×
Ad

ತಲಪಾಡಿ ಟೋಲ್ ಸಿಬ್ಬಂದಿಗಳ ದುರ್ವರ್ತನೆ : ಯೂತ್ ಕಾಂಗ್ರೆಸ್ ನಿಂದ ಜಿಲ್ಲಾಧಿಕಾರಿಗೆ ದೂರು

Update: 2017-04-15 19:00 IST

ಮಂಜೇಶ್ವರ,ಎ.15: ತಲಪಾಡಿಯ ಟೋಲ್‌ನಲ್ಲಿ ಕಾಮಗಾರಿ ಮುಗಿಯದೇ ಸುಂಕ ವಸೂಲಾತಿ ಪ್ರಾರಂಭಗೊಂಡಿದ್ದು, ತಲಪಾಡಿ ಟೋಲ್ ಪರಿಸರದಲ್ಲಿ ಇಲ್ಲಿನ ಸಿಬ್ಬಂದಿ ನಿತ್ಯವೂ ಪ್ರಯಾಣಿಕರಿಗೆ ಕಿರುಕುಳ ನೀಡುತ್ತಿದ್ದಾರೆ. ವೃದ್ಧ ಚಾಲಕರಿಗೆ ಹಾಗೂ ಯುವಕನೋರ್ವನನ್ನು ಅಟ್ಟಾಡಿಸಿ ಹಲ್ಲೆಗೈದ ಘಟನೆಯೂ ನಡೆದಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾದಿಕಾರಿ ಕೂಡಲೇ ಮಧ್ಯಸ್ಥಿಕೆ ವಹಿಸಿ, ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಂತೆ ಯೂತ್ ಕಾಂಗ್ರೆಸ್ ಮಂಜೇಶ್ವರ ವಿಧಾನಸಭಾ ಕ್ಷೇತ್ರ ಸಮಿತಿ ಜಿಲ್ಲಾಧಿಕಾರಿಗೆ ಮನವಿ ನೀಡಿದೆ.

ಟೋಲ್ ಅಸುಪಾಸಿನ ಸ್ಥಳೀಯರಿಗೆ ಟೋಲ್ ವಿನಾಯಿತಿಯ ತೀರ್ಮಾನವಿದ್ದು, ಆದರೆ ಗುರುತು ಚೀಟಿ ತೋರಿಸಿದರೂ ಇಲ್ಲಿನ ಸಿಬ್ಬಂದಿ ಬಲವಂತವಾಗಿ ಸ್ಥಳೀಯರಿಂದ ಟೋಲ್ ವಸೂಲಾತಿ ಮಾಡುತ್ತಿದ್ದಾರೆ. ವಾಹನದ ಆರ್ ಸಿ ತೋರಿಸುವಂತೆ ಕಿರುಕುಳ ನೀಡುತ್ತಿದ್ದಾರೆ. ಜಿಲ್ಲೆಯ ಮಿಕ್ಕುಳಿದ ಟೋಲ್ ಗಳಲ್ಲಿ ಸ್ಥಳೀಯರಿಗೆ ಪೂರ್ಣ ವಿನಾಯಿತಿ ನೀಡುತ್ತಿದ್ದರೂ ತಲಪಾಡಿ ಟೋಲ್ ನಲ್ಲಿ ಮಾತ್ರ ನಿರಂತರ ಸಮಸ್ಯೆಗಳು ಉಂಟಾಗುತ್ತಿದೆಯೆಂದು ಯೂತ್ ಕಾಂಗ್ರೆಸ್ ಆರೋಪಿಸಿದೆ.

ವಿಮಾನ ವಿಲ್ದಾಣದಿಂದ ಕೇರಳಕ್ಕೆ ತೆರಳುವ ಪ್ರಯಾಣಿಕರಿಂದ ಲಗೇಜ್‌ ಶುಲ್ಕವನ್ನು ಕೂಡಾ ವಸೂಲು ಮಾಡುತ್ತಿದ್ದಾರೆ. ಪತ್ರಿಕಾ ವರದಿಗಾರರನ್ನು ಬೆದರಿಸುವ ಇಲ್ಲಿನ ಸಿಬ್ಬಂದಿ ಜನಸಾಮಾನ್ಯರ ಜೊತೆ ಅತ್ಯಂತ ಕೆಟ್ಟದಾಗಿ ವರ್ತಿಸುತ್ತಿದ್ದಾರೆ ಎಂದು ಯೂತ್ ಕಾಂಗ್ರೆಸ್ ಸಮಿತಿ ಜಿಲ್ಲಾಧಿಕಾರಿಗೆ ಸಲ್ಲಿಸಿದ ಮನವಿಯಲ್ಲಿ ದೂರಲಾಗಿದೆ.

ಈ ವೇಳೆ ದ.ಕ.ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ಆಧ್ಯಕ್ಷ ಮಿಥುನ್ ರೈ, ಕಾಸರಗೋಡು ಜಿಲ್ಲಾ ಪಂಚಾಯತ್ ಅಭಿವೃದ್ಧಿ ಸ್ಥಾಯಿ ಸಮಿತಿಯ ಅಧ್ಯಕ್ಷ ಅರ್ಷಾದ್ ವರ್ಕಾಡಿ, ಯೂತ್ ಕಾಂಗ್ರೆಸ್ ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ನಾಸಿರ್ ಮೊಗ್ರಾಲ್, ಪದಾಧಿಕಾರಿಗಳಾದ ಶರೀಫ್ ಅರಿಬೈಲು, ಇಕ್ಬಾಲ್ ಕಳಿಯೂರು, ನವೀನ್ ರೈ ಮಂಗಲ್ಪಾಡಿ, ರಫೀಕ್ ಭದ್ರಾವತಿ ಮುಂತಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News