ಎಸ್‌ಐಒನಿಂದ ‘ಚಿಣ್ಣರ ನಡಿಗೆ’ ಜಲ ಜಾಗೃತಿ
ಮಂಗಳೂರು, ಎ.15: ಸ್ಟುಡೆಂಟ್ಸ್ ಇಸ್ಲಾಮಿಕ್ ಆರ್ಗನೈಸೇಶನ್ ಆಫ್ ಇಂಡಿಯಾ(ಎಸ್‌ಐಒ) ಜಿಲ್ಲಾ ಘಟಕದ ವತಿಯಿಂದ ಜನ ಜಾಗೃತಿಗಾಗಿ ಚಿಣ್ಣರ ನಡಿಗೆ ಇಂದುನಗರದ ಮಿನಿ ವಿಧಾನಸೌಧದಿಂದ ದ.ಕ. ಜಿಲ್ಲಾಧಿಕಾರಿ ಕಚೇರಿವರೆಗೆ ನಡೆಯಿತು.
ನೀರಿನ ಕೊಡಪಾನವನ್ನು ಹಸ್ತಾಂತರಿಸುವ ಮೂಲಕ ಉದ್ಫಾಟಿಸಿದ ಎಸ್.ಐ.ಓ. ಮಂಗಳೂರು ನಗರ ಶಾಖೆಯ ಅಧ್ಯಕ್ಷ ಮುಹಮ್ಮದ್ ಮುಬೀನ್ , ಜಲ ಜಾಗೃತಿಗಾಗಿ ಚಿಣ್ಣರ ನಡಿಗೆಯ ಕಾರ್ಯಕ್ರಮ ಜನರಲ್ಲಿ ಅರಿವು ಮೂಡಿಸು ನಿಟ್ಟಿನಲ್ಲಿ ಆಯೋಜಿಸಲಾಗಿದೆ ಎಂದರು.
ನೀರು ಉಳಿಸುವ ಕಾರ್ಯವು ಪ್ರತಿಯೊಬ್ಬ ನಾಗರಿಕನ ಕರ್ತವ್ಯ ಎಂದು ಎಲ್ಲರೂ ಮನಗಂಡರೆ ಇಂದು ನೀರಿನ ಸಮಸ್ಯೆ ಎದುರಾಗುತ್ತಿರಲಿಲ್ಲ ಎಂದು ಅವರು ಹೇಳಿದರು.
ಜಿಲ್ಲಾಧ್ಯಕ್ಷ ತಲ್ಹಾ ಇಸ್ಮಾಯಿಲ್, ಜಲಜಾಗೃತಿಯನ್ನು ಹಲವು ಹಂತಗಳಲ್ಲಿ ನಡೆಸುವ ಅವಶ್ಯಕತೆ ಇದೆ. ಪ್ರಥಮ ಹಂತವಾಗಿ ನಾವು ಮನೆ ಮತ್ತು ಶಾಲೆಗಳನ್ನು ಆಯ್ಕೆ ಮಾಡಿಕೊಂಡು ನೀರು ಪೋಲು ಮಾಡುವುದನ್ನು ತಡೆಯಲು ವಿದ್ಯಾರ್ಥಿಗಳು ಮತ್ತು ಹೆತ್ತವರನ್ನು ಪ್ರೇರೇಪಿಸಬೇಕು. ಕಳೆದ ವರ್ಷ ನೀರಿನ ಸಮಸ್ಯೆಯಿಂದಾಗಿ ಶಾಲಾ-ಕಾಲೇಜುಗಳು ಮುಚ್ಚಬೇಕಾಯಿತು. ಈ ವರ್ಷವು ಪುನಃ ನೀರಿನ ಸಮಸ್ಯೆ ಕಾಡುತ್ತಿರುವುದು ಜಿಲ್ಲಾ ಆಡಳಿತದ ಬೇಜವಾಬ್ದಾರಿತನ ಆಗಿದೆ ಎಂದರು.
ಸನ್ಮಾನ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಹುದ್ನಾನ್, ಮುಂಝೀರ್, ಮುಬಾರಿಶ್, ಅಬ್ದುಲ್ ಬಾಸಿತ್ ಉಪ್ಪಿನಂಗಡಿ ಮೊದಲಾದವರು ಉಪಸ್ಥಿತರಿದ್ದರು.