ಸಮಾಜದಲ್ಲಿ ರಚನಾತ್ಮಕ, ಸಕಾರಾತ್ಮಕ ಚಿಂತನೆಗಳು ಮೂಡಿ ಬರಬೇಕು: ಮುಹಮ್ಮದ್ ಕುಂಞಿ
ಮಂಗಳೂರು, ಎ.15: ಧರ್ಮಗಳ ಬಗ್ಗೆ ಅಧ್ಯಯನ ನಡೆಸದೆ, ಪೂರ್ವಾಗ್ರಹ ಪೀಡಿತರಾಗಿ ಸಂಶಯದಿಂದ ಇರುವುದರಿಂದಲೇ ನಮ್ಮ ಸಮಾಜದಲ್ಲಿಂದು ಕೆಡುಕುಗಳು ವ್ಯಾಪಕವಾಗಿ ಹರಡುತ್ತಿದೆ. ಧರ್ಮದ ಹೆಸರಿನಲ್ಲಿ ಅಧರ್ಮದ ಸಂದೇಶಗಳನ್ನು ಪ್ರಚುರಪಡಿಸಲಾಗುತ್ತಿದೆ. ಆದ್ದರಿಂದ ಸಮಾಜದಲ್ಲಿ ಎಲ್ಲಾ ಧರ್ಮಗಳ ಬಗ್ಗೆ ಅಧ್ಯಯನ ನಡೆಸಿ, ಸಂಶಯಗಳಿಂದ ಮುಕ್ತರಾಗಬೇಕಾದ ಆವಶ್ಯಕತೆ ಇದೆ ಎಂದು ಶಾಂತಿ ಪ್ರಕಾಶನದ ವ್ಯವಸ್ಥಾಪಕ ಹಾಗೂ ತೊಕ್ಕೊಟ್ಟು ಮಸ್ಜಿದುಲ್ ಹುದಾದ ಖತೀಬ್ ಮುಹಮ್ಮದ್ ಕುಂಞಿ ಹೇಳಿದರು.
ಅವರು ತೊಕ್ಕೊಟ್ಟು ಒಳಪೇಟೆಯಲ್ಲಿರುವ ಅಂಬೇಡ್ಕರ್ ಮೈದಾನದಲ್ಲಿ ಉಳ್ಳಾಲ ಜಮಾಅತೆ ಇಸ್ಲಾಮೀ ಹಿಂದ್ ಮೂರು ದಿನಗಳ ಕಾಲ ಆಯೋಜಿಸಿರುವ ಸಾರ್ವಜನಿಕ ಕುರ್ ಆನ್ ಪ್ರವಚನದಲ್ಲಿ ‘ಕೆಡುಕು ಮುಕ್ತ ಸಮಾಜ’ ಎಂಬ ವಿಷಯದಲ್ಲಿ ಮಾತನಾಡುತ್ತಿದ್ದರು.
ಮುಖ್ಯ ಅತಿಥಿಯಾಗಿ ಆಗಮಿಸಿ ಮಾತನಾಡಿದ ದೇರಳಕಟ್ಟೆ ವಿದ್ಯಾರತ್ನ ಆಂಗ್ಲ ಮಾಧ್ಯಮ ಶಾಲೆಯ ನಿರ್ದೇಶಕ ರವೀಂದ್ರ ಶೆಟ್ಟಿ, ಎಲ್ಲಾ ಧರ್ಮಗಳು ಸಹೋದರತೆ, ಸಾಮರಸ್ಯ, ಪ್ರೀತಿಯ ಸಂದೇಶವನ್ನು ಮಾತ್ರ ಸಾರುತ್ತದೆ. ಇಂದಿನ ಕಾಲಘಟ್ಟದಲ್ಲಿ ಪರಸ್ಪರ ಧರ್ಮವನ್ನು ತಿಳಿದುಕೊಂಡು, ಇತರರನ್ನು ಗೌರವಿಸಿ ಮುನ್ನಡೆಯಬೇಕಾದ ಆವಶ್ಯಕತೆ ಇದೆ ಎಂದರು.
ಕಾರ್ಯಕ್ರಮದಲ್ಲಿ ಜಿಪಂ ಮಾಜಿ ಸದಸ್ಯ ಅಝೀಝ್ ಮಲಾರ್ ಅನಿಸಿಕೆ ವ್ಯಕ್ತಪಡಿಸಿದರು. ಸೋಲಿಡಾರಿಟಿ ಯೂತ್ ಮೂಮೆಂಟ್ ನ ಶರೀಫ್ ಉಳ್ಳಾಲ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಝಮ್ಮಿಲ್ ಅಹ್ಮದ್ ಕಾರ್ಯಕ್ರಮ ನಿರೂಪಿದರು.