ಮುಂದಿನ ಚುನಾವಣೆಯಲ್ಲಿ ಸಿದ್ದರಾಮಯ್ಯಗೆ ಹೆಚ್ಚಿನ ಜವಾಬ್ದಾರಿ: ವೀರಪ್ಪ ಮೊಯ್ಲಿ
ಮಂಗಳೂರು, ಎ.15: ಮುಖ್ಯಮಂತ್ರಿ ಹಾಗೂ ಹಿರಿಯ ನಾಯಕರೂ ಆಗಿರುವ ಸಿದ್ದರಾಮಯ್ಯನವರು ಮುಂಬರುವ ಚುನಾವಣೆಯಲ್ಲಿ ಹೆಚ್ಚಿನ ಜವಾಬ್ದಾರಿಯನ್ನು ನಿಭಾಯಿಸಬೇಕಾಗಿದೆ ಎಂದು ಕೇಂದ್ರದ ಮಾಜಿ ಸಚಿ ವೀರಪ್ಪ ಮೊಯ್ಲಿ ಅಭಿಪ್ರಾಯಿಸಿದ್ದಾರೆ.
ನಗರದ ಸರ್ಕ್ಯೂಟ್ ಹೌಸ್‌ನಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಸಾಮಾಜಿಕ ನ್ಯಾಯ ಹಾಗೂ ಅಭಿವೃದ್ಧಿ ವಿಚಾರದಲ್ಲಿ ರಾಜ್ಯ ಸರಕಾರ ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿದೆ ಎಂದವರು ಹೇಳಿದರು.
ಮುಖ್ಯಮಂತ್ರಿ ಆಯ್ಕೆಯನ್ನು ನಿರ್ದಿಷ್ಟ ಜಾತಿಗೆ ಸೀಮಿತಗೊಳಿಸಿ ಚರ್ಚಿಸುವುದು ಸರಿಯಲ್ಲ ಎಂದು ಹೇಳಿದ ಅವರು, ಪ್ರಗತಿಪರ ಮನೋಭೂಮಿಕೆಯ ಹಾಗೂ ಪಕ್ಷದ ಸಿದ್ಧಾಂತವನ್ನು ಶೇ. 100 ರಷ್ಟು ಅಳವಡಿಸಿರುವ ವ್ಯಕ್ತಿ ಮುಖ್ಯಮಂತ್ರಿಯಾಗುವುದು ಮುಖ್ಯ. ಕಾಂಗ್ರೆಸ್ ಜಾತ್ಯತೀತ ಪಕ್ಷ. ಕಾಂಗ್ರೆಸ್ ಒಡೆಯುವ ಉದ್ದೇಶದಿಂದ ಬಿಜೆಪಿ ದಲಿತ ಮುಖ್ಯಮಂತ್ರಿಯ ಚರ್ಚೆಯನ್ನು ಪ್ರಸ್ತಾಪಿಸಿದೆ ಎಂದು ದಲಿತ ಮುಖ್ಯಮಂತ್ರಿ ಕುರಿತಾದ ಚರ್ಚೆಗೆ ಪ್ರತಿಕ್ರಿಯೆ ನೀಡಿದರು.
ಎಸ್.ಎಂ.ಕೃಷ್ಣ ಪಕ್ಷ ಬಿಟ್ಟಿರುವುದರಿಂದ ಪಕ್ಷಕ್ಕೆ ಹಾನಿಯಾಗಿಲ್ಲ ಎಂದು ಹೇಳಿದ ವೀರಪ್ಪ ಮೊಯ್ಲಿ, ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಹೈಕಮಾಂಡ್‌ಗೆ ಬಿಟ್ಟ ವಿಚಾರ ಎಂದರು.
ಕೆಲ ರಾಜ್ಯಗಳಲ್ಲಿ ಚುನಾವಣೆ ಸಂದರ್ಭ ಮತ ಎಣಿಕೆ ಯಂತ್ರದ ಲೋಪದ ಕುರಿತು ಪ್ರತಿಪಕ್ಷಗಳು ಮುಂದಿಟ್ಟಿರುವ ಅನುಮಾನಗಳನ್ನು ಇತ್ಯರ್ಥಪಡಿಸುವಂತೆ ಕಾಂಗ್ರೆಸ್ ನಿಯೋಗ ರಾಷ್ಟ್ರಪತಿಗೆ ಮನವಿ ಸಲ್ಲಿಸಿದೆ. ಈ ಕುರಿತು ಸಂಶಯ ನಿವಾರಣೆಗೆ ಕೇಂದ್ರ ಸರ್ಕಾರ ಹಾಗೂ ಚುನಾವಣಾ ಆಯೋಗ ಕ್ರಮ ಕೈಗೊಳ್ಳಬೇಕಿದೆ ಎಂದು ಹೇಳಿದರು.
2009 ರಲ್ಲಿ ನಾವು ಮತ ಎಣಿಕೆ ಯಂತ್ರದ ಮೂಲಕ ಚುನಾವಣೆ ನಡೆಸಿದಾಗ ಕೆಲ ರಾಜ್ಯಗಳಿಂದ ಹೊಸ ವ್ಯವಸ್ಥೆ ಬಗ್ಗೆ ದೂರುಗಳು ಬಂದಿತ್ತು. ಆ ಸಂದರ್ಭ ಸರಕಾರ ತಜ್ಞರ ಸಮಿತಿಯೊಂದನ್ನು ನೇಮಿಸಿ ಜನರ ಸಂಶಯ ನಿವಾರಿಸಿತ್ತು ಎಂದವರು ಉಲ್ಲೇಖಿಸಿದರು.
ಕೆಪಿಸಿಸಿ ಕಾರ್ಮಿಕ ಘಟಕದ ಕಾರ್ಯದರ್ಶಿ ಹಯಾತುಲ್ಲಾ ಕಾಮಿಲ್, ಮುಖಂಡರಾದ ಕೆ. ತೋಜೋಮಯ, ಅಶೋಕ್ ಕುಮಾರ್ ಡಿ.ಕೆ., ಪ್ರಭಾಕರ ಶ್ರೀಯಾನ್ ಉಪಸ್ಥಿತರಿದ್ದರು.