ಕಾಪು,ಪಡುಬಿದ್ರಿ ಬೀಚ್ ಅಭಿವೃದ್ಧಿಗೆ ಯೋಜನೆ
ಪಡುಬಿದ್ರಿ,ಎ.15: ಕೇಂದ್ರ ಹಾಗೂ ರಾಜ್ಯ ಸರಕಾರಗಳ ಪ್ರವಾಸೋದ್ಯಮ ಇಲಾಖೆಯ ಅನುದಾನ ಕ್ರೂಡೀಕರಿಸಿ ಕಾಪು ಹಾಗೂ ಪಡುಬಿದ್ರಿ ಬೀಚ್ ಅಭಿವೃದ್ಧಿ ಪಡಿಸಲು ಯೋಜನೆ ರೂಪಿಸಲಾಗಿದೆ ಎಂದು ಕಾಪು ಶಾಸಕ ವಿನಯಕುಮಾರ್ ಸೊರಕೆ ಹೇಳಿದರು.
ಶುಕ್ರವಾರ ಕಾಪು ಬೀಚ್ ಅಭಿವೃದ್ಧಿ ಸಮಿತಿಯ ವತಿಯಿಂದ ಮೂರು ದಿನಗಳ ಕಾಲಕಾಪು ಬೀಚ್ ನಲ್ಲಿ ನಡೆಯಲಿರುವ ಸಮ್ಮರ್ ಫೆಸ್ಟ್‌ಗೆ ಚಾಲನೆ ನೀಡಿ ಮಾತನಾಡಿದ ಅವರು, ಕಾಪು ತಾಲೂಕಿನ ಎರಡು ಬೀಚ್‌ಗಳು ಸಾಕಷ್ಟು ಅಭಿವೃದ್ಧಿ ಕಂಡಿದೆ.ಈ ಎರಡು ಬೀಚ್‌ಗಳಲ್ಲಿ ಇನ್ನಷ್ಟು ಮೂಲಸೌಕರ್ಯಗಳನ್ನು ಕಲ್ಪಿಸಿ ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ತಿಳಿಸಿದರು.
ಅಕ್ಬೋಬರ್‌ನಲ್ಲಿ ಬೀಚ್ ಉತ್ಸವ: ಕಾಪು ಬೀಚ್ ಸಾಕಷ್ಟು ಪ್ರವಾಸಿಗಳ ಆಕರ್ಷಣೆಯ ಕೇಂದ್ರವಾಗಿದೆ. ಇನ್ನಷ್ಟು ಪ್ರವಾಸಿಗರನ್ನು ಸೆಳೆಯುವ ಉದ್ದೇಶದಿಂದ ಕಾಪು ಬೀಚ್‌ನಲ್ಲಿ ಅಕ್ಟೋಬರ್ ತಿಂಗಳಲ್ಲಿ ಬೀಚ್ ಉತ್ಸವವನ್ನು ಆಯೋಜಿಸಲಾಗುವುದು. ಕರಾವಳಿಯ ಪ್ರಮುಖ ಕ್ರೀಡೆಗಳು, ತಿಂಡಿ ತಿನಿಸುಗಳ ಮೂಲಕ ಆಹಾರೋತ್ಸವ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದು ಸೊರಕೆ ಹೇಳಿದರು.
ಉದ್ಯಮಿ ಮನೋಹರ್ ಶೆಟ್ಟಿ ಮಾತನಾಡಿ, ಪಡುಬಿದ್ರಿ ಹಾಗೂ ಕಾಪು ಬೀಚ್‌ಗಳಿಗೆ ರಾಷ್ಟ್ರೀಯ ಹೆದ್ದಾರಿಯಿಂದ ನೇರ ಸಂಪರ್ಕ ರಸ್ತೆಗಳ ಅಗತ್ಯವಿದ್ದು, ಈ ಮೂಲಕ ಇನ್ನಷ್ಟು ಪ್ರವಾಸಿಗರನ್ನು ಸೆಳೆಯಲು ಕಾರಣವಾಗುತ್ತದೆ. ಅಲ್ಲದೆ ಪಡುಬಿದ್ರಿ-ಪಡುಕರೆ ನೇರ ಸಂಪರ್ಕ ರಸ್ತೆಯಾಗಬೇಕಾಗಿದೆ ಈಗಾಗಲೇ ಶಾಸಕರು ಈ ಬೇಡಿಕೆಗೆ ಸ್ಪಂಧಿಸಿದ್ದು, ಶೀಘ್ರದಲ್ಲೇ ಈ ಎರಡು ಯೋಜನೆಗಳನ್ನು ಕೈಗೆತ್ತಿಕೊಳ್ಳಬೇಕು ಎಂದರು.
ಕಾಪು ಬೀಚ್ ಅಭಿವೃದ್ಧಿ ಸಮಿತಿಯ ಯತೀಶ್ ಬೈಕಂಪಾಡಿ ಅಧ್ಯಕ್ಷತೆ ವಹಿಸಿದ್ದರು. ಕಾಪು ಪುರಸಭಾ ಅಧ್ಯಕ್ಷೆ ಸೌಮ್ಯ ಸಂಜೀವ, ಕಾಪು ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕಾಪು ದಿವಾಕರ ಶೆಟ್ಟಿ, ಮೀನುಗಾರಿಕಾ ಅಭಿವೃದ್ಧಿ ನಿಗಮದ ನಿರ್ದೇಶಕ ದೀಪಕ್ ಎರ್ಮಾಳ್, ಸಂಘಟಕ ನಾಗೇಶ್ ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಬಳಿಕ ಬೀಚ್ ಕ್ರಿಕೆಟ್ ಹಾಗೂ ಆಹಾರೋತ್ಸವ ನಡೆಯಿತು. ಬೀಚ್ ಕ್ರಿಕೆಟ್‌ನಲ್ಲಿ ದಕ, ಉಡುಪಿ ಜಿಲ್ಲೆಯ 26ತಂಡಗಳು ಭಾಗವಹಿಸಿದ್ದವು. ಮೂರು ದಿನಗಳ ಕಾಲ ನಡೆಯುವ ಕ್ರಿಕೆಟ್ ಪಂದ್ಯಾಟ ಭಾನುವಾರ ಸಂಜೆಯವರೆಗೂ ನಡೆಯಲಿದೆ.