲ್ಲಿ ಮೀನಿನ ಲಾರಿ ನಿಲ್ಲಿಸಿ ತ್ಯಾಜ್ಯ ಬಿಡುವ ಚಾಲಕರ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶುಕ್ರವಾರ ಬೆಳಗ್ಗೆ ಲಾರಿ ಚಾಲಕನೊಬ್ಬ ಮೀನಿನ ತ್ಯಾಜ್ಯ ರಸ್ತೆ ಬದಿಗೆ ಬಿಡುತ್ತಿರುವ ಸಂದರ್ಭ ಸ್ಥಳೀಯರು ಆತನನ್ನು ತರಾಟೆಗೆ ತೆಗೆದುಕೊಂಡರು ಎಂದು ತಿಳಿದು ಬಂದಿದೆ.
ಹೆದ್ದಾರಿಯಲ್ಲಿ ಸಂಚರಿಸುವ ಮೀನು ಸಾಗಾಟದ ಟೆಂಪೋ ಹಾಗೂ ಲಾರಿ ಮೀನಿನ ತ್ಯಾಜ್ಯ ನೀರನ್ನು ಹೆದ್ದಾರಿಯಲ್ಲಿ ಬಿಡುತ್ತಿರುವುದರಿಂದ ದ್ವಿಚಕ್ರ ವಾಹನಗಳು ಅಪಘಾಕ್ಕೀಡಾಗುತ್ತಿವೆ. ಈ ಪರಿಸರದಲ್ಲಿ ಲಾರಿ ನಿಲ್ಲಿಸಿ ತ್ಯಾಜ್ಯ ವಸ್ತು ಎಸೆಯುವುದಲ್ಲದೆ, ಮೀನಿನ ನೀರನ್ನು ರಸ್ತೆ ಬದಿಗೆ ಬಿಡುತ್ತಿದ್ದಾರೆ. ಇದರಿಂದ ಪರಿಸರ ಮಾಲಿನ್ಯ ಉಂಟಾಗುತ್ತಿದೆ ಎಂದು ಸ್ಥಳೀಯರು ದೂರಿದ್ದಾರೆ.
ಕೂಡಲೇ ಸಂಚಾರಿ ಪೊಲೀಸರು ಗಮನಹರಿಸಿ ಸೂಕ್ತ ಕ್ರಮಕ್ಕೆ ಮುಂದಾಗಬೇಕು.ಇಲ್ಲದಿದ್ದಲ್ಲಿ ಸಂಚಾರಿ ಠಾಣೆಯ ಎದುರು ಧರಣಿ ನಡೆಸಲಾಗುವುದು ಎಂದು ಸ್ಥಳೀಯರು ಎಚ್ಚರಿಸಿದ್ದಾರೆ.