ಬಂಟ್ವಾಳ : ಕುಡಿಯುವ ನೀರಿನ ಯೋಜನೆಗೆ ಶಿಲಾನ್ಯಾಸ

Update: 2017-04-15 14:50 GMT

ಬಂಟ್ವಾಳ, ಎ. 15: ನಾನು ಪ್ರತಿನಿಧಿಸುತ್ತಿರುವ ಬಂಟ್ವಾಳ ವಿಧಾನಸಭಾ ಕ್ಷೇತ್ರದ ಪ್ರತೀ ಮನೆಬಾಗಿಲಿಗೆ ದಿನದ 24 ಗಂಟೆಯೂ ಶುದ್ಧ ಕುಡಿಯುವ ನೀರು ಒದಗಿಸಬೇಕೆಂಬ ನನ್ನ ಬಹುವರ್ಷದ ಕನಸು ಈಗ ನನಸಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಹೇಳಿದರು.

ಮಾಣಿ, ಪೆರಾಜೆ, ಅನಂತಾಡಿ, ನೆಟ್ಲಮುಡ್ನೂರು, ಕಡೇಶ್ವಾಲ್ಯ ಮತ್ತು ಬರಿಮಾರು ಗ್ರಾಮಗಳಿಗೆ ಶುದ್ಧ ಕುಡಿಯುವ ನೀರು ಒದಗಿಸುವ 16.46 ಕೋಟಿ ರೂಪಾಯಿ ವೆಚ್ಚದ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡಿದರು.

 ಕ್ಷೇತ್ರದಲ್ಲಿ ಕರೋಪಾಡಿ, ಸರಪಾಡಿ, ಸಂಗಬೆಟ್ಟು, ನರಿಕೊಂಬು, ಮಾಣಿ ಹಾಗೂ ಸಜಿಪಮುನ್ನೂರಿನಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯನ್ನು ಅನುಷ್ಠಾನಗೊಳಿಸಲು ಗಮನ ಹರಿಸಿದ್ದೇನೆ. ಇದೀಗ ಎರಡು ಯೋಜನೆಗಳು ಕಾರ್ಯಾರಂಭಕ್ಕೆ ಸಿದ್ಧವಾಗಿದ್ದು, ಮಾಣಿ ಯೋಜನೆಗೆ ಇಂದು ಚಾಲನೆ ದೊರೆತಿದೆ. ಸರಪಾಡಿ ಹಾಗೂ ನರಿಕೊಂಬು ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ಕ್ಯಾಬಿನೆಟ್ ಅನುಮೋದನೆ ದೊರೆತಿದೆ ಎಂದು ಅವರು ಹೇಳಿದರು.

ಐದೂ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳು ಪೂರ್ಣಗೊಂಡರೆ ಕ್ಷೇತ್ರದ ಸುಮಾರು 35ಕ್ಕೂ ಹೆಚ್ಚು ಗ್ರಾಮದ ಪ್ರತೀ ಮನೆಬಾಗಿಲಿಗೆ ದಿನದ 24 ಗಂಟೆಯೂ ಶುದ್ಧ ಕುಡಿಯುವ ನೀರು ಲಭ್ಯವಾಗಲಿದೆ. ಇದು ಶುದ್ದ ನೀರು. ನೀರನ್ನು ಪೋಲು ಮಾಡಬೇಡಿ. ನಿಮಗೂ ಜವಬ್ದಾರಿ ಇದೆ. ನದಿಯಿಂದ ಶುದ್ಧೀಕರಿಸಿದ ನೀರು ಇದನ್ನು ಸಮರ್ಪಕವಾಗಿ ಬಳಸಿ ಎಂದು ಕಿವಿ ಮಾತು ಹೇಳಿದರು.

 ಈಗಾಗಲೇ ಬಂಟ್ವಾಳ ಪುರಸಭಾ ವ್ಯಾಪ್ತಿಯಲ್ಲಿ ಎರಡನೆ ಹಂತದ ಸಮಗ್ರ ಕುಡಿಯುವ ನೀರಿನ ಯೋಜನೆಯ ಕಾಮಗಾರಿ ಮುಕ್ತಾಯದ ಹಂತಕ್ಕೆ ತಲುಪಿದೆ. ಬಂಟ್ವಾಳದಲ್ಲಿ ಕುಡಿಯುವ ನೀರಿನ ಯೋಜನೆಯನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲಾಗುತ್ತಿರುವುದರಿಂದ ಬಂಟ್ವಾಳದಲ್ಲಿ ಕುಡಿಯುವ ನೀರಿಗೆ ಮುಂದಿನ ದಿನಗಳಲ್ಲಿ ಬರ ಬರುವುದಿಲ್ಲ. ನೀರಿಗಾಗಿ ಯಾವ ಯುದ್ಧವೂ ನಡೆಯುವುದಿಲ್ಲ ಎಂದರು. ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಬಂಟ್ವಾಳ ತಾಲೂಕು ಪಂಚಾಯತ್ ಅಧ್ಯಕ್ಷ ಚಂದ್ರಹಾಸ ಕರ್ಕೇರ, ಉಪಾಧ್ಯಕ್ಷ ಅಬ್ಬಾಸ್ ಅಲಿ, ಜಿಲ್ಲಾ ಪಂಚಾಯತ್ ಸದಸ್ಯರಾದ ಎಂ.ಎಸ್.ಮುಹಮ್ಮದ್, ಚಂದ್ರಪ್ರಕಾಶ್ ಶೆಟ್ಟಿ, ಮಮತಾ ಗಟ್ಟಿ, ಪದ್ಮಶೇಖರ್ ಜೈನ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ. ಎಂ.ಆರ್.ರವಿ, ತಾಲೂಕು ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷೆ ಧನಲಕ್ಷ್ಮೀ ಸಿ.ಬಂಗೇರ, ಜಿಲ್ಲಾ ಕೆಡಿಪಿ ಸದಸ್ಯೆ ಜಯಂತಿ ಪೂಜಾರಿ, ತಾಪಂ ಸದಸ್ಯರಾದ ಆದಂ ಕುಂಞಿ, ಮಂಜುಳಾ ಕುಶಲ ಎಂ, ಗೀತಾ ಚಂದ್ರಶೇಖರ್, ಬಂಟ್ವಾಳ ಎಪಿಎಂಸಿ ಅಧ್ಯಕ್ಷ ಪದ್ಮನಾಭ ರೈ, ವಿವಿಧ ಗ್ರಾಮಪಂಚಾಯತ್ ಅಧ್ಯಕ್ಷರುಗಳಾದ ಮಮತಾ ಎಸ್.ಶೆಟ್ಟಿ, ಪುಷ್ಪಾ ಪೆರಾಜೆ, ವಿಜಯ, ಶ್ಯಾಮಲ ಶೆಟ್ಟಿ, ವಸಂತ, ಗ್ರಾಮೀಣಾಭಿವೃದ್ಧಿ ಮತ್ತು ನೈರ್ಮಲ್ಯ ಇಲಾಖೆಯ ಅಧೀಕ್ಷಕ ಅಭಿಯಂತರರಾದ ರಂಗನಾಥ್ ನಾಯಕ್, ಅಧಿಕಾರಿ ಡಿ.ಆರ್ ನಾಯಕ್, ಗುತ್ತಿಗೆದಾರ ಅನಿಲ್ ಕುಮಾರ್ ಶೆಟ್ಟಿ, ತಾಪಂ ಕಾರ್ಯನಿರ್ವಹಣಾಧಿಕಾರಿ ಸಿಪ್ರಿಯಾನ್ ಮಿರಾಂದ ಉಪಸ್ಥಿತರಿದ್ದರು.

 ಜಿಲ್ಲಾಪಂಚಾಯತ್ ಸದಸ್ಯೆ ಮಂಜುಳಾ ಮಾವೆ ಸ್ವಾಗತಿಸಿ, ಪ್ರಸಾವನೆ ಗೈದರು. ಗ್ರಾಮೀನ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪವಿಭಾಗದ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಗಿರೀಶ್ ಕೆ.ಪಿ. ಯೋಜನಾ ವರದಿ ಮಂಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News