ಕಾನೂನು ತನ್ನ ಕ್ರಮ ತೆಗೆದುಕೊಳ್ಳಲಿದೆ: ಪ್ರಮೋದ್
ಉಡುಪಿ, ಎ.15: ವ್ಯಕ್ತಿಯೊಬ್ಬರಿಗೆ ಹಲ್ಲೆ ನಡೆಸಿರುವುದಕ್ಕಾಗಿ ಮಲ್ಪೆ ಠಾಣೆಯ ಕಾನ್‌ಸ್ಟೇಬಲ್ ಪ್ರಕಾಶ್‌ರನ್ನು ಅಮಾನತುಗೊಳಿಸಿರುವುದರಲ್ಲಿ ತನ್ನ ಯಾವುದೇ ಕೈವಾಡವಿರಲಿಲ್ಲ. ಈಗ ಅಮಾನತು ರದ್ದಾಗಿರುವುದಕ್ಕೂ ಸಂಬಂಧವಿಲ್ಲ ಎಂದಿರುವ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್, ಪ್ರಕರಣದ ಕುರಿತು ಸರಿಯಾಗಿ ತನಿಖೆ ನಡೆಸಿ ಎಂದಷ್ಟೇ ತಾನು ಹೇಳಿದ್ದಾಗಿ ತಿಳಿಸಿದರು.
ಉಡುಪಿಯಲ್ಲಿಂದು ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಪ್ರಮೋದ್ ರನ್ನು, ಪ್ರಕಾಶ್ ಅಮಾನತು ರದ್ದಾಗಿರುವ ಕುರಿತು ಪ್ರಶ್ನಿಸಿದಾಗ ಮೇಲಿನಂತೆ ನುಡಿದರು. ಈ ವಿಷಯದಲ್ಲಿ ಕಾನೂನು ತನ್ನದೇ ಕ್ರಮ ತೆಗೆದುಕೊಳ್ಳಲಿದೆ ಎಂದರು.
ಕಾಂಗ್ರೆಸ್‌ಗೆ ಲಾಭ: ಗುಂಡ್ಲುಪೇಟೆ ಮತ್ತು ನಂಜನಗೂಡು ಉಪಚುನಾವಣೆ ಗಳಲ್ಲಿ ಜೆಡಿಎಸ್ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸದೇ ಇದುದರಿಂದ ಕಾಂಗ್ರೆಸ್‌ಗೆ ಲಾಭವಾಗಿದೆ. ಈ ಕ್ಷೇತ್ರದ ಜನತೆ ಕಾಂಗ್ರೆಸ್‌ನ್ನು ಗೆಲ್ಲಿಸುವ ನಿರ್ಧಾರ ಮಾಡಿದ್ದರಿಂದ ಎರಡೂ ಕ್ಷೇತ್ರಗಳು ಕಾಂಗ್ರೆಸ್ ಜಯಭೇರಿ ಬಾರಿಸಿದೆ ಎಂದು ರಾಜ್ಯ ಸಭಾ ಸದಸ್ಯ ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿ ಆಸ್ಕರ್ ಫೆರ್ನಾಂಡೀಸ್ ಹೇಳಿದ್ದಾರೆ.
ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು2018ರ ಚುನಾವಣೆಯನ್ನು ಸಿದ್ಧರಾಮಯ್ಯ ನೇತೃತ್ವದಲ್ಲಿ ಎದುರಿಸಲಿದ್ದು, ಚುನಾವಣಾ ರೇಸ್‌ನಲ್ಲಿ ಕಾಂಗ್ರೆಸ್ ಮುಂದಿದೆ ಎಂದರು. ಚುನಾವಣಾ ಪ್ರಣಾಳಿಕೆಯ ಶೇ.95ರಷ್ಟು ಭರವಸೆಗಳನ್ನು ಪಕ್ಷ ಈಡೇರಿಸಿದೆ ಎಂದರು.
ತುಳು ಭಾಷೆಯನ್ನು ಸಂವಿಧಾನದ ಎಂಟನೇ ಪರಿಚ್ಛೇಧಕ್ಕೆ ಸೇರ್ಪಡೆಗೊ ಳಿಸುವ ಪ್ರಯತ್ನದ ಕುರಿತು ಪ್ರಶ್ನಿಸಿದಾಗ, ರಾಜ್ಯಸಭೆಯಲ್ಲಿ ಹರಿಪ್ರಸಾದ್ ಅವರು ಖಾಸಗಿ ಮಸೂದೆ ಮಂಡಿಸಿದ್ದು, ಈ ಬಗ್ಗೆ ಚರ್ಚೆ ನಡೆಯಿತು ಎಂದರು. ತುಳುವರು ತೀವ್ರ ಹೋರಾಟ ನಡೆಸಿದರೆ ಮಾತ್ರ ಈ ಪ್ರಯತ್ನ ಯಶಸ್ವಿಯಾಗ ಬಹುದು ಎಂದರು.