ಸೇನೆಯು ನನ್ನನ್ನು ಜೀಪಿಗೆ ಕಟ್ಟಿ 9 ಗ್ರಾಮಗಳಲ್ಲಿ ಪರೇಡ್ ಮಾಡಿಸಿತ್ತು : ಅಹ್ಮದ್ ದಾರ್

Update: 2017-04-15 13:53 GMT

ಬದ್ಗಾಮ್,ಎ.15: ಸಿಆರ್‌ಪಿಎಫ್ ಸಿಬ್ಬಂದಿಗಳ ಮೇಲೆ ಕಾಶ್ಮೀರಿ ಯುವಕರು ಹಲ್ಲೆ ನಡೆಸುತ್ತಿದ್ದ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದ ಎರಡು ದಿನಗಳ ಬಳಿಕ ಶುಕ್ರವಾರ ಕಲ್ಲುತೂರಾಟಗಾರರ ವಿರುದ್ಧ ಗುರಾಣಿಯಾಗಿ ಯುವಕನೋರ್ವನನ್ನು ಸೇನಾ ಜೀಪಿನ ಬಾನೆಟ್‌ಗೆ ಕಟ್ಟಿ ಸಾಗಿಸುತ್ತಿದ್ದ ವೀಡಿಯೊ ವೈರಲ್ ಆಗಿತ್ತು.

ಜೀಪನ್ನು ಯೋಧರಿದ್ದ ಟ್ರಕ್ ಹಿಂಬಾಲಿಸುತ್ತಿದ್ದು, ಇದು ಕಲ್ಲುತೂರಾಟ ನಡೆಸುವ ಪ್ರತಿಭಟನಾ ಕಾರರಿಗೆ ಎಚ್ಚರಿಕೆಯ ಗಂಟೆಯಾಗಿತ್ತು. ಈ ವೀಡಿಯೊ ಕುರಿತಂತೆ ಸಾರ್ವಜನಿಕರಲ್ಲಿ ಆಕ್ರೋಶ ಹೆಚ್ಚುತ್ತಿದ್ದಂತೆ ಎಚ್ಚೆತ್ತುಕೊಂಡ ಮುಖ್ಯಮಂತ್ರಿ ಮೆಹಬೂಬ ಮುಫ್ತಿ ಅವರು ಈ ಬಗ್ಗೆ ಪೊಲೀಸ್ ವರದಿಯನ್ನು ಕೇಳಿದ್ದಾರೆ. ವೀಡಿಯೊದ ಸತ್ಯಾಸತ್ಯತೆಯನ್ನು ತಾನು ಪರಿಶೀಲಿಸುತ್ತಿರುವುದಾಗಿ ಸೇನೆಯು ತಿಳಿಸಿದೆ.

ಅಂದ ಹಾಗೆ ಅಂದು ಜೀಪಿನ ಬಾನೆಟ್‌ಗೆ ಕಟ್ಟಲ್ಪಟ್ಟು ಸೇನೆಯ ಪಾಲಿಗೆ ಗುರಾಣಿಯಾಗಿದ್ದ ಯುವಕ ಫಾರೂಕ್ ಅಹ್ಮದ್ ದಾರ್(26) ಈ ಬಗ್ಗೆ ಹೇಳುವುದನ್ನು ಕೇಳಿ.‘‘ನಾನು ಕಲ್ಲು ತೂರಾಟಗಾರನಲ್ಲ. ನನ್ನ ಜೀವನದಲ್ಲೆಂದೂ ನಾನು ಕಲ್ಲುಗಳನ್ನು ತೂರಿಲ್ಲ. ನಾನು ಶಾಲುಗಳ ಮೇಲೆ ಕಸೂತಿ ಮಾಡುವ ಕೆಲಸ ನಿರ್ವಹಿಸಿ ಹೊಟ್ಟೆ ತುಂಬಿಕೊಳ್ಳುತ್ತಿದ್ದೇನೆ,ಜೊತೆಗೆ ಅಲ್ಪಸ್ವಲ್ಪ ಬಡಿಗತನ ಗೊತ್ತು. ಇದು ನನ್ನ ಕೆಲಸ ’’ಎಂದು ಆತ ಬಡ್ಗಾಮ್ ಜಿಲ್ಲೆಯ ಚಿಲ್‌ನಲ್ಲಿಯ ತನ್ನ ಮನೆಯಲ್ಲಿ ಸುದ್ದಿಗಾರರಿಗೆ ತಿಳಿಸಿದ. ಆತನ ಎಡಗೈ ಬಾತುಕೊಂಡಿದ್ದು, ಅದಕ್ಕೆ ಬ್ಯಾಂಡೇಜ್ ಸುತ್ತಲಾಗಿತ್ತು. ಆತನನ್ನು ಎ.9ರಂದು ಬೆಳಿಗ್ಗೆ 11 ಗಂಟೆಯಿಂದ ಜೀಪಿಗೆ ಕಟ್ಟಿ ನಾಲ್ಕು ಗಂಟೆಗಳ ಕಾಲ ಒಂಭತ್ತು ಗ್ರಾಮಗಳಲ್ಲಿ ಸುಮಾರು 25 ಕಿ.ಮೀ.ಸುತ್ತಾಡಿಸಲಾಗಿತ್ತು.

ಈ ಘಟನೆಯಿಂದ ತೀವ್ರ ಆಘಾತಕ್ಕೊಳಗಾಗಿರುವ ದಾರ್ ‘‘ನಾವು ಬಡವರು..ನಾವೇನು ದೂರು ಸಲ್ಲಿಸುವುದು? 75 ವರ್ಷದ ಅಸ್ತಮಾ ಪೀಡಿತ ತಾಯಿಗೆ ನಾನೊಬ್ಬನೇ ಆಸರೆಯಾಗಿದ್ದೇನೆ. ನಾನು ಭಯಗೊಂಡಿದ್ದೇನೆ. ನನಗೇನೂ ಆಗಬಹುದು. ನಾನು ಕಲ್ಲುತೂರಾಟಗಾರನಲ್ಲ ’’ಎಂದು ಅಳಲು ತೋಡಿಕೊಂಡ. ಮಗನನ್ನು ಬೆಂಬಲಿಸಿದ ಆತನ ತಾಯಿ ಫಾಝೀ,‘‘ಯಾವುದೇ ವಿಚಾರಣೆ ನಮಗೆ ಬೇಕಿಲ್ಲ. ನಾವು ಬಡವರು. ಅವನನ್ನು ಕಳೆದುಕೊಳ್ಳಲು ನಾನು ಬಯಸುವುದಿಲ್ಲ. ವೃದ್ಧಾಪ್ಯದಲ್ಲಿ ಅವನೊಬ್ಬನೇ ನನಗೆ ಆಸರೆಯಾಗಿದ್ದಾನೆ ’’ಎಂದು ಹೇಳಿದರು.

ದಾರ್ ಹೇಳುವಂತೆ ಎ.9ರಂದು ಶ್ರೀನಗರ ಲೋಕಸಭಾ ಉಪಚುನಾವಣೆಯ ದಿನ ಆತ ಇತ್ತೀಚಿಗೆ ನಿಧನನಾಗಿದ್ದ ತನ್ನ ಸಂಬಂಧಿಯ ನಾಲ್ಕನೇ ದಿನದ ಕ್ರಿಯಾಕರ್ಮಗಳಲ್ಲಿ ಭಾಗವಹಿಸಲೆಂದು ಬೈಕ್‌ನಲ್ಲಿ ಮನೆಯಿಂದ 17 ಕಿ.ಮೀ.ದೂರದ ಗಾಂಪೋರಾಕ್ಕೆ ಪ್ರಯಾಣಿಸುತ್ತಿದ್ದ. ಆತನ ಸೋದರ ಗುಲಾಂ ಕಾದಿರ್ ಮತ್ತು ನೆರೆಯ ನಿವಾಸಿ, ಪಂಚಾಯತ್ ಸದಸ್ಯ ಹಿಲಾಲ್ ಅಹ್ಮದ್ ಮಾಗ್ರೇ ಇನ್ನೊಂದು ಬೈಕಿನಲ್ಲಿದ್ದರು.

ಉತ್ಲಿಗಾಮ್‌ನಲ್ಲಿ ಚುನಾವಣೆಯ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ಮಹಿಳೆಯರ ಗುಂಪೊಂದನ್ನು ಕಂಡು ಅವರು ಬೈಕ್‌ಗಳನ್ನು ನಿಲ್ಲಿಸಿದ್ದರು ಮತ್ತು ಅದು ಅವರು ಮಾಡಿದ್ದ ಅತಿ ದೊಡ್ಡ ತಪ್ಪಾಗಿತ್ತು. ದಾರ್ ಬೈಕ್‌ನಿಂದ ಕೆಳಕ್ಕಿಳಿಯುವ ಮುನ್ನವೇ ಧಾವಿಸಿ ಬಂದ ಯೋಧರು ಆತನನ್ನು ಥಳಿಸಿ,ಜೀಪಿಗೆ ಕಟ್ಟಿ ಕರೆದೊಯ್ದಿದ್ದರು.

ಮಹಿಳೆಯರು ಆತನನ್ನು ರಕ್ಷಿಸಲು ಪ್ರಯತ್ನಿಸಿದ್ದರಾದರೂ ಯೋಧರು ಗಾಳಿಯಲ್ಲಿ ಗುಂಡೊಂದನ್ನು ಹಾರಿಸಿದಾಗ ಅವರೆಲ್ಲ ದಿಕ್ಕಾಪಾಲಾಗಿ ಓಡಿದ್ದರು. ಜೀಪಿಗೆ ಕಟ್ಟಲಾಗಿದ್ದ ದಾರ್‌ನ ಎದೆಯ ಮೇಲೆ ಬಿಳಿಯ ಕಾಗದವೊಂದನ್ನು ಸಿಕ್ಕಿಸಲಾಗಿದ್ದು ಅದರಲ್ಲಿ ತನ್ನ ಹೆಸರು ಮಾತ್ರ ಆತನಿಗೆ ಕಾಣುತ್ತಿತ್ತು.

ದಾರಿಯುದ್ದಕ್ಕೂ ಜೀಪಿನಲ್ಲಿದ್ದ ಯೋಧರು,‘ಬನ್ನಿ,ನಿಮ್ಮದೇ ಮನುಷ್ಯನ ಮೇಲೆ ಕಲ್ಲುತೂರಾಟ ನಡೆಸಿ ’ಎಂದು ಕೂಗುತ್ತಿದ್ದರು. ಜನರು ಹೆದರಿ ಓಡುತ್ತಿದ್ದರು. ಒಂದೇ ಒಂದು ಶಬ್ದವನ್ನು ಉಸುರಿದರೆ ಗುಂಡು ಹೊಡೆದು ಕೊಲ್ಲುವುದಾಗಿ ದಾರ್‌ಗೆ ಬೆದರಿಕೆಯೊಡ್ಡಲಾಗಿತ್ತು.

ಒಂಭತ್ತು ಗ್ರಾಮಗಳ ಮೂಲಕ ಸುಮಾರು 25 ಕಿ.ಮೀ.ಸಾಗಿದ ನಂತರ ಸಂಜೆ ನಾಲ್ಕು ಗಂಟೆಗೆ ಹರ್ದ್‌ಪಂಝೂವಿನಲ್ಲಿರುವ ಸಿಆರ್‌ಪಿಎಫ್ ಶಿಬಿರದ ಎದುರು ಜೀಪ್ ನಿಂತಿತ್ತು. ಅಲ್ಲಿಂದ ಆತನನ್ನು ಸೇನೆಯ ರಕ್ಷಕ್ ವಾಹನದಲ್ಲಿ ತುಂಬಿ ರೈಯಾರಿಯಲ್ಲಿನ ರಾಷ್ಟ್ರೀಯ ರೈಫಲ್ಸ್‌ನ ಶಿಬಿರಕ್ಕೆ ಕರೆದೊಯ್ಯಲಾಗಿತ್ತು.

ಎರಡೂ ಶಿಬಿರಗಳಲ್ಲಿ ತನ್ನ ಮೇಲೇ ಯಾವದೇ ಹಲ್ಲೆ ನಡೆಯಲಿಲ್ಲ. ರಾಷ್ಟ್ರೀಯ ರೈಫಲ್ಸ್ ಶಿಬಿರದಲ್ಲಿ ತನ್ನನ್ನು ಮೂರು ಗಂಟೆಗಳ ಕಾಲ ಇರಿಸಿಕೊಂಡಿದ್ದು, ಒಂದು ಕಪ್ ಚಹಾ ನೀಡಲಾಗಿತ್ತು. ರಾತ್ರಿ 7:30ರ ಸುಮಾರಿಗೆ ಅಲ್ಲಿಗೆ ಬಂದಿದ್ದ ತನ್ನ ಗ್ರಾಮದ ಸರಪಂಚ ಬಶೀರ್ ಅಹ್ಮದ್ ಮಾಗ್ರೇಗೆ ತನ್ನನ್ನು ಹಸ್ತಾಂತರಿಸಲಾಗಿತ್ತು ಎಂದು ದಾರ್ ತಿಳಿಸಿದ.

ಉತ್ಲಿಗಾಮ್‌ನಲ್ಲಿ ದಾರ್‌ನನ್ನು ಜೀಪಿಗೆ ಕಟ್ಟಿ ಸಾಗಿಸುತ್ತಿದ್ದಾಗ ನಾವಿಬ್ಬರೂ ಅಸಹಾಯಕರಾಗಿದ್ದೆವು. ರೈಯಾರಿಗೆ ಸಮೀಪದ ಅರಿಝಲ್ ಗ್ರಾಮದಲ್ಲಿಯ ನನ್ನ ಸ್ನೇಹಿತರನ್ನು ಸಂಪರ್ಕಿಸಿದಾಗ ದಾರ್‌ನನ್ನು ರಾಷ್ಟ್ರೀಯ ರೈಫಲ್ಸ್ ಶಿಬಿರಕ್ಕೆ ತಂದಿರುವುದನ್ನು ಅವರು ದೃಢಪಡಿಸಿದ್ದರು. ಜವಾಬ್ದಾರಿಯುತ ವ್ಯಕ್ತಿಗೆ ಆತನನ್ನು ಒಪ್ಪಿಸುವುದಾಗಿ ಅಲ್ಲಿಯ ಮೇಜರ್ ತಿಳಿಸಿದ್ದಾಗಿ ಅವರು ಮಾಹಿತಿ ನೀಡಿದ್ದರು. ತಕ್ಷಣವೇ ಬಶೀರ್ ಅಹ್ಮದ್ ಮಾಗ್ರೇಗೆ ಕರೆ ಮಾಡಿ ಅಲ್ಲಿಗೆ ತೆರಳುವಂತೆ ಸೂಚಿಸಿದ್ದೆ ಎಂದು ಹಿಲಾಲ್ ಅಹ್ಮದ್ ಮಾಗ್ರೇ ತಿಳಿಸಿದರು.

 ದಾರ್ ಅಂದು ರಾತ್ರಿ ನಿದ್ರೆಯಿಲ್ಲದೆ ಕಳೆದಿದ್ದ. ಮರುದಿನ ಕಣಿವೆಯಲ್ಲಿ ಬಂದ್ ಆಚರಣೆಯಲ್ಲಿದ್ದು, ಆತನನ್ನು ಸಮೀಪದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಗಿತ್ತು.

ಎಲ್ಲ ವಿವರಗಳು ಮತ್ತು ಈ ವೀಡಿಯೊವನ್ನು ಚಿತ್ರೀಕರಿಸಲಾದ ಸಂದರ್ಭಗಳ ಕುರಿತು ತನಿಖೆಯ ಅಗತ್ಯವಿದೆ. ಈವರೆಗೆ ಯಾವುದೇ ದೂರು ದಾಖಲಾಗಿಲ್ಲ . ಯಾರಾದರೂ ದೂರು ನೀಡಿದರೆ ಅದನ್ನು ತನಿಖೆಗಾಗಿ ಸೇನೆಗೆ ಒಪ್ಪಿಸುತ್ತೇವೆ ಎಂದು ಡಿಜಿಪಿ ಎಸ್.ಪಿ.ವೈದ್ ತಿಳಿಸಿದರು.

ತನ್ಮಧ್ಯೆ ಸಿಆರ್‌ಪಿಎಫ್ ಸಿಬ್ಬಂದಿಗಳನ್ನು ಥಳಿಸಿದ ಆರೋಪದಲ್ಲಿ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.ಈ ಎರಡೂ ವೀಡಿಯೊಗಳ ಬಗ್ಗೆ ತಾನು ಪರಿಶೀಲಿಸುವುದಾಗಿ ಕೋಲ್ಕತದಲ್ಲಿ ಕೇಂದ್ರ ಗೃಹಸಚಿವ ರಾಜನಾಥ ಸಿಂಗ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News