ಬಿಜೆಪಿ, ಸಂಘಪರಿವಾರದಿಂದ ರಾಜಕೀಯ ಅಧಿಕಾರಕ್ಕಾಗಿ ಪ್ರಜಾಪ್ರಭುತ್ವದ ಕಗ್ಗೊಲೆ:ಎಂ.ಕೂಸಪ್ಪ
ಪುತ್ತೂರು, ಎ.14: ಚುನಾವಣೆ ಸಂದರ್ಭ ಬಿಜೆಪಿ ಮತ್ತು ಸಂಘ ಪರಿವಾರ ಸೇರಿಕೊಂಡು ರಾಜಕೀಯ ಅಧಿಕಾರಕ್ಕಾಗಿ ಪ್ರಜಾಪ್ರಭುತ್ವದ ಕಗ್ಗೊಲೆ ನಡೆಸುತ್ತಿದ್ದಾರೆ. ಚುನಾವಣಾ ಆಯೋಗವೂ ಇದಕ್ಕೆ ಕೈಜೋಡಿಸುತ್ತಿದೆ ಎಂಬುದಕ್ಕೆ ಇತ್ತೀಚೆಗೆ ನಡೆದ ಪಂಚರಾಜ್ಯದ ಚುನಾವಣೆಯಲ್ಲಿ ಉತ್ತರ ಪ್ರದೇಶದಲ್ಲಿ ಮತಯಂತ್ರದ ದುರುಪಯೋಗ ಆರೋಪ ಸಾಕ್ಷಿಯಾಗಿದೆ ಎಂದು ಎಸ್‌ಡಿಪಿಐ ರಾಜ್ಯ ಸಮಿತಿ ಸದಸ್ಯ ಎಂ. ಕೂಸಪ್ಪ ಆರೋಪಿಸಿದರು.
ಸೋಶಿಯಲ್ ಡೆಮಾಕ್ರಟಿಕ್ ಆಫ್ ಇಂಡಿಯಾ ಪುತ್ತೂರು ವಿಧಾನ ಸಭಾ ಕ್ಷೇತ್ರ ಮತ್ತು ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ಇಲ್ಲಿನ ಮನಿಷಾ ಸಭಾಂಗಣದಲ್ಲಿ ನಡೆದ ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ 126ನೇ ಜನ್ಮ ದಿನಾಚರಣೆ ‘ಸಾಮಾಜಿಕ ನ್ಯಾಯ ದಿನ’ ವನ್ನು ಉದ್ಘಾಟಿಸಿ ಮಾತನಾಡಿದರು.
ಮುಖ್ಯ ಭಾಷಣ ಮಾಡಿದ ಇಕ್ಬಾಲ್ ಬೆಳ್ಳಾರೆ, ಅಂಬೇಡ್ಕರ್ ಜನ್ಮದಿನಾಚರಣೆ ಕೇವಲ ಒಂದು ದಿನದ ಆಚರಣೆಗೆ ಸೀಮಿತವಲ್ಲ. ಇದೊಂದು ಶೋಷಿತ, ಬಡ, ನಿರ್ಗತಿಕ ಸಾಮಾಜಿಕ ನ್ಯಾಯದ ದಿನವಾಗಿದೆ. ದೇಶವನ್ನು 70 ವರ್ಷ ಆಳ್ವಿಕೆ ಮಾಡಿದವರು ಸಂವಿಧಾನವನ್ನು ಸಮರ್ಪಕವಾಗಿ ಜಾರಿಗೊಳಿಸದ ಕಾರಣ ಇಂದಿಗೂ ಶೋಷಿತ ಮತ್ತು ಬಡ ಸಮುದಾಯದ ಆರ್ಥಿಕ ಸ್ಥಿತಿ ಶೋಚನೀಯವಾಗಿದೆ. ಅಂಬೇಡ್ಕರ್ ಕನಸಿನಂತೆ ಇಲ್ಲಿನ ದಲಿತ ಮತ್ತು ಶೋಷಿತ ಸಮುದಾಯವು ರಾಜಕೀಯ ಶಕ್ತಿಯಾಗಿ ಹೊರಹೊಮ್ಮಬೇಕು ಎಂದರು.
ಎಸ್‌ಡಿಪಿಐ ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷ ಅಬ್ದುಲ್ ಹಮೀದ್ ಮೆಜೆಸ್ಟಿಕ್ ಅಧ್ಯಕ್ಷತೆ ವಹಿಸಿದ್ದರು. ಮುಖಂಡರಾದ ಕೆ.ಎಂ.ಸಿದ್ದೀಕ್, ಶಿವಪ್ಪ ಅಟ್ಟೊಳೆ, ಅಬೂಬಕ್ಕರ್ ರಿಜ್ವಾನ್, ಆನಂದ ಮಿತ್ತಬೈಲು, ಯಶೋದ ಆಲಂತಾಯ, ಸುಂದರಿ, ಬಾಬು ಸವಣೂರು. ಬಾತಿಶ್ ಬಡೆಕ್ಕೋಡಿ, ನವಾಜ್ ಕಲ್ಲರ್ಪೆ, ಅಶ್ರಫ್ ಬಾವು ಮತ್ತಿತರರು ಉಪಸ್ಥಿತರಿದ್ದರು.
ಇಬ್ರಾಹಿಂ ಸಾಗರ್ ಸ್ವಾಗತಿಸಿದರು, ಉಸ್ಮಾನ್ ನಿರೂಪಿಸಿದರು.